ಕಡಿಮೆ ಮೈಕ್ರಾನ್‌ಯುಕ್ತ ಪ್ಲಾಸ್ಟಿಕ್, ಬಟ್ಟೆ ಇತ್ಯಾದಿ ಅನುಪಯುಕ್ತ ವಸ್ತುಗಳಿಗೆ ಅಗ್ನಿ
ನಗರದಲ್ಲಿ ನಿತ್ಯವೂ ಸಂಗ್ರಹವಾಗುವ ಹಸಿ ಕಸ ಮತ್ತು ಒಣ ಕಸವನ್ನು ಕಸ ಸಂಗ್ರಹ ವಾಹನಗಳಲ್ಲಿ ಸಂಗ್ರಹಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೆ ಮಾಡಬೇಕಾದ ನಗರಸಭೆ ಸಿಬ್ಬಂದಿ ಪರಿಸರ ಕಾಳಜಿ ಮರೆತು ಕಡಿಮೆ ಮೈಕ್ರಾನ್‌ಯುಕ್ತ ಪ್ಲಾಸ್ಟಿಕ್, ಬಟ್ಟೆ ಇತ್ಯಾದಿ ಅನುಪಯುಕ್ತ ವಸ್ತುಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರಯುವ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ನಗರ ಹೊರವಲಯದ ಮಹಿಳಾ ಕಾಲೇಜು ಸಮೀಪ ಲೋಡ್‌ಗಟ್ಟಲೆ ಪ್ಲಾಸ್ಟಿಕ್ ಬಟ್ಟೆ ಇತ್ಯಾದಿ ತ್ಯಾಜ್ಯಕ್ಕೆ ನಗರಸಭೆ ಸಿಬ್ಬಂದಿ ಮಟ ಮಟ ಮಧ್ಯಾಹ್ನವೇ ಬೆಂಕಿ ಹಚ್ಚಿದ್ದಾರೆ. ಇದರಿಂದ ಎದ್ದಿರುವ ದಟ್ಟ ಹೊಗೆ ಒಂದೆಡೆ ಮೇಲ್ಸೇತುವೆ ಮೇಲಿನ ರಾಷ್ಟ್ರೀಯ ಹೆದ್ದಾರಿ 44 ಮತ್ತು ಕೆಳ ಭಾಗದಲ್ಲಿ ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರೀ ತೊಂದರೆಯನ್ನುಂಟು ಮಾಡಿದರೆ, ಮತ್ತೊಂದೆಡೆ ಇಲ್ಲಿನ ಸುತ್ತಮುತ್ತಲ ಪರಿಸರಕ್ಕೆ ಸುಟ್ಟ ಕೆಟ್ಟ ವಾಸನೆ ಹಬ್ಬುವಂತೆ ಮಾಡಿದೆ. ಮುಖ್ಯವಾಗಿ ಈ ವಾಸನೆ ಕಾಲೇಜು ಅಂಗಳಕ್ಕೂ ಮುಟ್ಟಿದ್ದು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳುವಂತಾಗಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಓಡಾಡುವ ಹೆದ್ದಾರಿ ಬದಿಯಲ್ಲಿಯೇ ವರ್ಷಗಳಿಂದ ನಗರಸಭೆ ಸಿಬ್ಬಂದಿ ಹಸಿ ಕಸ ಒಣ ಕಸವನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಸ್ಥಳದಲ್ಲಿಯೇ ತಳ್ಳುಗಾಡಿಗಳ ಬೀದಿ ಬದಿ ವ್ಯಾಪಾರಿಗಳು, ಕಾಫಿ ಟೀ, ಸಣ್ಣ ಟಿಫಿನ್ ಕಬ್ಬಿನ ಜ್ಯೂಸ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆಲ್ಲಾ ಈ ಕಸದ ವಾಸನೆಯಿಂದ ಕಿರಿಕಿರಿಯಾದರೂ ಸಹಿಸಿಕೊಂಡು ಸಾಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಸ ವಿಲೇವಾರಿ ಸಿಬ್ಬಂದಿ ಈತರದ ವರ್ತನೆಗಳನ್ನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಮೇಲಾಗಿ ಚಿಕ್ಕಬಳ್ಳಾಪುರ ನಗರದಿಂದ ಶಿಡ್ಲಘಟ್ಟಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಎಡ ಭಾಗದಲ್ಲಿ ಖಾಸಗಿ ಕಾಲೆಜುಗಳಿದ್ದು, ಇದರಿಂದ ತುಸು ದೂರವೇ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಾ ಇದ್ದು1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಕಸದ ಲಾರಿಗಳು ಇಲ್ಲಿ ಬಂದು ನಿಂತು ವಿಂಗಡಣೆ ಮಾಡುವ ಸಂದರ್ಭದಲ್ಲಿ ನೆಲಕ್ಕೆ ಸೋರುವ ಹಸಿ ಕಸದ ನೀರು, ದುರ್ನಾಥ ಬೀರುತ್ತದೆ. ಸಾಲದ್ದಕ್ಕೆ ವಿಂಗಡಣೆ ಮಾಡುವಾಗ ಅಲ್ಲಿ ಇಲ್ಲಿ ಬೀಳುವ ಕಸ ಮತ್ತು ಹಳೆಯ ಬಟ್ಟೆಗಳಿಗೆ ಮೇಲ್ಸೇ ತುವೆಯ ಮೂಲೆಯಲ್ಲಿರುವ ಸ್ಥಳದಲ್ಲಿಯೇ ಬೆಂಕಿ ಹಚ್ಚಿ ಸುಡುವ ಅವೈಜ್ಞಾನಿಕ ನಡೆಯನ್ನು ನಗರಸಭೆ ಸಿಬ್ಬಂದಿ ರೂಢಿಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಹಾಡ ಹಗಲೇ ಕಾನೂನಿನ ಭಯವಿಲ್ಲದೆ ಯಾರಾದರೂ ಹಿರಿಯ ಅಧಿಕಾರಿಗಳ ನೋಡಿ ಬೈದಾರು ಎಂಬ ಅಂಜಿಕೆ ಇಲ್ಲದೆ ಕಸದ ರಾಶಿಗೆ ಬೆಂಕಿ ಹಚ್ಚುವುದು ಎಷ್ಟು ಸರಿಯನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರು ಇದಕ್ಕೆ ಕಾರಣವಾದವರ ಮೇಲೆ ಕ್ರಮ ವಹಿಸಬೇಕು. ಏಕೆಂದರೆ ನಗರದಲ್ಲಿ ಇಂತಹ ಕೆಲಸ ಮಾಡುವ ನಾಗರೀಕರಿಗೆ ತಿಳಿಹೇಳ ಬೇಕಾದ ಸಿಬ್ಬಂದಿಯೇ ಈ ಕೆಲಸ ಮಾಡಬಾರದು. ಇವರಿಗೆ ತಕ್ಕ ಶಾಸ್ತಿ ಆಗಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.
ಸಿಕೆಬಿ-1 ನಗರ ಹೊರವಲಯದ ಮಹಿಳಾ ಕಾಲೇಜು ಸಮೀಪ ಲೋಡ್‌ಗಟ್ಟಲೆ ಪ್ಲಾಸ್ಟಿಕ್ ಬಟ್ಟೆ ಇತ್ಯಾದಿ ತ್ಯಾಜ್ಯಕ್ಕೆ ನಗರಸಭೆ ಸಿಬ್ಬಂದಿ ಮಟ ಮಟ ಮಧ್ಯಾಹ್ನವೇ ಬೆಂಕಿ ಹಚ್ಚಿರುವುದು