ಹಾವೇರಿ:ರಟ್ಟಿಹಳ್ಳಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬನ ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ವಾಹನ ಗುದ್ದಿಸಿ ಕೊಲೆ ಮಾಡಿ ನಂತರ ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ರಟ್ಟಿಹಳ್ಳಿ ಪಟ್ಟಣದ ಬಸವರಾಜ ಬೊಮ್ಮಪ್ಪ ಪುಟ್ಟಣ್ಣನವರ (40) ಮೃತಪಟ್ಟ ವ್ಯಕ್ತಿ. ರಾಘವೇಂದ್ರ, ಸಿದ್ದನಗೌಡ, ಮತ್ತಿತರರು ಕೊಲೆ ಆರೋಪಿಗಳು.ಎರಡು ವಾರದ ಹಿಂದೆ ರಟ್ಟಿಹಳ್ಳಿಯ ಪೊಲೀಸ್ ಠಾಣೆ ರಸ್ತೆಯಲ್ಲಿ ತಡರಾತ್ರಿ ಅಪಘಾತವಾದ ಸ್ಥಿತಿಯಲ್ಲಿ ಬಸವರಾಜ ಪುಟ್ಟಣ್ಣನವರ ಮೃತದೇಹ ಪತ್ತೆಯಾಗಿತ್ತು. ಪಿಎಸ್‌ಐ ರಮೇಶ ರಾತ್ರಿ ಗಸ್ತು ಹೋಗಿ ವಾಪಸ್ ಬರುವಷ್ಟರಲ್ಲಿ ಈ ಅವಘಡ ಸಂಭವಿಸಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಪೊಲೀಸರು ಬಸವರಾಜನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕಲಿಲ್ಲ. ಈ ಕುರಿತು ಬಸವರಾಜನ ಕುಟುಂಬಸ್ಥ ಶಿವಕುಮಾರ ಪುಟ್ಟಣ್ಣನವರ ಇದು ಅಪಘಾತ ಅಲ್ಲ. ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಮದ್ಯ ಕುಡಿಸಿದ್ದರು: ಬಸವರಾಜ ಅನಾರೋಗ್ಯದಿಂದ ಬಳಲುತ್ತಿದ್ದ. ಆರೋಪಿಗಳು ಆಸ್ತಿಗಾಗಿ ಪಟ್ಟಣದ ಚಿಕ್ಕಯಡಚಿ ರಸ್ತೆ ಬಳಿ ಬಸವರಾಜನನ್ನು ರಾತ್ರಿ ಕರೆದುಕೊಂಡು ಹೋಗಿದ್ದಾರೆ. ಆತನಿಗೆ ಮದ್ಯ ಕುಡಿಸಿ, ನಂತರ ಕಾರಿನಿಂದ ಗುದ್ದಿ ಗಂಭೀರವಾಗಿ ಗಾಯಪಡಿಸಿದ್ದಾರೆ. ಅಪಘಾತ ಎಂಬಂತೆ ಬಿಂಬಿಸಿ ರಸ್ತೆಬದಿ ಎಸೆದು, ಅಲ್ಲಿಂದ ಕಾಲು ಕಿತ್ತಿದ್ದಾರೆ. ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಅಪಘಾತ ವಿಮೆ ಮಾಡಿಸಿದ್ದ ಪಾಪಿ!: ಬಸವರಾಜನ ಪಕ್ಕದ ಮನೆಯ ನಿವಾಸಿ ರಾಘವೇಂದ್ರ ಎಂಬಾತ ಬಸವರಾಜನ ಹೆಸರಲ್ಲಿ ಸ್ಥಳೀಯ ಅಂಚೆ ಕಚೇರಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ₹500 ಪಾವತಿಸಿ ಅಪಘಾತ ವಿಮೆ ಮಾಡಿಸಿದ್ದ. ಅದಕ್ಕೆ ತನ್ನ ಹೆಸರನ್ನೇ ನಾಮಿನಿಯಾಗಿ ನಮೂದಿಸಿದ್ದ. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ಕೊಲೆ ಎಂಬುದು ಗೊತ್ತಾಗಿದೆ.
6 ಎಕರೆ ಹೊಲ, ಮನೆ: ಬಸವರಾಜ ಪುಟ್ಟಣ್ಣನವರ ಹೆಸರಿಗೆ 6 ಎಕರೆ ಹೊಲ, ಮನೆ ಇತ್ತು. ಬಸವರಾಜನ ತಂದೆ- ತಾಯಿ ಹಾಗೂ ಇಬ್ಬರು ಸಹೋದರರು ಕಳೆದ ವರ್ಷ ಮೃತಪಟ್ಟಿದ್ದರು. ಹಾಗಾಗಿ, ಬಸವರಾಜ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ. ಆರೋಪಿತರು ಬಸವರಾಜನ ಆಸ್ತಿ ತಮ್ಮ ಹೆಸರಿಗೆ ವಿಲ್ ನೋಂದಣಿ ಮಾಡಿಸಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.