ಮುಂಡರಗಿ: ಡಾ. ಅನ್ನದಾನೀಶ್ವರ ಸ್ವಾಮೀಜಿಯವರು ಆಡಂಬರ, ಬಿಗುವು- ಬಿನ್ನಾಣವಿಲ್ಲದ ಜೀವನ ಇತರರಿಗೆ ಮಾದರಿಯಾಗಿದೆ. ನಯಾಪೈಸೆ ಕೊಡಬೇಕಾದರೂ, ಇತರರಿಂದ ಬರಬೇಕಾದರೂ ಅದನ್ನು ಲೆಕ್ಕ ಇಡುವ ಮತ್ತು ಕೇಳುವ ಪ್ರವೃತ್ತಿಯನ್ನು ಅವರಿಂದ ಕಲಿಯಬೇಕು ಎಂದು ಪತ್ರಕರ್ತ ಅಂದಾನಪ್ಪ ವಿಭೂತಿ ತಿಳಿಸಿದರು.
ಕರ್ನಾಟಕದ ಮಠಮಾನ್ಯಗಳಲ್ಲಿಯೇ ಆಚಾರ- ವಿಚಾರ ಶುದ್ಧವಾಗಿದ್ದು, ತ್ರಿಕಾಲ ಪೂಜಾನಿಷ್ಠರಾಗಿ, ಸಾಹಿತಿಗಳಾಗಿ, ಉತ್ತಮ ಆಡಳಿತಗಾರರಾಗಿ, ತಮ್ಮ ಮಠದ ಇತಿಹಾಸವನ್ನು ಅರಿತವರಾಗಿ ಭಕ್ತರ ಮನದಲ್ಲಿ ಉಳಿದುಕೊಂಡವರೆಂದರೆ ಅದು ಅನ್ನದಾನೀಶ್ವರ ಸ್ವಾಮೀಜಿಯವರು. ಅವರ ಜೀವನ ಇತರರಿಗೆ ಅನುಕರಣೀಯ ಎಂದರು.
ಬರದ ನಾಡಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಶಾಲಾ- ಕಾಲೇಜುಗಳನ್ನು ಪ್ರಾರಂಭಿಸಿ ಲಕ್ಷಾಂತರ ಬಡ ಮಕ್ಕಳಿಗೆ ದಾರಿದೀಪವಾಗಿದ್ದಾರೆ. ಅವರು 170ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಶ್ರೀಗಳ ಕೃತಿಗಳ ಮೇಲೆ 4 ಜನರು ಪಿಎಚ್‌ಡಿ ಮತ್ತು 4 ಜನರು ಎಂಪಿಲ್ ಪದವಿ ಪಡೆದಿದ್ದಾರೆ ಎಂದರು.ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಬಸವಣ್ಮನವರು ೧೨ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಸಾಮಾಜಿಕ ಸುಧಾರಕ ಮತ್ತು ಶಿವ ಕೇಂದ್ರೀಕೃತ ಭಕ್ತ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಆಚರಿಸುವುದರ ಮೂಲಕ ಬಸವಣ್ಣ ಮಾದರಿಯಾದರು ಎಂದರು.
ಕಾರ್ಯಕ್ರಮದಲ್ಲಿ ಬಿಇಒ ಗಂಗಾಧರ ಅಣ್ಣಿಗೇರಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಜಾಫರ ಬಚ್ಚೇರಿ, ಮನೋಹರ, ಹನುಮರಡ್ಡಿ ಇಟಗಿ ಅವರಿಗೆ ಗುರುರಕ್ಷೆ ಜರಗಿತು. ಸನ್ಮಾನಿತರ ಪರವಾಗಿ ಬಿಇಒ ಗಂಗಾಧರ ಅಣ್ಣಿಗೇರಿ ಮಾತನಾಡಿದರು. ಶ್ರೀಗಳ 86ನೇ ಜನ್ಮದಿನೋತ್ಸವದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಗದಗ ಬಸವೇಶ್ವರ ರಕ್ತ ಭಂಡಾರದ ಸಹಯೋಗದಲ್ಲಿ ರಕ್ತದಾನ ಶಿಬಿರ, ಶ್ರೀ ಜ.ಅ.ಅಕ್ಕನ ಬಳಗದ ತಾಯಂದಿಂರಿಂದ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಸಿ ನೆಡುವ ಕಾರ್ಯಕ್ರಮಗಳು ಜರುಗಿದವು.