ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ನಗರಸಭಾ ನಾಮನಿರ್ದೇಶಿತ ಹಾಗೂ ಆಶ್ರಯ ಸಮಿತಿ ನೂತನ ಸದಸ್ಯರು ಸಿಕ್ಕಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ಭವಿಷ್ಯದಲ್ಲಿ ಚುನಾಯಿತ ಪ್ರತಿನಿಧಿಗಳಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರಸಭೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಪ್ರಕಾಶ್ ರೈ, ಮೊಹಿಯುದ್ದೀನ್ ಷರೀಫ್, ಕೀರ್ತಿಶೇಟ್, ಸುರೇಶ್, ತಬ್ರೀಜ್ ಅಹ್ಮದ್ ಹಾಗೂ ಆಶ್ರಯ ಸಮಿತಿ ಸದಸ್ಯರಾದ ಪ್ರಸಾದ್ ಅಮೀನ್, ಮಧುಕುಮಾರ್, ಫಯಾಜ್ ಅವರಿಗೆ ತಮ್ಮ ಕಾರ್ಯಾಲಯದಲ್ಲಿ ಶಾಸಕರು ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಆಯಾ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಕೆಲಸ ಮಾಡಲಿದ್ದು, ನಾಮಿನಿ ಸದಸ್ಯರು ವಾರ್ಡಿನ ಬಡ ಕುಟುಂಬಕ್ಕೆ ಜನನ ಮರಣ ಪ್ರಮಾಣ ಪತ್ರ, ಖಾತೆ ಮಾಡಿಸುವುದು ಹಾಗೂ ಮನೆ ನಿರ್ಮಿಸಲು ಅನುಮತಿ ಪತ್ರವನ್ನು ಒದಗಿಸುವ ಕಾರ್ಯಕ್ಕೆ ಮುಂದಾಗಿ ಜನತೆಯ ವಿಶ್ವಾಸ ಗಳಿಸಬೇಕು ಎಂದರು.ಅಧಿಕಾರ ಯಾರಿಗೂ ಶಾಶ್ವತವಲ್ಲ. ಇರುವಷ್ಟು ದಿವಸ ಕೈಗೊಂಡ ಕಾರ್ಯ ಜನಪ್ರತಿನಿಧಿಗಳಿಗೆ ಪ್ರೇರಣೆಯಾಗಲಿವೆ. ತಾವು ಕೂಡಾ ರಾಜಕೀಯ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ನಗರಸಭಾ ನಾಮನಿರ್ದೇಶಿತ ಸದಸ್ಯರಾಗಿ ಪಾದಾರ್ಪಣೆ ಮಾಡಿ ಇದೀಗ ಶಾಸಕನಾಗಿ ಕಾರ್ಯನಿರ್ವಹಿಸುವ ಸ್ಥಾನ ಪಡೆದಿದ್ದೇನೆ ಎಂದು ಉದಾಹರಣೆ ನೀಡಿದರು.ಆಶ್ರಯ ಸಮಿತಿ ಸದಸ್ಯರು ಸಭೆಗಳಲ್ಲಿ ಹಾಜರಾಗುವ ಮೂಲಕ ಬಡವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ದಾಖಲಾತಿ ಪಡೆದು ಅರ್ಜಿ ಸಲ್ಲಿಸುವ ಕೆಲಸ ಮಾಡಬೇಕು. ಸಿಕ್ಕಂತಹ ಅವಧಿಯಲ್ಲಿ ಕನಿಷ್ಠ ಪ್ರತಿ ಕುಟುಂಬಕ್ಕೆ ನಿವೇಶನ ಒದಗಿಸಿಕೊಡಬೇಕು. ಜೊತೆಗೆ ಪಕ್ಷ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನಗರಸಭಾ ಹಾಗೂ ಆಶ್ರಯ ಸಮಿತಿ ಸದಸ್ಯರು ನಿರಂತರ ಜನಸಂಪರ್ಕದಿಂದ ಕಾರ್ಯನಿರ್ವ ಹಿಸಿದರೆ ಮುಂದೆ ಚುನಾಯಿತರಾಗಲು ಸಾಧ್ಯ. ಜೊತೆಗೆ ಪಕ್ಷವು ಅಧಿಕಾರ ಪಡೆದುಕೊಂಡರೆ ಮೀಸಲಾತಿ ಪ್ರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಬಹುದು. ಹೀಗಾಗಿ ದೊರೆತ ಅವಕಾಶಗಳನ್ನು ಸದುಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದರು.ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಪಕ್ಷದಲ್ಲಿ ಹಲವಾರು ವರ್ಷ ದುಡಿದಿರುವ ಮುಖಂಡರಿಗೆ ನಾಮನಿರ್ದೇಶಕ ಸದಸ್ಯ ಸ್ಥಾನವನ್ನು ಸರ್ಕಾರ ಒದಗಿಸಿದೆ. ಆ ಹಿನ್ನೆಲೆಯಲ್ಲಿ ಮುಖಂಡರು ಜನತೆಯಲ್ಲಿ ಉತ್ತಮ ಬಾಂಧವ್ಯ ವೃದ್ದಿಸಿಕೊಂಡು ಮುನ್ನೆಡೆದರೆ ಯಶಸ್ಸು ಸಾಧ್ಯ ಎಂದರು.
ನಗರದ ವಾರ್ಡ್‌ಗಳಲ್ಲಿ ಸಂಕಷ್ಟದಿಂದ ಕೂಡಿರುವ ಕುಟುಂಬಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲು ಸಾಧ್ಯ. ಸದಸ್ಯರು ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ಇಂಥ ಕಾರ್ಯಗಳಿಂದ ಮುಂದಿನ ದಿನಗಳಲ್ಲಿ ಅಧಿಕಾರ ಪಡೆದು ಇನ್ನಷ್ಟು ಜನಪರ ಕಾಳಜಿ ಹೊಂದಬಹುದು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.