ನಗರಸಭೆ ಸಿಬ್ಬಂದಿ ಶ್ರಮ: ಹಳೇ ದಾಖಲೆಗಳೆಲ್ಲ ಫುಲ್‌ ಸೇಫ್‌!

KannadaprabhaNewsNetwork |  
Published : Sep 06, 2024, 01:02 AM IST
4ಎಚ್‍ಆರ್‍ಆರ್ 1ಹರಿಹರದ ನಗರಸಭಾ ಕಚೇರಿಯ ದಾಖಲೆ ಕೊಠಡಿಯ ನೂತನ ವ್ಯವಸ್ಥೆ. ನಗರಸಭಾ ಸದಸ್ಯೆ ಅಶ್ವಿನಿ ಕೃಷ್ಣ, ಸೀನಿಯರ್ ಪ್ರೊಗ್ರಾಂಮರ್, ಜಿ.ಕೆ. ಪ್ರವೀಣ್, ಮೇಲುಸ್ತುವಾರಿ ವ್ಯವಸ್ಥಾಪಕ ಕೆ.ಆರ್. ಶಿವಕುಮಾರ್ ಇದ್ದಾರೆ.4ಎಚ್‍ಆರ್‍ಆರ್ 1- 1ಎಹರಿಹರದ ನಗರಸಭಾ ಕಚೇರಿಯ ದಾಖಲೆ ಕೊಠಡಿಯ ಅಂದಿನ ಅವ್ಯವಸ್ಥೆಯ ಅಗರ ಕನ್ನಡಪ್ರಭದಲ್ಲಿ | Kannada Prabha

ಸಾರಾಂಶ

ನಗರದ ನಗರಸಭಾ ಕಚೇರಿಯಲ್ಲಿ 50 ವರ್ಷಗಳ ಹಿಂದಿನ ಯಾವುದೇ ದಾಖಲೆಗಳು ಇನ್ನು ಮುಂದೆ ಥಟ್ ಅಂಥ ಸಿಗುತ್ತವೆ! ಜನರಿಗಾಗಿ ಉತ್ತಮ ಸೇವೆ ನೀಡುವ ಸಲುವಾಗಿ ಸಿಬ್ಬಂದಿ ಹತ್ತು ತಿಂಗಳು ಸಮಯ ಬಿಡುವು ಮಾಡಿಕೊಂಡು ಶ್ರಮಿಸಿದ್ದಾರೆ!

ಕನ್ನಡಪ್ರಭ ವಾರ್ತೆ ಹರಿಹರ

ನಗರದ ನಗರಸಭಾ ಕಚೇರಿಯಲ್ಲಿ 50 ವರ್ಷಗಳ ಹಿಂದಿನ ಯಾವುದೇ ದಾಖಲೆಗಳು ಇನ್ನು ಮುಂದೆ ಥಟ್ ಅಂಥ ಸಿಗುತ್ತವೆ! ಜನರಿಗಾಗಿ ಉತ್ತಮ ಸೇವೆ ನೀಡುವ ಸಲುವಾಗಿ ಸಿಬ್ಬಂದಿ ಹತ್ತು ತಿಂಗಳು ಸಮಯ ಬಿಡುವು ಮಾಡಿಕೊಂಡು ಶ್ರಮಿಸಿದ್ದಾರೆ!

ಕಾರಣ ಏನಂತೀರಾ? ಕಳೆದ ವರ್ಷ ಅಕ್ಟೋಬರ್ 23ರಂದು "ಕನ್ನಡಪ್ರಭ "ದಲ್ಲಿ "ಗೆದ್ದಲಿಗೆ ಆಹಾರವಾದ ನಗರಸಭೆ ದಾಖಲೆಗಳು! " ಪ್ರಕಟವಾದ ವರದಿ ಫಲಶೃತಿ. ಹೌದು. ಪತ್ರಿಕೆಯ ವರದಿ ಬಳಿಕ ಆಗಿನ ಪೌರಾಯುಕ್ತ ಬಸವರಾಜ್ ಐಗೂರು ದಾಖಲೆಗಳನ್ನು ಸಂರಕ್ಷಿಸಲು ಅಧಿಕಾರಿ-ಸಿಬ್ಬಂದಿಗೆ ಸೂಕ್ತ ಸೂಚನೆ ನೀಡಿದ್ದರ ಫಲವಿದು.

ಸುಮಾರು 10 ತಿಂಗಳು ಕಾಲ ಕಾರ್ಯನಿರ್ವಹಿಸಿದ ಮೇಲುಸ್ತುವಾರಿ ವ್ಯವಸ್ಥಾಪಕ ಕೆ.ಆರ್. ಶಿವಕುಮಾರ್ ನೇತೃತ್ವದಲ್ಲಿ, ನಗರಸಭಾ ಸಿಬ್ಬಂದಿ, ನಗರಸಭೆಗೆ ಸೇರಿದ ಆರೋಗ್ಯ ಇಲಾಖೆ, ತಾಂತ್ರಿಕ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಎಲ್ಲ ದಾಖಲೆಗಳನ್ನು ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸಿದ್ದಾರೆ. ಎ, ಬಿ, ಸಿ, ಡಿ ಹಾಗೂ ಇ ಶ್ರೇಣಿಗಳ ರ್ಯಾಕ್‌ಗಳಲ್ಲಿ ಸಾರ್ವನಿಕರು, ಕಚೇರಿ ಆಸ್ತಿಗಳ ದಾಖಲೆಗಳು ಸುರಕ್ಷಿತವಾಗಿ ಸಂರಕ್ಷಿಸುವ ಕಾರ್ಯ ಮಾಡಲಾಗಿದೆ.

ಆಯಾ ಇಲಾಖೆಗಳ ಕಡತಗಳನ್ನು ಬಟ್ಟೆಯಲ್ಲಿ ಜೋಡಿಸಿ, ಅದರ ಮೇಲ್ಭಾಗದಲ್ಲಿ ಸಂಬಂಧಿಸಿದ ವರ್ಷ ತಿಂಗಳು ತಕ್ಷಣ ಸಿಗುವಂತೆ ಸೂಚ್ಯಂಕದ ಕಾರ್ಡ್‌ ಲಗತ್ತಿಸಿದ್ದಾರೆ. ಕ್ರಿಮಿಕೀಟಗಳು ದಾಖಲೆಗಳನ್ನು ಹಾಳು ಮಾಡದಂತೆ ಲೋಷನ್ ಗುಳಿಗೆಗಳನ್ನು ಸಾಲುವಾರು ಇಡಲಾಗಿದೆ. ಈಗಾಗಲೇ ಮೆಲಾಥಿನ್ ಪೌಡರ್ ಸಿಂಪಡಿಸಿದ್ದು, ಪ್ರತಿದಿನ ಸಿಂಪಡಿಸುವ ಮೂಲಕ ದಾಖಲೆಗಳು ಹಾಳಾಗದಂತ ವ್ಯವಸ್ಥೆ ಮಾಡಲಾಗಿದೆ. ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು ಹಾಗೂ ಸಾರ್ವಜನಿಕರು ದಾಖಲೆ ಕೊಠಡಿಗೆ ಭೇಟಿ ನೀಡಿ, ಪೌರಾಯುಕ್ತರ ಕಾಳಜಿಗೆ ಸಂತಸ ವ್ಯಕ್ತಪಡಿಸಿದರು.

ದೂರು ನೀಡಿದ್ದ ಸದಸ್ಯೆ ಅಶ್ವಿನಿ ಕೃಷ್ಣ:

ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣ ತಮ್ಮ ವಾರ್ಡ್‌ಗೆ ಸಂಬಂಧಿಸಿದ ದಾಖಲೆಯೊಂದು ಬೇಕು ಎಂದಾಗ ಕೊಡಲು ತಿಂಗಳುಗಟ್ಟಲೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡು ತಾನೇ ದಾಖಲೆಗಳ ಹುಡುಕಿಕೊಳ್ಳುತ್ತೇವೆ ಎಂದು ದಾಖಲೆ ಕೊಠಡಿಗೆ ಅವರು ತೆರಳಿದ್ದರು. ನಗರಸಭೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ದಾಖಲೆಗಳನ್ನು ಕೊಠಡಿಯೊಂದರಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ ಹಾಕಲಾಗಿತ್ತು. ಯಾವುದಾದರೂ ದಾಖಲೆ ಬೇಕಿದ್ದರೂ ಇಡಿ ಕೊಠಡಿ ಎಲ್ಲ ಮೂಲೆಗಳಲ್ಲಿ ಜಾಲಾಡಬೇಕಿತ್ತು. ಅನೇಕ ದಾಖಲೆಗಳು ಕ್ರಿಮಿ ಕೀಟಗಳು, ಗೆದ್ದಲು ಹಾಗೂ ಇಲಿಗಳ ಪಾಲಾಗಿದ್ದವು. ಇದನ್ನು ಕಂಡ ಅಶ್ವಿನಿ ಕೃಷ್ಣ ಸಿಡಿಮಿಡಿಗೊಂಡು ಪೌರಾಯುಕ್ತರಿಗೆ ದೂರಿದ್ದರು.

ಬೇಸರ- ದುಃಖವಾಗಿತ್ತು:

ಪೌರಾಯುಕ್ತರ ಆದೇಶ ಪಾಲನೆಯಾದ ಹಿನ್ನೆಲೆ 30ನೇ ವಾರ್ಡ್‌ ಸದಸ್ಯೆ ಅಶ್ವಿನಿ ಕೃಷ್ಣ ದಾಖಲೆಗಳ ಕೊಠಡಿ ಪರಿಶೀಲಿಸಿದರು. ಅಂದು ನಗರಸಭೆ ವ್ಯವಸ್ಥೆ ಮೇಲೆ ಬೇಸರ ದುಃಖ ಕೋಪ ಉಂಟಾಗಿ ದೂರು ನೀಡಿದ್ದೆ. ನಗರಸಭೆ ಸಿಬ್ಬಂದಿ ಪ್ರತಿ ದಾಖಲೆ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...