ಹಳಿಯಾಳದಲ್ಲಿ 4ನೇ ದಿನಕ್ಕೆ ಕಾಲಿಟ್ಟ ಪುರಸಭಾ ಸಿಬ್ಬಂದಿ ಮುಷ್ಕರ

KannadaprabhaNewsNetwork |  
Published : Jun 03, 2025, 12:40 AM IST
2ಎಚ್.ಎಲ್.ವೈ-2 ಶುಕ್ರವಾರದಿಂದ ಅನಿರ್ಧಿಷ್ಟಾವದಿಯ ಮುಷ್ಕರ ಆರಂಭಿಸಿರುವ ಪುರಸಭೆಯ ಸಿಬ್ಬಂದಿಗಳನ್ನು ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಮುಂದಾಳತ್ವದಲ್ಲಿ ಅಧಿಕಾರಿಗಳ ನಿಯೋಗ ಭೇಟಿಯಾಗಿ ಪಟ್ಟಣದ ಹಿತದೃಷ್ಟಿಯಿಂದ ಮುಷ್ಕರವನ್ನು ಹಿಂಪಡೆಯುವಂತೆ ಮನವಿ ಮಾಡಿದರು.  | Kannada Prabha

ಸಾರಾಂಶ

ಪುರಸಭೆ ಸಿಬ್ಬಂದಿ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರವು ಸೋಮವಾರ ನಾಲ್ಕನೇ ದಿನಕ್ಕೆ ಕಾಲಿರಿಸಿತು.

ಹಳಿಯಾಳ: ರಾಜ್ಯ ಪೌರಸೇವಾ ನೌಕರರ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ರಾಜ್ಯ ಪೌರಸೇವಾ ನೌಕರರ ಸಂಘ ನೀಡಿದ ಕರೆಯನ್ನು ಬೆಂಬಲಿಸಿ ಹಳಿಯಾಳದಲ್ಲೂ ಶುಕ್ರವಾರದಿಂದ ಪುರಸಭೆ ಸಿಬ್ಬಂದಿ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರವು ಸೋಮವಾರ ನಾಲ್ಕನೇ ದಿನಕ್ಕೆ ಕಾಲಿರಿಸಿತು.

ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿದ್ದರಿಂದ ಇಡೀ ಪಟ್ಟಣದಲ್ಲಿ ಘನತ್ಯಾಜ್ಯಗಳ ರಾಶಿಯೇ ಸಂಗ್ರಹವಾಗಿದೆ. ಭಾನುವಾರ ಸಂತೆ ನಡೆದಿದ್ದರಿಂದ ತರಕಾರಿ ಮಾರಾಟಗಾರರು ಬಿಟ್ಟು ಹೋದ ತ್ಯಾಜ್ಯಗಳು ಮುಖ್ಯಬೀದಿಯ ತುಂಬೆಲ್ಲ ಹರಡಿದೆ.

ಅಧಿಕಾರಿಗಳ ನಿಯೋಗ ಭೇಟಿ:

ಮಧ್ಯಾಹ್ನ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಮುಂದಾಳತ್ವದಲ್ಲಿ ತಾಪಂ ಇಒ ವಿಲಾಸರಾಜ, ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ ನಿಯೋಗವು ಧರಣಿನಿರತ ಪೌರ ಸೇವಾ ಸಿಬ್ಬಂದಿ ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಪ್ರವೀಣ, ಹಳಿಯಾಳ ಪಟ್ಟಣದ ಸ್ವಚ್ಛತೆಯನ್ನು ಇಡೀ ರಾಜ್ಯವೇ ಹೊಗಳುತ್ತಿದೆ. ರಾಜ್ಯ ಮಟ್ಟದಲ್ಲಿ ಸ್ವಚ್ಛತೆಯಲ್ಲಿ ಬಹುಮಾನವನ್ನು ಹಳಿಯಾಳ ಪುರಸಭೆಗೆ ಲಭಿಸುವಂತೆ ಮಾಡುವಲ್ಲಿ ಪೌರಕಾರ್ಮಿಕರ ಸೇವೆ ಅಭಿನಂದನೀಯ. ಪಟ್ಟಣದ ಸ್ವಚ್ಛತೆಯ ರಾಯಭಾರಿಗಳಾಗಿರುವ ಪೌರಕಾರ್ಮಿಕರು ಧರಣಿ ಆರಂಭಿಸಿದ ನಂತರ ಹಳಿಯಾಳದ ಸ್ವಚ್ಛತೆ ನೈರ್ಮಲ್ಯತೆಗೆ ಸಮಸ್ಯೆಯಾಗಿದೆ. ಕೊರೋನ ಭಯವು ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಮೇಲಾಗಿ ಮಳೆಗಾಲವು ಆರಂಭಗೊಂಡಿದೆ. ಹೀಗಿರುವಾಗ ಪರಿಸ್ಥಿತಿಯ ಗಂಭೀರತೆ ಅರಿತು ಪೌರ ಕಾರ್ಮಿಕರು ಮುಷ್ಕರ ಹಿಂಪಡೆದು ಸೇವೆಗೆ ಹಾಜರಾಗಬೇಕು. ಬೇಡಿಕೆಗಳನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದರು.

ಸಲಹೆ ತಿರಸ್ಕರಿಸಿದ ಪೌರ ಕಾರ್ಮಿಕರು:

ಮುಷ್ಕರ ಹಿಂಪಡೆಯುವಂತೆ ಅಧಿಕಾರಿಗಳ ನಿಯೋಗ ಪ್ರಸ್ತಾಪಿಸಿದ ಸಲಹೆಗಳನ್ನು ತಿರಸ್ಕರಿಸಿದ ಪೌರ ಕಾರ್ಮಿಕರ ಸಂಘದ ಜಿಲ್ಲಾ ಮುಖ್ಯಸ್ಥ ರಮೇಶ ಮುಜುಕರ, ರಾಜ್ಯದ ಪೌರಸೇವಾ ನೌಕರರ ಹಲವಾರು ಬೇಡಿಕೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಸರ್ಕಾರಗಳು ಈ ಬೇಡಿಕೆಗಳನ್ನು ಈಡೇರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡಿದ್ದರೂ ಸ್ಪಂದಿಸಲಿಲ್ಲ. ಬೇಡಿಕೆಯನ್ನು ಈಡೇರಿಸಲು ತಿಂಗಳು ಗಡುವು ನೀಡಿದರೂ ಸರ್ಕಾರ ಕ್ರಮ ಕೈಗೊಳ್ಳದಿರುವುದನ್ನು ಕಂಡು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ. ಮುಷ್ಕರ ಹಿಂಪಡೆಯುವ ನಿರ್ಧಾರ ರಾಜ್ಯಮಟ್ಟದಲ್ಲಿ ಆಗಬೇಕು ಎಂದರು.

ಮಾಜಿ ಶಾಸಕ ಸುನೀಲ ಬೆಂಬಲ:

ಧರಣಿನಿರತ ಪೌರ ಕಾರ್ಮಿಕರನ್ನು ಭೇಟಿಯಾದ ಮಾಜಿ ಶಾಸಕ ಸುನೀಲ ಹೆಗಡೆ, ಪೌರ ಕಾರ್ಮಿಕರ ಬೇಡಿಕೆಗಳನ್ನು ಆಲಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಪೌರ ಕಾರ್ಮಿಕರ ಬೇಡಿಕೆಗಳ ಪರವಾಗಿ ಧ್ವನಿಯೆತ್ತುವಂತೆ ಕೆನರಾ ಸಂಸದರಿಗೆ, ಬಿಜೆಪಿ ರಾಜ್ಯಾಧ್ಯಕ್ಷರಿಗೆ, ವಿಪ ವಿಪಕ್ಷ ನಾಯಕರಿಗೆ ಪತ್ರವನ್ನು ಬರೆದು ಕಳಿಸಿರುವುದಾಗಿ ತಿಳಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಇತರರು ಇದ್ದರು.

ಹಳಿಯಾಳ ಶಾಖೆಯ ಅಧ್ಯಕ್ಷ ಫಕೀರಪ್ಪ ಚಲವಾದಿ, ಪದಾಧಿಕಾರಿಗಳಾದ ಬೆಲ್ಲಪ್ಪಾ ಹೊನ್ನೋಜಿ, ಯಲ್ಲಪ್ಪ ತಳವಾರ, ಪರಶುರಾಮ ಜುವೇಕರ, ರಾಚಯ್ಯ ಕೂಡಲಮಠ, ಶ್ರೀಕಾಂತ ಮಾದರ, ಪದ್ಮವ್ವಾ ಮಾದರ, ನಿರ್ಮಲಾ ಗಜಾಕೋಶ, ಪರಮಾನಂದ ಪೂಜಾರ, ಫಯಾಜ್ ಗೋರಿಖಾನ, ನಾಗರಾಜ ಕುರಿಯಾರ, ಮಂಜುನಾಥ ಮಾದರ, ಲಲಿತಾ ಚಲವಾದಿ, ಅಂಜನವ್ವ ಕಲ್ಲಕನವರ, ಜಿಲ್ಲಾ ಪದಾಧಿಕಾರಿಗಳಾದ ರವಿ ಪಟ್ಟಿಹಾಳ, ಪ್ರಕಾಶ ಠೊಸುರ, ಆರ್.ಆರ್.ಮೋಹಿತೆ, ಅನಿಲ ಚಲವಾದಿ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್