ಏಜೆಂಟರ ಮುಷ್ಟಿಯಲ್ಲಿ ನಗರಸಭೆ ಆಡಳಿತ; ಪ್ರದೀಪ ಶೆಟ್ಟಿ

KannadaprabhaNewsNetwork |  
Published : Oct 28, 2025, 12:36 AM IST
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆ ಜರುಗಿತು | Kannada Prabha

ಸಾರಾಂಶ

ನಗರಸಭೆಯಿಂದ ಕಟ್ಟಡ ನಿರ್ಮಾಣ ಪರವಾನಿಗೆ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ದೊರೆಯುತ್ತಿದೆ. ಆಡಳಿತ ಏಜೆಂಟರ ಮುಷ್ಟಿಯಲ್ಲಿದೆ.

ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಆರೋಪ

ಕನ್ನಡಪ್ರಭ ವಾರ್ತೆ ಶಿರಸಿ

ನಗರಸಭೆಯಿಂದ ಕಟ್ಟಡ ನಿರ್ಮಾಣ ಪರವಾನಿಗೆ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ದೊರೆಯುತ್ತಿದೆ. ಆಡಳಿತ ಏಜೆಂಟರ ಮುಷ್ಟಿಯಲ್ಲಿದೆ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಆರೋಪಿಸಿದರು.

ನಗರದ ಅಟಲ್‌ ಜೀ ಸಭಾಭವನದಲ್ಲಿ ಸೋಮವಾರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಗತ್ಯ ದಾಖಲೆ ಪೂರೈಸಿದರೂ ಅನುಮತಿ ನಿರಾಕರಿಸುತ್ತಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ನಗರಸಭೆ ಸದಸ್ಯನಾಗಿ ನನಗೆ ಸಮಸ್ಯೆಯಾಗಿದೆ. ಏಜೆಂಟರ ಮೂಲಕ ಹೋದರೆ ಮಾತ್ರ ಅನುಮತಿ ಲಭ್ಯವಾಗುತ್ತದೆ. ವೆಬ್‌ಸೈಟ್ ಏಜೆಂಟರಿಗೆ ಹೆದರುತ್ತದೆಯೋ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ನಾಗರಾಜ ನಾಯ್ಕ, ನಗರಸಭೆಯ ಕಚೇರಿಯಲ್ಲಿ ರಾತ್ರಿ 8 ಗಂಟೆಯವರೆಗೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಏನು ಕೆಲಸ ಇರುತ್ತದೆ. ಏಜೆಂಟರಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಎಂದರು.

ಸದಸ್ಯ ರಾಘವೇಂದ್ರ ಶೆಟ್ಟಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ನಗತೋತ್ಥಾನ ಕಾಮಗಾರಿ ಕುರಿತು ಸಭೆ ಆಗಿದೆ. ವಾರ್ಡಿನ ಜನರು ಮತ ನೀಡಿ ಗೆಲ್ಲಿಸಿದ್ದಾರೆ. ಅಧಿಕಾರಿಗಳನ್ನು ಯಾರು ಪ್ರಶ್ನಿಸುವುದಿಲ್ಲ.‌ ನಮ್ಮನ್ನು ಕೇಳುತ್ತಾರೆ. ರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ಕಾಮಗಾರಿ ಪೂರ್ಣಗೊಳಿಸುವ ವರೆಗೆ ಬಿಲ್‌ ಪಾಪತಿ ಮಾಡಬಾರದು ಎಂದರು.

ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಮಾತನಾಡಿ, ನಗರೋತ್ಥಾನ 1.20 ಕೋಟಿ ಬಿಲ್ ಪಾವತಿ ಬಾಕಿ ಇದೆ.‌ ಕಪ್ಪು ಪಟ್ಟಿ ಸೇರಿಸಲು ಎಂದು ವರದಿ ಸಲ್ಲಿಸಲಾಗಿದೆ. ನಗರಸಭೆಯ ಹಿಂಭಾಗದ ಜಾಗದ ಕುರಿತು 3 ಬಾರಿ ವಿಚಾರಣೆ ನಡೆಸಿ ಎಂದು ನ್ಯಾಯಾಲಯ ಸೂಚನೆ ನೀಡಿದ್ದು, ಆದೇಶ ಮಾಡಿದೆ. ಈಗಾಗಲೇ 2 ವಿಚಾರಣೆ ನಡೆಸಲಾಗಿದ್ದು, ಸದ್ಯದಲ್ಲಿ 3ನೇ ವಿಚಾರಣೆ ನಡೆಸುತ್ತೇವೆ. ನ್ಯಾಯಾಲಯದ ಆದೇಶದ ನಂತರ ಅಂತಿಮ ಆದೇಶ ಪ್ರಕಟಿಸಲಾಗುತ್ತದೆ.

ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಪ್ರತಿಕ್ರಿಯಿಸಿ, ತೆರಿಗೆ ಹಣ ಬಿಟ್ಟು ವಿಶೇಷ ಅನುದಾವಿಲ್ಲ. ಬೇರೆ ಅನುದಾನ ಬರುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿ ಗಣತಿಗೆ ನೇಮಕಗೊಳಿಸಿರುವುದಿಂದ ತೆರಿಗೆ ಸಂಗ್ರಹಕ್ಕೂ ಸಮಸ್ಯೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಸತಾಯಿಸಬೇಡಿ. ಕೂಡಲೇ ಬಿಲ್‌ ಪಾವತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣ ಲಕ್ಷಣವುಳ್ಳ ಭಾಗಶಃ ಪ್ರದೇಶವನ್ನು ನಗರಸಭಾ ವ್ಯಾಪ್ತಿಗೆ ಸೇರಿಕೊಳ್ಳುವ ಕುರಿತು 2016ರಲ್ಲಿ ಠರಾವು ಆಗಿತ್ತು. ಕುಳವೆ, ಯಡಳ್ಳಿ, ದೊಡ್ನಳ್ಳಿ, ಇಸಳೂರು ಗ್ರಾಪಂ ಮಾಡಿಕೊಟ್ಟಿದ್ದಾರೆ. ಹುತ್ಗಾರ ಸದ್ಯ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಐದು ಪಂಚಾಯಿತಿಯಲ್ಲಿ 4ಕ್ಕೆ ಒಪ್ಪಿಗೆ ನೀಡಿದ್ದಾರೆ. ಹುತ್ಗಾರ ಗ್ರಾಪಂ ವ್ಯಾಪ್ತಿಯ ಮಣಜವಳ್ಳಿ, ಶ್ರಿರಾಮನಗರ, ಸುಪ್ರಸನ್ನನಗರ, ಭಂಡಾರಕೇರಿ, ಪುಟ್ಟಣಮನೆ, ಕುಂಬ್ರಿ ತಗ್ಗು, ಕೊಪ್ಪಳಕಾಲೋನಿ, ಗುರುನಗರ, ಗಣೇಶನಗರ, ಶಾಂತಿನಗರ, ಇಸಳೂರು ಗ್ರಾಪಂ ವ್ಯಾಪ್ತಿಯ ಚಿಪಗಿ, ಎಂಇಎಸ್ ಕಾಲೇಜು, ದಮನಬೈಲ್, ನಾರಾಯಣಗುರು ನಗರ, ಲಂಡಕನಳ್ಳಿ, ಗೌಡಳ್ಳಿ, ದೊಡ್ನಳ್ಳಿ ಗ್ರಾಪಂನ ಬಚಗಾಂವ, ಲಂಡಕನಳ್ಳಿ, ಎಸಳೆ ಸೇರಿ ಇತರ ಒಟ್ಟೂ 140 ಎಕರೆ, ಯಡಳ್ಳಿ ಗ್ರಾಪಂನ ಕಲ್ಕುಣಿ, ಗಿಡಮಾವಿನಕಟ್ಟ ಕುಳವೆ ಗ್ರಾಪಂನ ತೆರಕನಳ್ಳಿ, ತೋಟಗಾರಿಕಾ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಟಿಪ್ಪುನಗರ 143 ಎಕರೆ ಜಾಗವನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಸದಸ್ಯರಾದ ರಾಘವೇಂದ್ರ ಶೆಟ್ಟಿ, ಆನಂದ ಸಾಲೇರ ಮಾತನಾಡಿದರು. ಉಪಾಧ್ಯಕ್ಷ ರಮಾಕಾಂತ್ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮತ್ತಿತರರು ಇದ್ದರು.ತೆರಿಗೆ ಹಣ ಪೋಲು

ಮೊಬೈಲ್ ಶೌಚಾಲಯ ನಿರ್ಮಾಣಕ್ಕೆ ಕಳೆದ ನಾಲ್ಕೈದು ವರ್ಷದ ಹಿಂದೆ ₹5 ಲಕ್ಷ ನೀಡಿ ಕೆಎಸ್‌ಆರ್‌ಟಿಸಿ ಬಸ್‌ ಖರೀದಿಸಲಾಗಿದ್ದು, ಅದು ಉಪಯೋಗಕ್ಕೆ ಬಾರದೇ ತುಕ್ಕು ಹಿಡಿದು ಹಾಳಾಗುತ್ತಿದೆ. ಅದನ್ನು ಮೊಬೈಲ್‌ ಟಾಯ್ಲೆಟ್‌ ಆಗಿ ಪರಿವರ್ತಿಸಲು ₹17.50 ಲಕ್ಷ ಖರ್ಚು ಮಾಡಬೇಕೆಂದು ಹೇಳುತ್ತಿದ್ದಾರೆ. ಅದಕ್ಕೆ ಹಣ ಹಾಕಬೇಡಿ ಎಂದು ಸದಸ್ಯರು ಆಗ್ರಹಿಸಿದಾಗ ಪರಿಸರ ಅಭಿಯಂತರ ಶಿವರಾಜ ಕೆ. ಪ್ರತಿಕ್ರಿಯಿಸಿ, ಬಸ್ಸು ಇನ್ನೂ ಕೆಎಸ್ಆರ್‌ಟಿಸಿ ಹೆಸರಿಗೆ ಇದೆ. ನಗರಸಭೆ ಹೆಸರಿಗೆ ಮಾಡಿಕೊಡುವಂತೆ ಆರ್‌ಟಿಓಗೆ ಪತ್ರ ಬರೆಯಲಾಗಿದೆ ಎಂದಾಗ, ಆಕ್ಷೇಪ ವ್ಯಕ್ತಪಡಿಸಿದ ಫ್ರಾನ್ಸಿಸ್‌ ನರೋನಾ, ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗಿದೆ. ಬಸ್ಸು ಖರೀದಿಸಲು ಶಾಮೀಲಾದವರ ಮೇಲೆ ಪ್ರಕರಣ ದಾಖಲಿಸಿ ಎಂದು ಸಭೆಯಲ್ಲಿ ಒತ್ತಾಯಿಸಿದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ