ಗುತ್ತಿಗೆದಾರ ಕಿರಣ ಶಿರೂರರಿಂದ ಪುರಸಭೆ ಎದುರು ಧರಣಿ ಸತ್ಯಾಗ್ರಹ
ಭಟ್ಕಳ ಪುರಸಭೆ ಮತ್ತು ಜಾಲಿ ಪಪಂ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡಿದ ಕೆಲವು ಗುತ್ತಿಗೆದಾರರಿಗೆ 10 ತಿಂಗಳಾದರೂ ಬಿಲ್ ಪಾವತಿಸದೇ ಇರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗುತ್ತಿಗೆದಾರ ಮತ್ತು ದಲಿತ ಮುಖಂಡ ಕಿರಣ ನಾರಾಯಣ ಶಿರೂರು ಶೀಘ್ರ ಕಾಮಗಾರಿ ಬಿಲ್ ಪಾವತಿಸುವಂತೆ ಪುರಸಭೆ ಎದುರು ಧರಣಿ ನಡೆಸಿದರು.
ಎರಡು ತಾಸಿಗೂ ಹೆಚ್ಚು ಧರಣಿ ನಡೆಸಿದ ಅವರು ನಾನೊಬ್ಬ ದಲಿತ ಸಮುದಾಯಕ್ಕೆ ಸೇರಿದ 3ನೇ ದರ್ಜೆ ಗುತ್ತಿಗೆದಾರನಿದ್ದು, ಭಟ್ಕಳ ಪುರಸಭೆ ಹಾಗೂ ಜಾಲಿ ಪಪಂ ವ್ಯಾಪ್ತಿಯಲ್ಲಿ ಮಾಡಿದ ಕಾಮಗಾರಿ ಬಿಲ್ ಹತ್ತು ತಿಂಗಳಾದರೂ ಪಾವತಿಸಿಲ್ಲ. ಕಾಮಗಾರಿ ಬಿಲ್ ಮಾಡದೇ ಇರುವುದು ಜೀವನ ನಡೆಸಲು ಮತ್ತು ಸಾಲಗಾರರ ಹಣ ಮರಳಿಸಲು ತೊಂದರೆಯಾಗಿದೆ. ಬಿಲ್ ಪಾವತಿಯಾಗದ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದರೂ ಸರಕಾರ ಬಳಿ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ನಾನು ₹7 ಲಕ್ಷದ ಕಾಮಗಾರಿ ನಡೆಸಿದ್ದು, ಬಿಲ್ ಆಗದೇ ಇರುವುದು ತೊಂದರೆ ಆಗಿದೆ. ಸಾಲಗಾರರು ನನಗೆ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಸರಕಾರದಿಂದ 2024-25ನೇ ಸಾಲಿನ 15ನೇ ಹಣಕಾಸಿನ ಭಾಗಶಃ ಹಣ ಮಾತ್ರ ಬಿಡುಗಡೆ ಆಗಿದೆ ಎಂದು ಹೇಳಿದ್ದಾರೆ. ಆದರೆ ಹೊನ್ನಾವರದ ಮುಖ್ಯಾಧಿಕಾರಿ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸರಕಾರದಿಂದ ಅನುದಾನ ಬಿಡುಗಡೆ ಆಗದೇ ಇದ್ದರೂ ಟೆಂಡರ್ ಕರೆದು ಕಾಮಗಾರಿ ಮಾಡಲು ಇತರ ಗುತ್ತಿಗೆದಾರರಿಗೆ ಮತ್ತು ನನಗೆ ಒತ್ತಡ ಹೇರುತ್ತಿದ್ದಾರೆ. ಈ ರೀತಿ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಒಂದು ವಾರದೊಳಗೆ ಬಾಕಿ ಇರುವ ಬಿಲ್ ಪಾವತಿಸಬೇಕು. ಇಲ್ಲದಿದ್ದಲ್ಲಿ ಪುರಸಭೆ ಎದುರು ಆಮರಣಾಂತ ಉಪವಾಸ ಮಾಡುವುದಾಗಿ ಅವರು ಹೇಳಿದರು.ಧರಣಿ ನಿರತ ಸ್ಥಳಕ್ಕೆ ಪುರಸಭೆ ವ್ಯವಸ್ಥಾಪಕ ವೆಂಕಟೇಶ ನಾಯ್ಕ ಮತ್ತು ಸಮಾಜ ಕಲ್ಯಾಣಾಧಿಕಾರಿ ಗೀತಾ ಹೆಗಡೆ ಆಗಮಿಸಿ ಮನವಿ ಸ್ವೀಕರಿಸಿದರು. ಧರಣಿಯಲ್ಲಿ ಮೋಹನ ಶಿರಾಲಿಕರ್ ಮುಂತಾದವರು ಇದ್ದರು.