ಕನ್ನಡಪ್ರಭ ವಾರ್ತೆ ಕೆಜಿಎಫ್
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಾಗಿದ್ದು, ಸಹಕರಿಸುವಂತೆ ಸುತ್ತೋಲೆ ಹೊರಡಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ನಗರಸಭೆ ಆಯುಕ್ತ ಆಂಜನೇಯಲು ಆರೋಗ್ಯಧಿಕಾರಿಗಳಿಗೆ ಸೂಚನೆ ನೀಡಿದರು.ನಗರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ನಗರದ ಸ್ವಚ್ಛತೆಗೆ ಪೌರಕಾರ್ಮಿಕರನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಚ್ಛತಾ ಕಾರ‍್ಯ ಕೈಗೊಳ್ಳಬೇಕಿದೆ ಎಂದರು.
ಪೌರಕಾರ್ಮಿಕರಿಗೆ ಹಾಜರಾತಿ ಕಡ್ಡಾಯ:ಬೆಳಗ್ಗೆ ಪೌರಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಕೆಲಸಕ್ಕೆ ಬಾರದೆ ಇರುವ ಕಾರ್ಮಿಕರಿಗೆ ಹಾಜರಾತಿ ನೀಡಬೇಡಿ, ಸಮಯಪಾಲನೆ ಮಾಡದೆ ಇರುವ ಪೌರಕಾರ್ಮಿಕರಿಗೆ ನೋಟಿಸ್ ಜಾರಿ ಮಾಡಿ, ಸಮಯಕ್ಕೆ ಸರಿಯಾಗಿ ಬಂದು ಸ್ವಚ್ಛತಾ ಕಾರ‍್ಯದಲ್ಲಿ ಭಾಗವಹಿಸುವಂತೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಬೇಕೆಂದು ತಿಳಿಸಿದರು.
ಪರಿಸರ ಸ್ನೇಹಿ ಕ್ರಮಗಳಿಗೆ ಮುಂದಾಗಿ:ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತು ನೀಡಿರುವ ಕೇಂದ್ರ ಸರ್ಕಾರ, ಏಕ ಬಳಕೆಯ ಪ್ಲಾಸ್ಟಿಕ್ ನಿರ್ಬಂಧ ವಿಧಿಸಿದೆ. ಜನರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮ ವಹಿಸಬೇಕು, ಸಾರ್ವಜನಿಕರು ಪರಿಸರ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಏಕ ಬಳಕೆಯ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಹಾಗೆಯೇ, ಆರೋಗ್ಯ ಕೇಂದ್ರಗಳಲ್ಲಿ ನಿಯಮ ಪಾಲಿಸಲು ಸಹಕರಿಸಬೇಕೆಂದು ತಿಳಿಸಿದರು.
ಎಲ್ಲಾ ಆರೋಗ್ಯ ಕೇಂದ್ರಗಳೂ ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಬೇಕು. ಆರೋಗ್ಯ ಕೇಂದ್ರಗಳ ಆವರಣದಲ್ಲಿ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು, ಆಸ್ಪತ್ರೆ ಒಳಗೆ ಬಾಟಲ್, ಕವರ್, ಬ್ಯಾಗ್ ಸೇರಿದಂತೆ ವಿವಿಧ ಉತ್ಪನ್ನ ತರದಂತೆ ತಪಾಸಣೆ ನಡೆಸಬೇಕು, ಕ್ಯಾಂಟೀನ್ ಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನ ಬಳಸದಂತೆ ಹಾಗೂ ಗ್ರಾಹಕರಿಗೆ ನೀಡದಂತೆ ಸೂಚಿಸಬೇಕು ಎಂದು ತಿಳಿಸಿದರು.ನಿಷೇಧಿಸಿರುವ ಪ್ಲಾಸ್ಟಿಕ್‌ಗಳು:
ಏಕ ಬಳಕೆಯ ಪ್ಲಾಸ್ಟಿಕ್ ಕವರ್ ಗಳು, ೧೦೦ ಮೈಕ್ರೋನ್ಗಿಂತ ಕಡಿಮೆ ಇರುವ ಪ್ಲಾಸ್ಟಿಕ್, ಪಿವಿಸಿ ಬ್ಯಾನರ್ ಗಳು, ಕ್ಯಾಂಡಿ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಥರ್ಮಕೋಲ್ ತಟ್ಟೆಗಳು, ಪ್ಲಾಸ್ಟಿಕ್ ಲೋಟ, ತಟ್ಟೆಗಳು, ಕಪ್, ಚಮಚ, ಚಾಕು, ಸಿಹಿ ತಿಂಡಿ ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಫಿಲಮ್ಗಳು, ಸಿಗರೇಟ್ ಪ್ಯಾಕೇಟ್, ಆಮಂತ್ರಣ ಪತ್ರಿಕೆಗೆ ಬಳಸುವ ಪ್ಲಾಸ್ಟಿಕ್, ಪ್ಲಾಸ್ಟಿಕ್ ಕಡ್ಡಿ ಬಳಸಿರುವ ಇಯರ್ ಬಡ್ಗಳು, ಬಲೂನ್ಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.ಅಕ್ರಮ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ದುಪ್ಪಟ್ಟು ದಂಡ ಹಾಕಿ:
ಕಾನೂನು ಮೀರಿ ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ಅಥವಾ ಸಗಟು ವ್ಯಾಪರಿಗಳು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಮಾರಾಟ ಮಾಡುತ್ತಿರುವುದು ಕಂಡಲ್ಲಿ ದುಪ್ಪಟ್ಟು ದಂಡ ವಿಧಿಸಿ ಪ್ಲಾಸ್ಟಿಕ್‌ಅನ್ನು ವಶಪಡಿಕೊಳ್ಳಬೇಕೆಂದು ತಿಳಿಸಿದರು.-----
‘ಅಂಗಡಿಗಳಿಗೆ ಹೋಗುವಾಗ ಮನೆಯಿಂದಲೇ ಬಟ್ಟೆ ಬ್ಯಾಗ್ ತೆಗೆದುಕೊಂಡು ಹೋಗಬೇಕು. ನಿಷೇಧಿತ ಪ್ಲಾಸ್ಟಿಕ್ ಬಳಸಬಾರದು ಎಂದು ಪ್ರತಿಯೊಂದು ಕಾರ್ಯಕ್ರಮದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಮನುಕುಲಕ್ಕೆ ಕಂಟಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆಗೆ ವಿಶ್ವದಾದ್ಯಂತ ಚಳವಳಿ ನಡೆಯುತ್ತಿದ್ದು, ನಗರಸಭೆ ಈ ಅಭಿಯಾನದಲ್ಲಿ ಕೈಜೋಡಿಸಿದೆ. ಮನುಕುಲಕ್ಕೆ ಕಂಟಕ ವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂ ಪ್ರೇರಿತರಾಗಿ, ಸ್ವಯಂ ನಿಯಂತ್ರಣಕ್ಕೆ ನಾಗರಿಕರು ಸಹಕರಿಸಬೇಕು.’-ಆಂಜನೇಯಲು, ನಗರಸಭೆ ಆಯುಕ್ತ