ಹರಪನಹಳ್ಳಿಯಲ್ಲಿ ಬಹುರೂಪಿ ಗಣೇಶೋತ್ಸವ ಸಂಭ್ರಮ

KannadaprabhaNewsNetwork | Published : Sep 9, 2024 1:41 AM

ಸಾರಾಂಶ

ಬಜರಂಗದಳ ಕಾರ್ಯಕರ್ತರು ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ 9 ಅಡಿ ಎತ್ತರವಿದೆ.

ಹರಪನಹಳ್ಳಿ: ಗಣಪತಿಯ ಕಲ್ಪನೆ ಎಷ್ಟು ಪ್ರಾಚೀನವೋ ಅಷ್ಟೇ ಆಕರ್ಷಕ ಆತನ ಪ್ರತಿಮಾ ಲಕ್ಷಣಗಳು. ವಿಘ್ನ ನಿವಾರಕನ ಹಬ್ಬ ತಾಲೂಕಿನಲ್ಲಿ ಬಹುರೂಪಿ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ.

ಹಿಂದೂ ಮಹಾಗಣಪತಿ:

ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಬಳಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ 9 ಅಡಿ ಎತ್ತರವಿದ್ದು, ವಿರಾಜಮಾನವಾಗಿರುವ ಸುಂದರ ಗಣೇಶಮೂರ್ತಿ ಇದೆ. ಭಕ್ತರನ್ನು ಆಕರ್ಷಿಸುತ್ತಲಿದೆ.

ವಿಜಯದಶಮಿ ಕಥಾ ಪ್ರಸಂಗ:

ಪಟ್ಟಣದ ಮೇಗಳಪೇಟೆಯ ಗುರುಕೆಂಪೇಶ್ವರ ಯುವಕ ಸಮಿತಿಯವರು ಸ್ಥಾಪಿಸಿರುವ ಗಣೇಶ ಸಹ ಸುಂದರವಾಗಿದೆ. ನವದುರ್ಗೆಯರ ವೈಭವದ ವಿಜಯದಶಮಿ ಕಥಾ ಪ್ರಸಂಗವನ್ನು ಪ್ರಚುರ ಪಡಿಸುತ್ತದೆ. ಸಂಜೆ ಈ ಕಥೆಗೆ ಸಂಬಂಧಪಟ್ಟ ಮೂರ್ತಿಗಳು ಚಲಿಸುತ್ತಾ ಕಥೆ ಹೇಳುತ್ತವೆ. ಈ ಗಣೇಶ ನೋಡಲು ಭಕ್ತರು ಮುಗಿಬೀಳುತ್ತಾರೆ.

ಕೋಟಿಲಿಂಗ ಮಹಾಕ್ಷೇತ್ರ:

ಇಲ್ಲಿಯ ಕೊಟ್ಟೂರು ರಸ್ತೆಯ ಮುಖ್ಯ ಅಂಚೆಕಚೇರಿ ಬಳಿ ಈಶ್ವರ ವಿನಾಯಕ ಸಮಿತಿಯವರು ಸ್ಥಾಪಿಸಿರುವ ಶಿವಮಂದಿರ ಮಹಾರಾಜ ಗಣಪತಿ ಜನರನ್ನು ಸೆಳೆಯುತ್ತದೆ. ಕೋಟಿ ಲಿಂಗ ಮಹಾಕ್ಷೇತ್ರ ಕಥಾ ಪ್ರಸಂಗ ಸಂಜೆ ನಡೆಯುತ್ತದೆ. ಇಲ್ಲೂ ಜನರು ವೀಕ್ಷಣೆಗೆ ಮುಗಿ ಬೀಳುತ್ತಾರೆ.

ಸಂಸ್ಕೃತ ಸಭಾ ಗಣಪ:

ಸಂಸ್ಕೃತ ಸಭಾ ಸಂಘಟನೆಯವರು ಇಲ್ಲಿಯ ಗೋಕರ್ಣೇಶ್ವರ ದೇವಸ್ಥಾನದ ಬಳಿ ಸ್ಥಾಪಿಸಿರುವ ಗಣೇಶ ಮೂರ್ತಿ ಸುಂದರವಾಗಿದ್ದು, ಇಲ್ಲಿ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ ಹಾಗೂ ಇವರು ಕೊಟ್ಟೂರು ರಸ್ತೆಯ ವಿಶ್ವಾಸ ಕ್ಲಿನಿಕ್‌ ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ್ದರು. ಗಣಪನ ನೋಡಲು ಬರುವ ಭಕ್ತರಿಗೆ ಸಸಿಗಳನ್ನು ವಿತರಿಸಿ ಹಬ್ಬಕ್ಕೆ ಮೆರಗು ನೀಡಿದ್ದಾರೆ.

ಲಿಂಗಗಳ ಮಧ್ಯೆ ಸುಂದರ ಗಣಪ:

ಕೊಟ್ಟೂರು ರಸ್ತೆಯ ಮಟ್ಟೇರ ಓಣಿಯಲ್ಲಿ ವಿನಾಯಕ ಯುವಕ ಸಂಘದವರು ಸ್ಥಾಪಿಸಿರುವ ಗಣೇಶ ಮೂರ್ತಿಯ ಅಕ್ಕ ಪಕ್ಕ ಧಾನ್ಯಗಳಿಂದ ಮೂಡಿದ 11 ಲಿಂಗಗಳು ಆಕರ್ಷಣೀಯವಾಗಿವೆ.

ರೇಣುಕಾಚಾರ್ಯ ಕಲ್ಯಾಣ ಮಂಟಪದ ಬಳಿ, ಗಂಗಾದರ ಗುರುಮಠ ಕಾಂಪ್ಲೆಕ್ಸ್ ಬಳಿ, ಗೌಳೇರ ಓಣಿ, ಬಣಗಾರ ಪೇಟೆ, ಮಠದಕೇರಿ, ಜೋಯಿಸರ ಓಣಿ, ಪ್ರವಾಸಿ ಮಂದಿರ ವೃತ್ತದ ಬಳಿ ಹಾಗೂ ಕಂಚಿಕೇರಿ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಹಿಂದೂ ಮಹಾ ಗಣೇಶಮೂರ್ತಿಗಳು ಜನರನ್ನು ಸೆಳೆಯುವಲ್ಲಿ ಸಫಲವಾಗಿವೆ. ಹೀಗೆ ಹರಪನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತಹ ವಿವಿಧ ಸಂಘಟನೆಯ ಕಾರ್ಯಕರ್ತರು ಹೊಸ ಹುರುಪಿನೊಂದಿಗೆ ಬಹುರೂಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬಕ್ಕೆ ಕಳೆಕಟ್ಟಿಸಿದ್ದಾರೆ.

Share this article