ಮೂಲ್ಕಿ: ನಾದಸ್ವರದ ಸಂಗೀತವು ಶುಭದ ಸಂಕೇತವಾಗಿದ್ದು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ನಾದಸ್ವರವು ಭಾರತದ ಅತ್ಯಂತ ಪುರಾತನ ಮತ್ತು ಪವಿತ್ರವಾದ ಸಂಗೀತ ವಾದ್ಯಗಳಲ್ಲಿ ಒಂದಾಗಿದ್ದು ತನ್ನ ಗಂಭೀರ ಮತ್ತು ಮಧುರ ನಾದದಿಂದ ಎಲ್ಲರ ಮನಸ್ಸನ್ನು ಸೆಳೆಯುತ್ತದೆ. ದೇವಾಲಯಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ನಾದಸ್ವರಕ್ಕೆ ವಿಶೇಷ ಸ್ಥಾನವಿದೆ ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ನಮ್ಮ ಸಾಂಪ್ರದಾಯಿಕ ಸಂಗೀತ ಮತ್ತು ವಾದ್ಯಗಳನ್ನು ಗೌರವಿಸಿ, ಮುಂದಿನ ಪೀಳಿಗೆಗೂ ಪರಿಚಯಿಸಬೇಕು ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ನಾಗೇಶ್ ಬಪ್ಪನಾಡು ಅವರು ಶ್ರೀ ಚಂದ್ರಶೇಖರ ಸ್ವಾಮೀಜಿ ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಿ ಮಾತನಾಡಿ, ಆಧ್ಯಾತ್ಮಿಕ ವಿಶ್ವ ಗುರುಗಳಾಗಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದ ವತಿಯಿಂದ ನಡೆಯುತ್ತಿರುವ ಸಾಧಕರಿಗೆ ಗೌರವ, ಸೇವಾ ಕಾರ್ಯಕ್ರಮಗಳು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ದೊರಕಿಸಲು ನಡೆಯುತ್ತಿರುವ ಪ್ರಯತ್ನ ಅಭಿನಂದನೀಯ. ಸ್ವಾಮೀಜಿಯವರ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲೆಂದು ಹಾರೈಸಿದರು. ಈ ಸಂದರ್ಭ ಖ್ಯಾತ ಜ್ಯೋತಿಷಿ ವಿಶ್ವನಾಥ ಭಟ್, ರಂಗಕರ್ಮಿ ಚಂದ್ರಶೇಖರ ಸುವರ್ಣ, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕ ಪುನೀತ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.