ಸುರೇಶ ಯಳಕಪ್ಪನವರ
ನರೇಗಾ ಯೋಜನೆಯಡಿ ಪರಿಸರ ಸುಸ್ಥಿರತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಮುತ್ಕೂರು ಗ್ರಾಪಂನಲ್ಲಿ ತಾಪಂ ಇಒ ಆಡಳಿತಾಧಿಕಾರಿ ಇದ್ದರೂ ಕಿತ್ನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಘನ-ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗರ ಬಡಿದಂತಾಗಿದೆ.
ರಸ್ತೆ ಪಕ್ಕದಲ್ಲೇ ಕಸ:ಕಸದ ಸಂಗ್ರಹಣೆ, ಸಾಗಣೆ, ಸಂಸ್ಕರಣೆ, ಮರುಬಳಕೆ ಯಾವೊಂದು ಸಮರ್ಪಕವಾಗಿ ನಡೆಯದೇ ರಸ್ತೆಯ ಪಕ್ಕದಲ್ಲಿಯೇ ಕಸವನ್ನು ಬಿಸಾಕುತ್ತಿದ್ದಾರೆ. ಅಸಮರ್ಪಕ ಘನತ್ಯಾಜ್ಯ ವಿಲೇವಾರಿಯಿಂದಾಗಿ ಸಾರ್ವಜನಿಕ ಆರೋಗ್ಯಕ್ಕೆ ಪೆಟ್ಟು ಬೀಳುತ್ತದೆ. ಘನತ್ಯಾಜ್ಯ ವಿಲೇವಾರಿ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಕಿತ್ನೂರು ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕಾರ ಮಾಡಿರುವುದರಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ. ಗ್ರಾಪಂನಲ್ಲಿ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಅಧಿಕಾರಿಗಳ ಆಡಳಿತ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮೂರು ವರ್ಷದಿಂದ ನಿರ್ಮಾಣ ಮಾಡುತ್ತಿರುವ ವಿಲೇವಾರಿ ಘಟಕ ಎಂದು ಪೂರ್ಣಗೊಳ್ಳಲಿದೆ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಮುತ್ಕೂರು ಗ್ರಾ.ಪಂ.ಗೆ ಮೊದಲು ಚುನಾವಣೆ ಆಗಬೇಕು. ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನೂರಾರು ಸಮಸ್ಯೆಗಳಿವೆ. ತೆಲುಗೋಳಿ ಗ್ರಾಮದಲ್ಲಿ ಶೌಚಾಲಯ, ದೋಬಿಘಾಟ್ ನಿರ್ಮಾಣ ಮಾಡಿ ಎಂದು ಕೇಳಿಕೊಂಡರು, ಅಧಿಕಾರಿಗಳು ಗಮನಹರಿಸಿಲ್ಲ. ಘನತ್ಯಾಜ್ಯ ವಿಲೇವಾರಿ ಘಟಕವನ್ನು ಕೂಡಲೇ ನಿರ್ಮಿಸಿ ಕಸ ಸಂಗ್ರಹಕ್ಕೆ ಅನುಕೂಲ ಮಾಡಬೇಕು ಎನ್ನುತ್ತಾರೆ ತೆಲುಗೋಳಿ ಗ್ರಾಮದ ಯುವ ಮುಖಂಡ ಎಚ್.ಶಿವರಾಜ.