ಸಂತೋಷ ದೈವಜ್ಞ
ತೀವ್ರ ಬರದ ನಡುವೆಯೂ ಮಳೆಗಾಲ ಮುಗಿದು ಬತ್ತ ಕಟಾವು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಯಲು ಸೀಮೆ ಪ್ರದೇಶದ ಕುರಿಗಳ ಹಿಂಡು ತಂಡೋಪತಂಡವಾಗಿ ಮುಂಡಗೋಡ ಕಡೆಗೆ ಪಾದಾರ್ಪಣೆ ಮಾಡುತ್ತಿದ್ದು, ಎಲ್ಲಿ ನೋಡಿದರೂ ಈಗ ಕುರಿಗಳ ಹಿಂಡು ಕಾಣಸಿಗುತ್ತಿವೆ.
ಮಳೆಗಾಲ ಮುಗಿದು ಬತ್ತದ ಸುಗ್ಗಿ ಆರಂಭವಾಗುತ್ತಿದ್ದಂತೆ ಕುರುಬರು ತಮ್ಮ ನೂರಾರು ಸಂಖ್ಯೆಯ ಕುರಿಗಳೊಂದಿಗೆ ಊರೂರು ಅಲೆದು ರೈತರ ಗದ್ದೆಯಲ್ಲಿ ತಮ್ಮ ಕುರಿಗಳೊಂದಿಗೆ ಟಿಕಾಣಿ ಹೂಡಿ ರೈತರಿಂದ ಧಾನ್ಯ ಪಡೆಯುವ ಸಂಪ್ರದಾಯ ಮೊದಲಿನಿಂದಲೂ ಬಂದಿದೆ. ಅದೇ ರೀತಿ ಈ ವರ್ಷವು ಕೂಡ ಕುರುಬರು ಕುರಿಗಳ ಹಿಂಡಿನೊಂದಿಗೆ ಕುಟುಂಬ ಸಮೇತ ಕುದುರೆ ಹಾಗೂ ನಾಯಿಗಳೊಂದಿಗೆ ಈ ಭಾಗಕ್ಕೆ ಲಗ್ಗೆ ಇಡುತ್ತಿದ್ದಾರೆ.ನಿಪ್ಪಾಣಿ, ಸಂಕೇಶ್ವರ, ಅಥಣಿ, ಗೋಕಾಕ, ಚಿಕ್ಕೋಡಿ ಮುಂತಾದ ಕಡೆಯ ಕುರುಬರು ಮಳೆಗಾಲ ಮುಗಿಯುತ್ತಿದ್ದಂತೆ ಗುಳೇ ಹೊರಟು ಈ ಭಾಗಕ್ಕೆ ಲಗ್ಗೆ ಇಡುತ್ತಾರೆ. ಪ್ರತಿ ವರ್ಷ ಇಲ್ಲಿಯ ಪ್ರಧಾನ ಬೆಳೆ ಬತ್ತದ ಫಸಲು ಬರುವ ಈ ವೇಳೆಯಲ್ಲಿ ಈ ಭಾಗ ಪ್ರವೇಶಿಸುವ ಕುರುಬರು, ಕೆಲ ತಿಂಗಳುಗಳ ಕಾಲ ತಿರುಗಾಡಿ ತಮ್ಮ ಕುರಿಗಳ ಸಂತಾನೋತ್ಪತ್ತಿ ಮಾಡಿಕೊಂಡು ಮಳೆಗಾಲ ಆರಂಭವಾಗುವ ಮುನ್ನ ಮರಳಿ ತಮ್ಮ ಊರಿಗೆ ಹೋಗುವುದು ಸಾಮಾನ್ಯ.
ಕುರುಬರು ವರ್ಷದಲ್ಲಿ ೬ ತಿಂಗಳು ಹಗಲು, ರಾತ್ರಿ, ಚಳಿ, ಗಾಳಿ, ಬಿಸಿಲು ಎಂಬುವುದನ್ನು ಲೆಕ್ಕಿಸದೇ ವರ್ಷದಲ್ಲಿ ಅರ್ಧ ಕಾಲ ತಮ್ಮ ಬಳಗ ಕಟ್ಟಿಕೊಂಡು ಊರು, ಕೆರೆ ಅಲೆಯುತ್ತಾರೆ. ನೂರಾರು ಸಂಖ್ಯೆ ಕುರಿಗಳೊಂದಿಗೆ ಇಲ್ಲಿಗೆ ಆಗಮಿಸುವ ಇವರು ಒಂದಕ್ಕೆ ನಾಲ್ಕು ಪಟ್ಟು ಕುರಿಗಳ ಸಂತತಿ ಹೆಚ್ಚಿಸಿಕೊಂಡು ಮರಳುತ್ತಾರೆ. ಅಲ್ಲದೆ ರೈತರ ಭೂಮಿಯಲ್ಲಿ ಬೀಡು ಬಿಡಲು ದಿನಕ್ಕೆ ಇಂತಿಷ್ಟು ದವಸ-ಧಾನ್ಯದ ಫಸಲು ರೈತರಿಂದ ಪಡೆದುಕೊಳ್ಳುತ್ತಾರೆ. ಕುರಿಗಳ ತಂಡ ಕೃಷಿ ಗದ್ದೆಯಲ್ಲಿ ವಾಸ ಮಾಡಿ ಮೂತ್ರ ಹಾಗೂ ಹಿಕ್ಕಿ ಹಾಕುವುದರಿಂದ ಗೊಬ್ಬರ ದೊರೆತಂತಾಗುತ್ತದೆ. ಹಾಗಾಗಿ ರೈತರೂ ಕೂಡ ಕುರಿಗಳ ತಂಡವನ್ನು ವಾಸ ಮಾಡಿಸಿಕೊಳ್ಳಲು ಮುಗಿಬಿಳುತ್ತಾರೆ.