ಕೋಮುಲ್‌ ಭ್ರಷ್ಟಾಚಾರ ಪ್ರಶ್ನಿಸಬಾರದೆ: ಶಾಸಕ

KannadaprabhaNewsNetwork |  
Published : Sep 03, 2025, 01:00 AM IST
2ಕೆಬಿಪಿಟಿ.ಶಾಸಕ ಎಸ್.ಎನ್.ನಾರಾಯಣಸ್ವಾಮಿ. | Kannada Prabha

ಸಾರಾಂಶ

ಕೋಮುಲ್‌ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಮತ್ತು ಅಧ್ಯಕ್ಷ ನಂಜೇಗೌಡ ಇಡೀ ಆಡಳಿತ ಮಂಡಳಿಯನ್ನು ದಿಕ್ಕಿ ತಪ್ಪಿಸುತ್ತಿದ್ದಾರೆ. ಕೋಮುಲ್ ವಾರ್ಷಿಕ ಸಭೆಗೆ ಯಾರ ವಿರೋಧವೂ ಇಲ್ಲ, ಆದರೆ ಅಕ್ರಮಗಳ ಕುರಿತು ತನಿಖಾ ವರದಿ ಬರುವ ಮೊದಲೇ ಅದನ್ನು ಅನುಮೋದಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸುವ ಪ್ರಸ್ತಾಪಕ್ಕೆ ಮಾತ್ರ ಶಾಸಕರ ವಿರೋಧ ಇದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಮುಲ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡುವುದು ದೊಡ್ಡ ತಪ್ಪೇ, ಒಕ್ಕೂಟದಲ್ಲಿ ಅಕ್ರಮಗಳಿಗೆ ತಿಲಾಂಜಲಿ ಬೀಳುವವರೆಗೂ ನನ್ನ ಹೋರಾಟ ನಿಲ್ಲದು. ಸಾಧ್ಯವಿದ್ದರೆ ನಿಲ್ಲಿಸಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರಿಗೆ ಸವಾಲು ಹಾಕಿದರು.ಪಟ್ಟಣದ ಎಸ್‌ಎನ್ ಸಿಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುಲ್‌ನ ೭ವರ್ಷಗಳ ವ್ಯವಹಾರಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಆಗ ಮಾರ್ಕೆಟ್ ದರಕ್ಕಿಂತ ಎಷ್ಟೆಷ್ಟು ಹೆಚ್ಚಾಗಿ ಖರ್ಚು ಮಾಡಲಾಗಿದೆ, ಯಾವ್ಯಾವ ಖರೀದಿಯಲ್ಲಿ ಲೋಪವಾಗಿದೆ ,ಇದರಿಂದ ಹಾಲಿನ ದರದಲ್ಲಿ ಎಷ್ಟು ಕಡಿತಗೊಂಡಿದೆ ಎಂಬ ಲೆಕ್ಕ ರೈತರು ಹಾಗೂ ಹೆಣ್ಣು ಮಕ್ಕಳಿಗೆ ಸಿಗುತ್ತದೆ ಎಂದು ವಿವರಿಸಿದರು.

ದಾರಿ ತಪ್ಪಿಸಲು ಸಾಧ್ಯವಿಲ್ಲ

ತಾವು ತುರ್ತು ಸಭೆಗೆ ಅಡ್ಡಗಾಲು ಹಾಕಿದ್ದೇನೆ ಎಂದು ಆರೋಪಿಸಿರುವುದು ಶುದ್ದ ಸುಳ್ಳಿನ ಕಥೆಯಾಗಿದೆ. ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಮತ್ತು ನಂಜೇಗೌಡರು ಇಡೀ ಆಡಳಿತ ಮಂಡಳಿಯನ್ನು ದಿಕ್ಕಿ ತಪ್ಪಿಸಬಹುದು, ಆದರೆ ನನ್ನನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಕೋಮುಲ್ ವಾರ್ಷಿಕ ಸಭೆಗೆ ನನ್ನ ವಿರೋಧವಿಲ್ಲ, ಆದರೆ ಆಡಳಿತಾಧಿಕಾರಿ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖಾ ವರದಿ ಬರುವ ಮೊದಲೇ ಅದನ್ನು ಅನುಮೋದಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸುವ ಪ್ರಸ್ತಾಪಕ್ಕೆ ಮಾತ್ರ ನನ್ನ ವಿರೋಧ ಇದೆ ಎಂದು ಸ್ಪಷ್ಟಪಡಿಸಿದರು.

ಆಡಳಿತಾಧಿಕಾರಿ ಅವಧಿಯ ಅಕ್ರಮಗಳು, ಒಕ್ಕೂಟದ ಸಮಸ್ಯೆಗಳು, ಹಾಲು ಉತ್ಪಾದಕರು,ನೌಕರರು ಮತ್ತು ಗುತ್ತಿಗೆ ಕಾರ್ಮಿಕರ ಸಂಕಷ್ಟಗಳ ಕುರಿತು ಚರ್ಚಿಸದೆ ಕೇವಲ ಲೆಕ್ಕ ಪತ್ರಗಳಿಗೆ ಅನುಮೋದನೆ ಪಡೆಯಲು ತುರ್ತು ಸಭೆಯನ್ನು ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಶಾಸಕರು ಪ್ರಶ್ನಿಸಿದರು.

ಸಹಕಾರ ಸಿದ್ಧಾಂತ ಗೊತ್ತಿದೆಯೇ?

ಸಹಕಾರ ಕ್ಷೇತ್ರದ ಬಗ್ಗೆ ನನಗೆ ಅರಿವಿಲ್ಲ ಎಂದು ಹೇಳಿರುವ ನಂಜೇಗೌಡರಿಗೆ ಮೊದಲು ಸಹಕಾರ ಎಂದರೇನು ಅದರ ತತ್ವ ಸಿದ್ದಾಂತಗಳ ಬಗ್ಗೆ ಗೊತ್ತಿದೆಯೇ ಎಂದು ಮೊದಲು ಹೇಳಲಿ ಎಂದು ತಿರುಗೇಟು ನೀಡಿದರು.

ಜಿಲ್ಲೆಯಲ್ಲಿ ನಾನು ಬಿಪಿಎಲ್ ಶಾಸಕ ಎಂದು ಹೇಳಿರುವುದು ಅಭಿವೃದ್ದಿ ವಿಷಯದಲ್ಲಿ. ಎಪಿಎಲ್ ಶಾಸಕರು ತರುವಷ್ಟು ಅನುದಾನವನ್ನು ನನ್ನ ಕ್ಷೇತ್ರ ಅಭಿವೃದ್ದಿಗೆ ತರಲು ಆಗಲಿಲ್ಲ, ಆದ್ದರಿಂದ ನಾನೊಬ್ಬ ಬಿಪಿಎಲ್ ಶಾಸಕ ಎಂದು ಹೇಳಿರುವೆನೋ ಹೊರತು ನನ್ನ ಬಳಿ ಬಿಪಿಎಲ್ ಕಾರ್ಡಿದೆ ಎಂದಲ್ಲ. ನಾನು ಬಿಪಿಎಲ್ ಕಾರ್ಡು ತೋರಿಸಿದರೆ ರಾಜಕೀಯವಾಗಿ ನಿವೃತ್ತಿಯಾಗುವುದಾಗಿ ನಂಜೇಗೌಡರು ಸವಾಲು ಹಾಕಿರುವುದಕ್ಕೆ ಶಾಸಕರು ಸ್ಪಷ್ಟನೆ ನೀಡಿದರು ನೀಡಿದರು.

ಅಕ್ರಮದ ಬಗ್ಗೆ ಧ್ವನಿ ಎತ್ತಬಾರದೆ?

ನನಗೆ ಎರಡು ಮುಖವಿಲ್ಲ ಒಂದೇ ಮುಖ ನೇರವಾಗಿ ಮಾತನಾಡಿ ಎಲ್ಲರಿಂದಲೂ ನಿಷ್ಟೂರ ಮಾಡಿಕೊಳ್ಳುವೆ, ಆದ್ದರಿಂದ ನಂಜೇಗೌಡರ ರೀತಿ ಹೆಚ್ಚಿನ ಅನುದಾನ ತರುವ ಶಕ್ತಿಯೂ ನನಗೆ ಇಲ್ಲ ಬಿಡಿ ಎಂದು ಹೇಳಿದರು. ಕೋಮುಲ್‌ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಮಾತನಾಡಿದರೆ ಎಲ್ಲವನ್ನೂ ಹೈಕಮಾಂಡ್ ನೋಡುತ್ತಿದೆ ಎಂದು ಹೇಳುವಿರಿ ಅವ್ಯವಹಾರದ ಬಗ್ಗೆ ಯಾರೂ ಧ್ವನಿ ಎತ್ತಬಾರದೆ ಗೌಡರೇ ಎಂದು ಕೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ