ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಅಭಿವೃದ್ಧಿಗೆ ಪುರಸಭೆಗೆ ಬರುವ ಕಂದಾಯದ ಹಣ ಅತಿ ಮುಖ್ಯವಾಗಿದ್ದು, ಸಾರ್ವಜನಿಕರು ತಪ್ಪದೇ ಕಂದಾಯ ಪಾವತಿಸುವಂತೆ ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ ಮನವಿ ಮಾಡಿದರು.ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಖಾಸಗಿ ಹಾಗೂ ಪುರಸಭೆಯ ಮಳಿಗೆಯ ಕೆಲ ಅಂಗಡಿಗಳಲ್ಲಿ ಹಲವಾರು ವರ್ಷಗಳಿಂದ ಕಂದಾಯ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಅಂಗಡಿಗಳಿಗೆ ಅಧ್ಯಕ್ಷರ ನೇತೃತ್ವದಲ್ಲಿ ಬಾಗಿಲು ಹಾಕಿಸಿ ಬೀಗ ಹಾಕಲಾಯಿತು.
ಪುರಸಭೆ ಅಧ್ಯಕ್ಷ ಅಶೋಕ್ ಮಾತನಾಡಿ, ಈಗಾಗಲೇ ಪಟ್ಟಣದ ಅಭಿವೃದ್ಧಿಗೆ ಹಾಗೂ ಸಣ್ಣಪುಟ್ಟ ಕೆಲಸಗಳಿಗೆ ಮಳಿಗೆ ಕಂದಾಯ ಹಣವನ್ನು ಉಪಯೋಗಿಸಲಾಗುತ್ತಿದೆ. ಆದರೆ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು ಅಂದಾಜು ೨ ಕೋಟಿ ರು. ಹಣ ಕಂದಾಯ ಬಾಕಿ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ನೌಕರರಿಗೆ ಸೇರಿದಂತೆ ಎನ್ ಜಿಒ ಕಚೇರಿ ಹಾಗೂ ಖಾಸಗಿ ವ್ಯಕ್ತಿಗಳಿಗೆ ಸೇರಿದ ಮಳಿಗೆಯಲ್ಲಿ ಲಕ್ಷಾಂತರ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ೨೦೨೫-೨೬ನೇ ಸಾಲಿನಲ್ಲಿ ಇದನ್ನು, ಎಲ್ಲಾ ಬಾಕಿ ಇರುವ ಕಂದಾಯವನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪುರಸಭೆ ವ್ಯಾಪ್ತಿಯಲ್ಲಿ ಬರುವಂತ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಈ ಹಣದಲ್ಲಿ ಮಾಡಲು ಅನುಕೂಲವಾಗುತ್ತದೆ. ಮನೆ ಕಂದಾಯ ಹಾಗೂ ಅಂಗಡಿ ಮಳಿಗೆಗಳ ಕಂದಾಯಗಳನ್ನು ಬಾಕಿ ಉಳಿಸದಂತೆ ಸರಿಯಾಗಿ ಪಾವತಿಸಬೇಕು ಎಂದರು.ಇನ್ನು ವ್ಯಾಪಾರ ಮಾಡುವ ವಾಣಿಜ್ಯ ಮಳಿಗೆಗಳು ಕಡ್ಡಾಯವಾಗಿ ವ್ಯಾಪಾರ ನಡೆಸಲು ಅನುಮತಿ ಪಡೆಯಬೇಕು. ನಾಳೆಯಿಂದಲೇ ನಮ್ಮ ಅಧಿಕಾರಿಗಳ ತಂಡ ಪ್ರತಿ ಅಂಗಡಿಗಳಲ್ಲಿ ಪರಿಶೀಲನೆಗೆ ನಡೆಸಲಿದ್ದು, ಪ್ರತಿಯೊಬ್ಬರೂ ಪಾವತಿ ಮಾಡಬೇಕು. ಇಲ್ಲದಿದ್ದರೆ ಅಂಗಡಿ ಬಾಗಿಲು ಮುಚ್ಚಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯ ಜಗದೀಶ್, ಅಶೋಕ್, ಮಾಜಿ ಸದಸ್ಯ ಸತೀಶ್, ಮುಖಂಡರಾದ ತೌಫಿಕ್, ಸುಬ್ರಹ್ಮಣ್ಯ, ಅಧಿಕಾರಿಗಳಾದ ಗೋಪಿ, ಪ್ರಸನ್ನ ಲೋಹಿತ್, ಮೋಹನೇಶ್, ಸಲ್ಮಾನ್, ಇತರರು ಇದ್ದರು.