ಶೋಭಾಯಾತ್ರೆ ತ್ಯಾಜ್ಯ ವಿಲೇವಾರಿಗೆ ಪೌರ ಕಾರ್ಮಿಕರು ಐರಾಣ

KannadaprabhaNewsNetwork |  
Published : Sep 15, 2025, 01:00 AM IST
ಚಿತ್ರದುರ್ಗ ಮೂರನೇ   ಪುಟದ ಲೀಡ್   | Kannada Prabha

ಸಾರಾಂಶ

ಶೋಭಾಯಾತ್ರೆ ನಂತರ ಚಿತ್ರದುರ್ಗದ ಬಿ.ಡಿ.ರಸ್ತೆಯ ತುಂಬಾ ಚೆಲ್ಲಾಪಿಲ್ಲಿಯಾಗಿ ಕಂಡು ಬಂದ ಹರಿದ ಚಪ್ಪಲಿಗಳುಪೋಟೋ: 14 ಸಿಟಿಡಿ3

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದೇಶದ ಎರಡನೇ ಅತಿ ದೊಡ್ಡ ಹಿಂದೂ ಮಹಾಗಣಪತಿ, ಹೆಚ್ಚು ಮಂದಿ ಪಾಲ್ಗೊಳ್ಳುವ ಶೋಭಾಯಾತ್ರೆ ಎಂದೆಲ್ಲ ಖ್ಯಾತಿ ಪಡೆದ ಚಿತ್ರದುರ್ಗದ ಗಣಪತಿ ವಿಸರ್ಜನೆ ಕಾರ್ಯ ಶನಿವಾರ ಮುಗಿದಿದೆ. ರಾಜ್ಯ ಸೇರಿದಂತೆ ಕನ್ನಡ ಗಡಿಗಳಾಚೆಯಿಂದ ಎರಡುವರೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಹಿಂದೂ ಮಹಾಗಣಪತಿ ಶೋಭಾಯಾತ್ರೆ ಕಣ್ತುಂಬಿಕೊಂಡಿದ್ದಾರೆ. ಲಕ್ಷಕ್ಕೂ ಅಧಿಕ ಯುವಕ, ಯುವತಿಯರು ಮೆರವಣಿಗೆಯಲ್ಲಿ ಡಿಜೆ ಶಬ್ದಕ್ಕೆ ಕುಣಿದು, ಕುಪ್ಪಳಿಸಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಶನಿವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಚಂದ್ರವಳ್ಳಿಯಲ್ಲಿ ಸೃಷ್ಠಿಸಲಾದ ಕೃತಕ ಕೆರೆಯಲ್ಲಿ ಗಣಪತಿಯ ಮುಳುಗಿಸುವುದರ ಮೂಲಕ ವರ್ಷದ ಹರ್ಷಕ್ಕೆ ತೆರೆ ಬಿದ್ದಿದೆ.

ಹಿಂದೂ ಮಹಾಗಣಪತಿ ಶೋಭಾಯಾತ್ರೆಯೆಂಬ ಅತಿ ರಿಸ್ಕ್ ಹಾಗೂ ಬಿಗಿ ಭದ್ರತೆಯ ಸಂಭ್ರಮ ಮುಗಿದ 6ಗಂಟೆ ನಂತರ ಅಂದರೆ ಶನಿವಾರ ಬೆಳಗ್ಗೆ ಚಿತ್ರದುರ್ಗ ಪ್ರಮುಖ ಬೀದಿಗಳು ಬೇರೆಯದೇ ಸಂದೇಶ ರವಾನಿಸಿದವು. ಗಣಪತಿ ಮೂರ್ತಿ ಸಾಗಿ ಹೋದ ಹಾದಿ ತುಂಬಾ ತ್ಯಾಜ್ಯ ತುಂಬಿ ತುಳುಕಾಡುತ್ತಿತ್ತು. ಕಣ್ಣಾಯಿಸಿದಷ್ಟು ದೂರ ಹರಿದ ಚಪ್ಪಲಿಗಳು, ಊಟ ಮಾಡಿ ಬಿಸಾಕಿದ ಪೇಪರ್ ಪ್ಲೇಟ್, ಕುಡಿವ ನೀರಿನ ಖಾಲಿ ಪೆಟ್, ಬಾಟಲ್ ಗಳು, ಕುಣಿವಾಗ ನೆಲಕ್ಕೆ ಬಿದ್ದ ಕೇಸರಿ ಟವೆಲ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಚಪ್ಪಲಿ ಕಳೆದುಕೊಂಡವರು ಹುಡುಕಲಿಲ್ಲ, ಉಂಗುಷ್ಟ ಕಿತ್ತುಕೊಂಡವರು ಮೋಚಿ ಹುಡುಕಿಕೊಂಡು ಹೋಗಲಿಲ್ಲ. ಯಾತ್ರೆಗೆ ಹೋಗಿ ಬಂದವರಂತೆ ಎಲ್ಲರೂ ಬರಿಗಾಲಲ್ಲಿ ಊರು ಸೇರಿದರು. ಹರಿದ ಚಪ್ಪಲಿಗಳ ಗುಡಿಸಿ ಮತ್ತೆ ದುರ್ಗದ ಬೀದಿಗಳ ಯತಾಸ್ಥಿತಿಗೆ ತರುವಲ್ಲಿ ಪೌರಕಾರ್ಮಿಕರು ಐರಾಣವಾಗಬೇಕಾಯಿತು.

ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸೃಜಿಸಿದ ತ್ಯಾಜ್ಯ ವಿಲೇವಾರಿಗೆ ಶನಿವಾರ ಬೆಳಗ್ಗೆ ಆರು ಗಂಟೆಗೆ ಪೊರಕೆ, ಸಲಿಕೆ, ಬಾಂಡ್ಲಿಗಳ ಹಿಡಿದು ಬೀದಿಗಳಿದ 120 ಮಂದಿ ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿಗೆ ಬರೋಬ್ಬರಿ ಆರುವರೆ ತಾಸಿನಷ್ಟು ದೀರ್ಘ ಸಮಯ ತೆಗೆದುಕೊಂಡರು. ನಗರದ ಬಡಾವಣೆಗಳ ತ್ಯಾಜ್ಯ ವಿಲೇವಾರಿಯ ಒಂದು ದಿನ ಬದಿಗೆ ಸರಿಸಿದ ಪೌರಕಾರ್ಮಿಕರು ಶೋಭಾಯಾತ್ರೆ ಸಾಗಿದ ಹಾದಿ ಮೇಲೆ ಗಮನ ಕೇಂದ್ರೀಕರಿಸಿದರು. ಮಧ್ಯಾಹ್ನ 12ರ ನಂತರ ಪೌರಕಾರ್ಮಿಕರು ಉಸ್ಸೆಂದು ಸುದೀರ್ಘ ನಿಟ್ಟುಸಿರೆಳೆದು ತುಸು ವಿಶ್ರಾಂತಿಗೆ ಕುಳಿತಾಗ ಬರೋಬ್ಬರಿ 15 ಲೋಡ್ ಕಸ ಚಿತ್ರದುರ್ಗದ ಆಚೆ ಹೋಗಿತ್ತು.

ನಗರಸಭೆಯ ಪರಿಸರ ಎಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕರಾದ ಭಾರತಿ, ರುಕ್ಮಿಣಿ, ನಿರ್ಮಲ, ಬಾಬುರೆಡ್ಡಿ, ಹೀನ ಕೌಸ್ರ್, ಜಯಪ್ರಕಾಶ್ ನೇತೃತ್ವದ ತಂಡ 6 ತಾಸು ಉಸ್ತುವಾರಿ ನಡೆಸಿ ಶೋಭಾಯಾತ್ರೆ ತ್ಯಾಜ್ಯ ವಿಲೇವಾರಿಗೆ ಶ್ರಮಿಸಿತು. ಚಳ್ಳಕೆರೆ ಟೋಲ್‌ ಗೇಟ್‌, ಜೈನಧಾಮ, ಎಲ್‌ಐಸಿ ಕಚೇರಿ, ಮದಕರಿನಾಯಕ ವೃತ್ತ, ಅಂಬೇಡ್ಕರ್‌ ವೃತ್ತ, ಪ್ರವಾಸಿ ಮಂದಿರ, ವಾಸವಿ ಮಹಲ್ ರಸ್ತೆ ತಿರುವು, ಕಾಂತಿ ಸ್ವೀಟ್ಸ್‌ ಸ್ಟಾಲ್‌, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದವರೆಗೂ ನಿಗದಿಪಡಿಸಿದ್ದ ಸ್ಥಳಗಳಲ್ಲಿ ತಂಡಗಳು ಸ್ವಚ್ಛತಾ ಕಾರ್ಯ ನಡೆಸಿದವು. ಎಲ್ಲ ಕಸವನ್ನು ಚೀಲಗಳಲ್ಲಿ ತುಂಬಿ ಟಿಪ್ಪರ್‌, ಟ್ರ್ಯಾಕ್ಟರ್‌, ಟಾಟಾ ಏಸ್‌ ವಾಹನಗಳಿಗೆ ಹಾಕಿದರು.

ಸ್ವಚ್ಛತಾ ಕಾರ್ಯದಲ್ಲಿ ನಗರಸಭೆ ಸಿಬ್ಬಂದಿ ಜೊತೆಗೆ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ತಂಡ ಕೈ ಜೋಡಿಸಿತು. ಜಿಲ್ಲಾ ಸಚಿವರು ಈ ಕಸದ ರಾಶಿಯನ್ನು ತೆಗೆಯಲು ಸುಮಾರು 10 ರಿಂದ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ ನಮ್ಮ ಪೌರ ಕಾರ್ಮಿಕರು ಕೇವಲ 5 ರಿಂದ 6 ಗಂಟೆಯ ಒಳಗೆ ಪೂರ್ಣವಾಗಿ ಸ್ವಚ್ಛ ಮಾಡಿದ್ದಾರೆ. ಪೌರ ಕಾರ್ಮಿಕರ ಶ್ರಮಕ್ಕೆ ತಾನು ಆಭಾರಿಯಾಗಿರುವುದಾಗಿ ಉಮೇಶ್ ಕಾರಜೋಳ ತಿಳಿಸಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ