ಮುಮ್ತಾಜ್‌ ಆಲಿ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮಹಿಳೆ, ಪತಿಯ ಬಂಧನ

KannadaprabhaNewsNetwork |  
Published : Oct 09, 2024, 01:41 AM IST
32 | Kannada Prabha

ಸಾರಾಂಶ

ಮಂಗಳೂರಿನ ಉದ್ಯಮಿ, ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಝ್‌ ಆಲಿ (52) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಉದ್ಯಮಿ, ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಝ್‌ ಆಲಿ (52) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಮಂಗಳೂರು ಉತ್ತರ ಉಪವಿಭಾಗದ ಪೊಲೀಸ್‌ ಉಪ ಆಯುಕ್ತ ಮನೋಜ್‌ ಕುಮಾರ್ ನೇತೃತ್ವದ ಪೊಲೀಸರ ತಂಡ ಪ್ರಕರಣದ ಪ್ರಮುಖ ಆರೋಪಿ ಸುರತ್ಕಲ್‌ ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಆಯಿಷಾ ರೆಹಮತ್‌(41), ಆರೋಪಿ ಆಕೆಯ ಪತಿ ಶೊಯಿಬ್‌ ಇವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಅಬ್ದುಲ್‌ ಸತ್ತಾರ್‌, ಆತನ ಕಾರು ಚಾಲಕ ಸಿರಾಜ್‌, ಖಲಂದರ್‌ ಶಾಫಿ, ಮುಸ್ತಾಫ ಇವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ರೆಹಮತ್‌ ಮತ್ತು ಆಕೆಯ ಪತಿ ಶೊಯಿಬ್‌ನನ್ನು ಸೋಮವಾರ ಸಂಜೆ ಕಲ್ಲಡ್ಕದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿ ಮಮ್ತಾಝ್‌ ಆಲಿ ಅವರ ಸಹೋದರ ಹೈದರ್‌ ಆಲಿ ಎಂಬವರು ರೆಹಮತ್, ಅಬ್ದುಲ್ ಸತ್ತಾರ್, ಕಲಂದರ್ ಶಾಫಿ, ಮುಸ್ತಫಾ, ಶೊಯಿಬ್‌, ಸಿರಾಜ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕೆ ವ್ಯಕ್ತಪಡಿಸಿ ಮೃತರ ಸಹೋದರ ಹೈದರಾಲಿ ಕಾವೂರು ಪೊಲೀಸರಿಗೆ ದೂರು ನೀಡಿದ್ದರು.ಅವರ ದೂರು ಆಧರಿಸಿ ಐಪಿಸಿ 308(2), 308(5), 352, 351(2) 190 ಬಿಎನ್‌ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಪ್ರಮುಖ ಆರೋಪಿ ಆಯೆಷಾ ರೆಹ್ಮತ್‌, ಮುಮ್ತಾಜ್‌ ಆಲಿ ನಡೆಸುತ್ತಿದ್ದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಆಲಿ ಜೊತೆ ಸಮೀಪದ ಒಡನಾಟ ಇರಿಸಿಕೊಂಡಿದ್ದರು. ಇದೇ ನೆಪದಲ್ಲಿ ಆಲಿಯನ್ನು ಬ್ಲಾಕ್‌ಮೇಲ್‌ ಮಾಡಲು ಮುಂದಾಗಿದ್ದರು. ಇದಕ್ಕೆ ಆಕೆಯ ಪತಿಯ ಸಹಕಾರವೂ ಸಿಕ್ಕಿತ್ತು. ಅಲ್ಲದೆ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಸತ್ತಾರ್‌ ಮತ್ತು ಮರಳು ದಂಧೆಕೋರ ಶಾಫಿ ಸೇರಿ ಆಲಿಯನ್ನು ಹಣಕ್ಕಾಗಿ ಪೀಡಿಸಿದ್ದರು. ಕಳೆದ ಮೂರ್ನಾಲ್ಕು ತಿಂಗಳಿಂದ 50 ಲಕ್ಷ ರು. ಮೊತ್ತವನ್ನು ಆರೋಪಿಗಳು ಆಲಿಯಿಂದ ಪೀಕಿಸಿದ್ದರು. ಈ ತಂಡ ಮತ್ತೆ 2 ಕೋಟಿ ರು.ಗಳ ಬೇಡಿಕೆ ಇರಿಸಿತ್ತು.

ಮುಮ್ತಾಜ್‌ ಆಲಿ ತನ್ನ ಮಗುವಿನ ಜೊತೆ ಆಟವಾಡುತ್ತಿದ್ದ ವಿಡಿಯೋ ಮಾಡಿ ಅದನ್ನು ರೆಹ್ಮತ್‌ ಆಲಿಯವರ ಕುಟುಂಬಕ್ಕೆ ಕಳುಹಿಸಿದ್ದರು. ಈ ಕಾರಣದಿಂದ ಆಲಿಯ ಕುಟುಂಬದಲ್ಲಿ ಕ್ಲೇಷ ಉಂಟಾಗಿತ್ತು. ಈ ಎಲ್ಲ ಕಾರಣಗಳಿಂದ ಮುಮ್ತಾಜ್‌ ಆಲಿ ಸಾಯುವ ನಿರ್ಧಾರಕ್ಕೆ ಬಂದು ಭಾನುವಾರ ನಸುಕಿನ ಜಾವ ಐಷಾರಾಮಿ ಕಾರಿನಲ್ಲಿ ಮನೆಯಿಂದ ಹೊರಟ ಆಲಿ, ಮನೆ ಮಂದಿಗೆ ಸಾವಿಗೀಡಾಗುತ್ತಿರುವುದಾಗಿ ವಾಯ್ಸ್‌ ಸಂದೇಶ ಕಳುಹಿಸಿ, ಕೂಳೂರು ಸೇತುವೆಯಲ್ಲಿ ಕಾರು ನಿಲ್ಲಿಸಿ, ನದಿಗೆ ಹಾರಿದ್ದರು. ಅವರ ಶವ ಸೋಮವಾರ ಪತ್ತೆಯಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ