ಹಳೇ ವಿಚಾರಗಳನ್ನೇ ಪುನಃ ಪ್ರತಿಪಾದಿಸಿದ ಸದಸ್ಯರು । ಮುಖ್ಯಾಧಿಕಾರಿ ಮೇಲೆ ಹಣ ಖರ್ಚಿನ ಆರೋಪಕನ್ನಡಪ್ರಭ ವಾರ್ತೆ ಹೊಸದುರ್ಗ
3ನೇ ಬಾರಿ ಮುಂದೂಡಿದ ಸಭೆಯಾಗಿದ್ದ, ಈ ಸಭೆಯಲ್ಲಿಯೂ ಅಜೆಂಡಾದಂತೆ ಸಭೆ ನಡೆಯದೆ ಈ ಹಿಂದೆ ಯಾವ ವಿಚಾರಗಳಿಗಾಗಿ ಸಭೆಯನ್ನು ಮುಂದೂಡಲಾಗಿತ್ತೋ ಅದೇ ವಿಚಾರಗಳನ್ನೇ ಸದಸ್ಯರು ಪುನಃ ಪ್ರತಿಪಾದಿಸುವ ಮೂಲಕ ಕಾಲಹರಣ ಮಾಡಿದರು.
ಸಭೆಯಲ್ಲಿ ಸದಸ್ಯ ರಾಮಚಂದ್ರಪ್ಪ 2ನೇ ಅವಧಿಗೆ ಅಧ್ಯಕ್ಷರ ಆಯ್ಕೆಯಾದ ನಂತರ ಮುಖ್ಯಾಧಿಕಾರಿ ಗಳು ಅಧ್ಯಕ್ಷರ ಗಮನಕ್ಕೆ ಬಾರದೇ ಹಣ ಖರ್ಚು ಹಾಕುತ್ತಿದ್ದಾರೆ. ಮುಖ್ಯಾಧಿಕಾರಿಗಳು ತಮ್ಮ ಗಮನಕ್ಕೆ ಏನನ್ನೂ ತರುತ್ತಿಲ್ಲ ಎಂದು ಅಧ್ಯಕ್ಷರೇ ಹೇಳುತ್ತಿದ್ದಾರೆ. ಇನ್ನು ಸದಸ್ಯರಿಗೆ ಯಾವುದೇ ಮಾಹಿತಿಯನ್ನು ಮುಖ್ಯಾಧಿಕಾರಿಗಳು ನೀಡುತ್ತಿಲ್ಲ. ಈ ಬಗ್ಗೆ ಸರಿಯಾದ ಉತ್ತರ ನೀಡದೆ ಸಭೆ ಮುಂದುವರೆಸುವುದು ಅಗತ್ಯವಿಲ್ಲ ಎಂದು ಹೇಳಿದರು.ಇದಕ್ಕೆ ಸದಸ್ಯೆ ಡಾ.ಸ್ವಾತಿ ಪ್ರದೀಪ್ ಆಕ್ಷೇಪ ವ್ಯಕ್ತಪಡಿಸಿ, ಇದೇ ವಿಚಾರವಾಗಿ ಕಳೆದ 2 ಸಭೆಗಳನ್ನು ಮುಂದೂಡಲಾಗಿದೆ. ಪದೇ ಪದೇ ಕೇಳಿದ್ದೇ ಪ್ರಶ್ನೆಯನ್ನು ಮತ್ತೆ ಯಾಕೆ ಕೇಳುತ್ತೀರಾ ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ ಸಭೆ ನಡೆಯಲು ಎಲ್ಲಾ ಸದಸ್ಯರು ಅವಕಾಶ ಮಾಡಿಕೊಡಿ ಎಂದರು.
ಸದಸ್ಯೆ ಗಿರೀಶ್ ಮಾತನಾಡಿ, ಪುರಸಭೆಯಲ್ಲಿ ಅಧಿಕಾರಿಗಳು ಸದಸ್ಯರ ಅಹವಾಲುಗಳನ್ನೇ ಕೇಳುತ್ತಿಲ್ಲ ಇನ್ನೂ ಸದಸ್ಯರಿಗೇ ಏಕ ವಚನದಲ್ಲಿ ಮಾತನಾಡುವ ಹಂತಕ್ಕೆ ಬಂದಿದ್ದಾರೆ. ಇನ್ನೂ ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುವಂತಾಗಿದೆ, ಇದು ನಮ್ಮ ದೌರ್ಬಾಗ್ಯ ಎಂದರು. ಪುರಸಭೆಯ ಆರೋಗ್ಯಾಧಿಕಾರಿ ಕೇವಲ ಬಿಲ್ ಬರೆಯುವುದಕ್ಕೆ ಸೀಮಿತವಾಗಿದ್ದಾರೆ. ಹೊಸ ಯಂತ್ರಗಳಿಗೆ ರೀಪೇರಿ ಎಂದು ಲಕ್ಷಾಂತರ ಹಣ ಖರ್ಚು ಹಾಕಲಾಗಿದೆ. ಪಟ್ಟಣದ ಹಸಿಕಸವನ್ನು ಎತ್ತುತ್ತಿಲ್ಲ ಎಲ್ಲೆಂದರಲ್ಲೇ ಬಿಡಲಾಗುತ್ತಿದೆ. ಕಳೆದ 6 ತಿಂಗಳಲ್ಲಿ ಕಸ ವಿಲೇವಾರಿಯಿಂದ ಎಷ್ಟು ಹಣ ಬಂದಿದೆ ಎಷ್ಟು ಖರ್ಚು ಮಾಡಿದ್ದಾರೆ ಮಾಹಿತಿ ಕೊಡಿ ಎಂದು ಆರೋಗ್ಯಾಧಿಕಾರಿಯ ವಿರುದ್ಧ ಹರಿಹಾಯ್ದರು.
ಸದಸ್ಯ ಶ್ರೀನಿವಾಸ್ ಮಾತನಾಡಿ, ನಾವೇ ಆಯ್ಕೆ ಮಾಡಿರುವ ಅಧ್ಯಕ್ಷರಿಗೆ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕಾಣುತ್ತಿದೆ. ಯಾವುದಕ್ಕೂ ಅವರು ಪ್ರತಿಕ್ರಿಯಿಸುವುದಿಲ್ಲ. ಕಳೆದ ಸಭೆಯಿಂದಲೂ ಪಟ್ಟಣದ ಮುಖ್ಯ ರಸ್ತೆಯ ಪಾದಚಾರಿ ಮಾರ್ಗವನ್ನು ವರ್ತಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಬಾಡಿಗೆಯನ್ನೂ ನೀಡಿದ್ದಾರೆ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವಂತೆ ಹೇಳಿದರೂ ಯಾಕೇ ತೆರವುಗೊಳಿಸಿಲ್ಲ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ತಿಮ್ಮರಾಜು ನೀನು ತಂದ ನಿವೇಶನಗಳಿಗೆ ಇ-ಸ್ವತ್ತು ಮಾಡಿಕೊಟ್ಟಾಗ ಕಾನೂನು ಉಲ್ಲಂಘನೆ ಆಗಿರಲಿಲ್ಲವಾ ಎಂದು ಪ್ರಶ್ನಿಸಿ, ಇತಿಮಿತಯಲ್ಲಿಯೇ ನಾನು ಕೆಲಸ ಮಾಡಿದ್ದೇನೆ ಎಲ್ಲವನ್ನು ಅಧ್ಯಕ್ಷರ ಗಮನಕ್ಕೆ ತಂದೇ ಕೆಲಸ ಮಾಡಿದ್ದೇನೆ ಸುಖಾ ಸುಮ್ಮನೆ ಆರೋಪ ಮಾಡಿಬೇಡಿ ಎಂದರು.