ಚನ್ನಗಿರಿ: ಪಟ್ಟಣದ ವಿವಿಧ ಬಡಾವಣೆಗಳಿಗೆ ಮಂಗಳವಾರ ಬೆಳಗ್ಗೆ ಪುರಸಭೆ ಮುಖ್ಯಾಧಿಕಾರಿ ಜೆ.ವಿ. ಮಂಜುನಾಥ್ ಕಚೇರಿ ಸಿಬ್ಬಂದಿ ಜತೆ ಭೇಟಿ ನೀಡಿ ಕುಡಿಯುವ ನೀರಿನ ವಿತರಣೆ, ಕಸ ವಿಲೇವಾರಿ, ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಜೊತೆಗೆ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು.
ಸಂತೆ ಮೈದಾನದಲ್ಲಿರುವ ಮೀನು, ಮಾಂಸ ಮಾರಾಟ ಮಳಿಗೆಗಳಿಗೂ ಭೇಟಿ ನೀಡಿದ ಮುಖ್ಯಾಧಿಕಾರಿ, ಅಂಗಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಚರಂಡಿಯಲ್ಲಿ ಹಾಕುತ್ತೀರಿ. ಅಂಗಡಿಗಳ ಹಿಂಭಾಗದ ಹಾಸ್ಟಲ್‌ಗೆ ಹೋಗುವ ರಸ್ತೆಯ ಬದಿಯಲ್ಲಿ ಸುರಿಯುತ್ತಿದ್ದೀರಿ. ಇದರಿಂದ ಕೆಟ್ಟ ವಾಸನೆಯಿಂದ ಪರಿಸರ ಹಾಳಾಗುತ್ತಿದೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಪುರಸಭೆಯಿಂದ ಪ್ರತಿದಿನ ಕಸ ಸಂಗ್ರಹದ ಗಾಡಿಯನ್ನು ಕಳಿಸುತ್ತಿದ್ದೇವೆ. ತಪ್ಪದೇ ತ್ಯಾಜ್ಯವನ್ನು ಸಿಬ್ಬಂದಿಗೆ ನೀಡಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಸಾಕಷ್ಟು ಖಾಸಗಿ ನಿವೇಶನಗಳಿವೆ. ಇವುಗಳಲ್ಲಿ ಗಿಡಗಳು ಬೆಳೆದುಕೊಂಡಿವೆ. ನಿವೇಶನಗಳ ಮಾಲೀಕರೇ ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಪುರಸಭೆ ವತಿಯಿಂದ ಮೂಲಸೌಲಭ್ಯಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಸಕಾಲದಲ್ಲಿ ಕಂದಾಯ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಈ ಸಂದರ್ಭದ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಲೋಕೇಶ್, ಅಭಿಯಂತರ ಮಂಜುನಾಥ್, ಪೌರಕಾರ್ಮಿಕರ ಮೇಲ್ವಿಚಾರಕ ವಿಜಯಕುಮಾರ್ ಹಾಜರಿದ್ದರು.
-24ಕೆಸಿಎನ್ಜಿ4:
ಚನ್ನಗಿರಿ ಪಟ್ಟಣದ ಸಂತೆ ಮೈದಾನದ ಮೀನು- ಮಾಂಸ ಮಾರಾಟ ಅಂಗಡಿಗಳ ಮಾಲೀಕರಿಗೆ ತ್ಯಾಜ್ಯ ವಿಲೇವಾರಿ ಕುರಿತು ಪುರಸಭೆ ಮುಖ್ಯಾಧಿಕಾರಿ ಜೆ.ವಿ ಮಂಜುನಾಥ್ ಅಗತ್ಯ ಸೂಚನೆಗಳ ನೀಡಿದರು.