ಹಾನಗಲ್ಲ: ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ನೀಡಲು ಸಜ್ಜಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಎಲ್ಲ ಶಿಕ್ಷಕರು ಮುಖ್ಯೋಪಾಧ್ಯಾಯರು ವಿಶೇಷ ಕಾಳಜಿವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಹಾವೇರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಝಡ್.ಎಂ. ಖಾಜಿ ತಿಳಿಸಿದರು.ಹಾನಗಲ್ಲಿನ ಗುರುಭವನದಲ್ಲಿ ಹಾವೇರಿಯ ಡೈಟ್ ವತಿಯಿಂದ ನಡೆದ 2026ರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಹಾನಗಲ್ಲ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಆಯೋಜಿಸಿದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮುಖ್ಯೋಪಾಧ್ಯಾಯರು ಮಕ್ಕಳ ಪಾಲಕರೊಂದಿಗೆ ನಿರಂತರ ಸಂಪರ್ಕ ಹೊಂದಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗೆಗೆ ಗಮನಕ್ಕೆ ತರಬೇಕು. ಪ್ರತಿ ತಿಂಗಳೂ ತಾಯಂದಿರ ಸಭೆ ನಡೆಸುವುದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ನಡೆಸುವುದು, ಗೈರಾದ ಮಕ್ಕಳ ಮನೆಗೆ ತೆರಳಿ ಮುಖ್ಯೋಪಾಧ್ಯಾಯರು ಅಂತಹ ಮಕ್ಕಳು ಮರಳಿ ಶಾಲೆಗೆ ಬರುವಂತೆ ಕಾಳಜಿವಹಿಸಬೇಕು. ಪೋಷಕರು ಶಿಕ್ಷಕರ ಸಮನ್ವಯ ಸಮಿತಿ ಸಭೆ ನಡೆಸಬೇಕು. ಅಲ್ಲಿ ಮಕ್ಕಳ ಕಲಿಕಾ ಪ್ರಗತಿಯನ್ನು ಪ್ರದರ್ಶಿಸಬೇಕು. ಮೌಲ್ಯಾಂಕನ ವಿಶ್ಲೇಷಣೆ ನಡೆಸಬೇಕು. ಅಲ್ಲದೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನೀಡಿದ 29 ಅಂಶಗಳ ಮೇಲೆ ಮುಖ್ಯೋಪಾಧ್ಯಾಯರು ಕ್ರಿಯಾ ಯೋಜನೆ ಮಾಡಬೇಕು. ಇದರೊಂದಿಗೆ ಆರ್ಥಿಕ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಸರ್ಕಾರದ ವಿವಿಧ ಶಿಷ್ಯವೇತನಕ್ಕೆ ಅನುಕೂಲವಾಗುವ ಪರೀಕ್ಷೆಗಳಿಗೆ ಹಾಜರಾಗಿ ಯಶಸ್ವಿಯಾಗುವಂತೆ ಪ್ರೋತ್ಸಾಹಿಸಬೇಕು. ಹಾವೇರಿ ಜಿಲ್ಲೆಯಲ್ಲಿ ಈಗ 171 ವಿದ್ಯಾರ್ಥಿಗಳು ಎನ್‌ಎಂಎಂಎಸ್ ಶಿಷ್ಯವೇತನ ಪಡೆಯುತ್ತಿದ್ದಾರೆ ಎಂದರು. ಈಗ ಜಿಲ್ಲಾದ್ಯಂತ ರಜಾ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ವರ್ಗಗಳು ನಡೆಯುತ್ತಿದ್ದು ಎಲ್ಲ ಶಿಕ್ಷಕರು ರಜಾ ಅವಧಿಯಲ್ಲಿ ಮಕ್ಕಳಿಗೆ ವಿಶೇಷ ವರ್ಗಗಳನ್ನುನಡೆಸಬೇಕು ಎಂದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಯ್ಯ ಹಿರೇಮಠ ಮಾತನಾಡಿ, ಈಗ ರಜೆ ಮುಕ್ತಾಯದ ಹಂತದಲ್ಲಿದ್ದೇವೆ. ಮುಖ್ಯ ಶಿಕ್ಷಕರು ಅತ್ಯಂತ ಕಾಳಜಿಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳ ಶೈಕ್ಷಣಿಕ ಉನ್ನತಿಗೆ ಕಾಳಜಿವಹಿಸಬೇಕು. ಈ ಬಾರಿ ಜಿಲ್ಲೆಯಲ್ಲಿಯೇ ಹಾನಗಲ್ಲ ತಾಲೂಕು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ಕಾಳಜಿವಹಿಸೋಣ ಎಂದರು.ಡೈಟ್ ಉಪನ್ಯಾಸಕ ತಾಲೂಕು ನೋಡಲ್ ಅಧಿಕಾರಿ ಯು.ಎಂ. ಬಸವರಾಜಪ್ಪ, ಬಿ.ಆರ್.ಪಿ. ಗೀತಾ ಚಕ್ರಸಾಲಿ, ರವೀಂದ್ರ ಬಸವಂತಪ್ಪ ಈ ಸಂದರ್ಭದಲ್ಲಿದ್ದರು.