ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಮತ್ತು ರಸ್ತೆಗೆ ಭೂಮಿ ಕಳೆದುಕೊಂಡ ರೈತ ಸಂತ್ರಸ್ತರು ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ವಿರೂಪಾಕ್ಷಪ್ಪ ಅಲ್ಲಿಪುರ ಮಾತನಾಡಿ, ಕಳೆದ 15 ವರ್ಷಗಳಿಂದ ಈ ವಿಶೇಷ ಭೂಸ್ವಾಧೀನಾಧಿಕಾರಿಗೆ ಪರಿಹಾರಕ್ಕೆ ಅಲೆದು ಸುಸ್ತಾಗಿದ್ದೇವೆ. ಕಳೆದುಕೊಂಡ ಭೂಮಿಗೂ ಪರಿಹಾರ ಇಲ್ಲ. ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಕಾಲುವೆ ತುಂಬೆಲ್ಲ ಹೂಳು ತುಂಬಿದೆ. ರೈತರಿಗೆ ಹನಿ ನೀರಿಲ್ಲ. ಪರಿಸ್ಥಿತಿ ಹೀಗಾದರೆ ನಮ್ಮ ಜಮೀನು ನಮಗೆ ಕೊಡಿ ನಿಮ್ಮ ಪುಡಿಗಾಸು ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಖಾಯಂ ಅಧಿಕಾರಿ ನಿಯೋಜನೆ ಮಾಡದ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ರೈತರನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ. ಮುಂಡವಾಡ, ಹಮ್ಮಿಗಿ, ಗುಮ್ಮಗೋಳ ಗ್ರಾಮದ 46 ಎಕರೆ ಭೂಮಿಗೆ ₹4 ಕೋಟಿ ಪರಿಹಾರ ನೀಡಬೇಕಿದೆ. ಈ ಕುರಿತು ಕಡತಗಳನ್ನು ಕಳೆದ 6 ತಿಂಗಳ ಹಿಂದೆ ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಿಂದ ಬೆಳಗಾವಿಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ (ಆರ್ ಆ್ಯಂಡ್ ಆರ್) ಇಲಾಖೆ, ವಿಶೇಷ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದೆ. ಆದರೆ ಅವುಗಳ ವಿಲೇವಾರಿ ಮಾಡದೇ ಅವರ ಕಚೇರಿಯಲ್ಲಿ ಧೂಳು ತಿನ್ನುತ್ತಿವೆ. ಇಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಬೆಳಗಾವಿ ಚಲೋ ಚಳವಳಿ ಮಾಡಿ ಅವರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ರೈತರ ಜಮೀನುಗಳಿಗೆ ನೀರುಣಿಸಲು 15 ಕಿ.ಮೀ. ಕಾಲುವೆ ನಿರ್ಮಿಸಿದ್ದು, 3-4 ಕಿ.ಮೀ. ಮಾತ್ರ ನೀರು ಬರುತ್ತಿದೆ. ಕೊನೆ ಭಾಗದ ರೈತರ ಜಮೀನುಗಳಿಗೆ ನೀರಿಲ್ಲ. ಹೊಸ ಗುಮ್ಮಗೋಳ ಗ್ರಾಮದ ರಸ್ತೆ ನಿರ್ಮಾಣಕ್ಕಾಗಿ 5 ವರ್ಷದ ಹಿಂದೆ ಭೂ ಭೂಸ್ವಾಧೀನವಾಗಿದೆ. ಆದರೆ ಈವರೆಗೂ ರೈತರಿಗೆ ಪರಿಹಾರವಿಲ್ಲ. ಈ ಸಮಸ್ಯೆಯನ್ನು ಬಗೆ ಹರಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಮುಂಡವಾಡದ ರೈತ ಎಸ್.ಎಸ್.ಪಾಟೀಲ್ ಪಟ್ಟು ಹಿಡಿದರು.
ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ಹನುಮಂತಪ್ಪ ಮಾತನಾಡಿ, ಎಡದಂಡೆ ಭಾಗದಲ್ಲಿ 2.65 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಇದರಲ್ಲಿ ಮುಂಡವಾಡ ಗ್ರಾಮದ ಸುತ್ತಮುತ್ತ 19.12 ಕಿ.ಮೀ. ಕಾಲುವೆ ಇದ್ದು, 12 ಕಿ.ಮೀ. ವರೆಗೂ ನೀರಿ ಹರಿಯುತ್ತಿದೆ. 5 ಸಾವಿರ ಎಕರೆಗೆ ನೀರು ಹರಿಯುತ್ತಿದೆ. ಜುಲೈ ತಿಂಗಳಲ್ಲಿ 46 ಎಕರೆಯ ₹4 ಕೋಟಿ ಪರಿಹಾರ ವಿತರಿಸಲು ಪ್ರಯತ್ನಿಸುತ್ತೇವೆ. ಕಾಲುವೆ ಹೂಳು ಮತ್ತು ಜಂಗಲ್ ಸ್ವಚ್ಛತೆ ಮಾಡಿ ಕಾಲುವೆಗೆ ನೀರು ಹರಿಯುವಂತೆ ಮಾಡುತ್ತೇವೆ. ಈಗಾಗಲೇ ರೈತರಿಗೆ ₹4.12 ಕೋಟಿ ಪರಿಹಾರ ವಿತರಿಸಿದ್ದೇವೆ ಎಂದರು.ಮಲ್ಲಿಕಾರ್ಜುನಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಶರಣಪ್ಪ ಕಡಕೋಳ, ಪ್ರಕಾಶ ತೋಟಪ್ಪ ಕರಿಗಾರ, ಹನುಮಂತ ಲಮಾಣಿ ಸೇರಿದಂತೆ 50ಕ್ಕೂ ಹೆಚ್ಚು ರೈತರಿದ್ದರು.