ಸಮುದಾಯ ಆರೋಗ್ಯ ಕೇಂದ್ರಕ್ಕೆ ಪುರಸಭೆ ಅಧ್ಯಕ್ಷರ ದಿಢೀರ್‌ ಭೇಟಿ, ಪರಿಶೀಲನೆ

KannadaprabhaNewsNetwork | Published : Oct 4, 2024 1:16 AM

ಸಾರಾಂಶ

ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಬಂದ ಅಹವಾಲುಗಳನ್ನಾಧರಿಸಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಬಂದ ಅಹವಾಲುಗಳನ್ನಾಧರಿಸಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ಹಲವಾರು ತಿಂಗಳುಗಳಿಂದ ಈ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳನ್ನು ಅನೇಕ ಜನರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ಉಪಕರಣಗಳಿದ್ದು ಹೆರಿಗೆ ಹಾಗೂ ಇನ್ನಿತರ ರೋಗಿಗಳಿಗೆ ಇಲ್ಲಿ ಸರಿಯಾಗಿ ಚಿಕಿತ್ಸೆ ಲಭ್ಯ ಇಲ್ಲದೆ ಇರುವುದು ವಿಷಾದಕರ ಸಂಗತಿ. ಏಕೆಂದರೇ ಬಡವರಿಗಾಗಿ ಮತ್ತು ಜನಸಾಮಾನ್ಯರಿಗಾಗಿ ಇರುವ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೇವೆ ಲಭಿಸಿಲ್ಲ ಎಂದಾದರೇ ವೈದ್ಯರು, ಸಿಬ್ಬಂದಿ ಲಕ್ಷಗಲಕ್ಷಗಟ್ಟಲೇ ವೇತನ ಪಡೆಯುತ್ತಿರುವುದು ಸರ್ಕಾರಕ್ಕೆ ಹೊರೆಯೇ ಸರಿ. ಇನ್ನು ನಿಮ್ಮ ಆಸ್ಪತ್ರೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೇ ತಿಳಿಸಿ ಅದನ್ನು ನಾವು ಪರಿಶೀಲನೆ ನಡೆಸಿ ಅದಕ್ಕೆ ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ.ವಜ್ಜರ್ಮಟ್ಟಿ ಅವರು ಹಲವಾರು ಸಮಸ್ಯೆಗಳನ್ನು ಪುರಸಭೆ ಅಧ್ಯಕ್ಷರಿಗೆ ತಿಳಿಸಿ ಪರಿಹಾರಕ್ಕೆ ಮನವಿ ಮಾಡಿದರು.ಪುರಸಭಾ ಸದಸ್ಯ ಬಲವಂತಗೌಡ ಪಾಟೀಲ ಮತ್ತು ಮುಖಂಡ ಸುನೀಲಗೌಡ ಪಾಟೀಲ ಮಾತನಾಡಿ, ಸಿಬ್ಬಂದಿ ಆಸ್ಪತ್ರೆಯಲ್ಲಿ ವೇಳೆ ಸರಿಯಾಗಿ ಇರುವುದಿಲ್ಲ ಮತ್ತು ರೋಗಿಗಳಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿ ಹೆರಿಗೆಯೂ ಅಸಾಧ್ಯ. ಏಕೆಂದರೆ ಪ್ರತಿಯೊಬ್ಬರಿಗೂ ಮಗುವಿನ ಬೆಳವಣಿಗೆ ಸರಿಯಾಗಿಲ್ಲ, ಉದರದಲ್ಲಿ ನೀರಿಲ್ಲ ಮತ್ತು ಬಿಪಿ ಹೆಚ್ಚು ಕಡಿಮೆಯಾಗುತ್ತಿದೆ. ನಮ್ಮಲ್ಲಿ ಹೆರಿಗೆ ಅಸಾಧ್ಯ ಎಂದು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್‌ ಮಾಡುತ್ತಾರೆ. ನಿರ್ಗತಿಕರು ಮತ್ತು ಬಡ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ₹50 ರಿಂದ 60 ಸಾವಿರ ಇನ್ನೂ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಈ ವರ್ಗದವರು ಇಷ್ಟೊಂದು ಹಣ ಎಲ್ಲಿಂದ ತರಬೇಕು ಮತ್ತು ತಾಯಿ ಕಾರ್ಡ್ ವಿಳಂಬದ ಬಗ್ಗೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಮುಂದೆ ಇದೆ ವರ್ತನೆ ಮುಂದುವರಿಸದೇ ಬಡ ಜನತೆಗೆ ನಿಷ್ಕಲ್ಮಶ ಸೇವೆ ನೀಡಿ ಎಂದು ತಾಕೀತು ಮಾಡಿದರು.

ಬ್ಲಡ್ ಸ್ಟೋರೇಜ್ ಸಮಸ್ಯೆ:

ಬಡವರ ಅನುಕೂಲಕ್ಕಾಗಿ ಉಚಿತ ರಕ್ತದ ಪಾಕೀಟುಗಳನ್ನು ಸಂಗ್ರಹಿಸುವ ಫ್ರಿಡ್ಜ್ ಲಭ್ಯವಿದ್ದರೂ ಖಾಲಿ ಖಾಲಿ. ಹಲವಾರು ವರ್ಷಗಳಿಂದಿರುವ ಸಮಸ್ಯೆ ಕೂಡ ಇದು, ನಿವಾರಣೆಯಾದರೇ ಬಡವರಿಗೆ ದುಬಾರಿ ಬೆಲೆ ತೆತ್ತು ತಾಲೂಕು ಮತ್ತು ಇನ್ನಿತರ ಕಡೆಗಳಿಗೆ ಹೋಗಿ ಬ್ಲಡ್ ಪಾಕೇಟ್‌ಗಳನ್ನು ತರುವುದು ತಪ್ಪಿ ಜೀವಗಳು ಪ್ರಾಣಾಪಾಯದಿಂದ ಪಾರಾಗುತ್ತವೆ. ಈ ಸಮಸ್ಯೆಯನ್ನು ಬೇಗ ಪರಿಹರಿಸಲು ಸಾರ್ವಜನಿಕರು ಪುರಸಭಾಧ್ಯಕ್ಷರನ್ನು ಆಗ್ರಹಿಸಿದರು.ಈ ಸಂದರ್ಭದಲ್ಲಿ ಗುರುಲಿಂಗಯ್ಯ ಮಠಪತಿ, ಮಂಜು ಬಕರೆ, ಮಹಾಲಿಂಗ ಯ.ಪಾಟೀಲ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆ ಇದೆ. ಯಾವುದೇ ತೊಂದರೆ ಇಲ್ಲ. ತಾಯಿ ಕಾರ್ಡ್ ಮಾಡಲಿಕ್ಕೆ ಮಾತ್ರ ಸಮುದಾಯ ಸಂರಕ್ಷಣಾಧಿಕಾರಿ ಇಬ್ಬರನ್ನು ನೇಮಕ ಮಾಡಬೇಕು. ಉಳಿದಂತೆ ಆವರಣದಲ್ಲಿ ಬ್ರಿಕ್ಸ್, ಬೆಳಕಿನ ವ್ಯವಸ್ಥೆ ಮತ್ತು ಮಳೆ, ಗಾಳಿ, ಬಿಸಿಲಿನಿಂದ ಸಾರ್ವಜನಿಕರಿಗೆ ಸೆಲ್ಟರ್ (ತಂಗುದಾಣ) ನಿರ್ಮಾಣ ಅವಶ್ಯವಿದೆ. -ಡಾ.ಸಿ.ಎಂ.ವಜ್ಜರ್ಮಟ್ಟಿ, ಮುಖ್ಯ ವೈದ್ಯಾಧಿಕಾರಿ ಆರೋಗ್ಯ ಸಮುದಾಯ ಕೇಂದ್ರ ಮಹಾಲಿಂಗಪುರ.

Share this article