- ಬಂಟ್ವಾಳ ಬಳಿ ಮಸೀದಿ ಸದಸ್ಯ ಕೊಲೆ
- ಪಿಕಪ್ ವಾಹನ ಚಾಲಕನಾದ ಮಸೀದಿ ಸದಸ್ಯ ರಹೀಂ ಕೊಲೆ
- ಇರಾಕೋಡಿ ಎಂಬಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಕೃತ್ಯ- ಶಾಫಿ ಎಂಬಾತಗೆ ಗಾಯ । ಈ ಸಂಬಂಧ ಮೂವರು ವಶಕ್ಕೆ
ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಬೆನ್ನಲ್ಲೇ ಇದೀಗ ಪಿಕಪ್ ವಾಹನ ಚಾಲಕನಾಗಿದ್ದ ಹಾಗೂ ಮಸೀದಿ ಸಮಿತಿಯೊಂದರ ಕಾರ್ಯದರ್ಶಿ ಆಗಿದ್ದ ರಹೀಮ್ ಎಂಬುವರನ್ನು ಹಾಡಹಗಲೇ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೊತೆಗೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 30ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಮರಳು ಅನ್ ಲೋಡ್ ವೇಳೆ ದಾಳಿ:
ತೀವ್ರ ರಕ್ತಸ್ರಾವದಿಂದ ರಹೀಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ, ರಹೀಂ ರಕ್ಷಣೆಗೆ ಮುಂದಾದ ಖಲಂದರ್ ಶಾಫಿ ಎಂಬುವರ ಮೇಲೂ ಹಲ್ಲೆ ನಡೆಸಲಾಗಿದ್ದು, ಅವರ ಕೈಗೆ ಗಾಯವಾಗಿದೆ. ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ರಹೀಂ ಬಂಟ್ವಾಳದ ಅಡ್ಡೂರಿನ ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿಯಾಗಿದ್ದು, ಸದಾ ಚಟುವಟಿಕೆಯಲ್ಲಿದ್ದವರು ಹಾಗೂ ಸ್ಥಳೀಯವಾಗಿ ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿಯಾಗಿದ್ದರು. ಈ ಪ್ರದೇಶದ ಎಲ್ಲಾ ಧರ್ಮದವರು ಹೊಯ್ಗೆ (ಮರಳು) ಅಗತ್ಯ ಬಿದ್ದಾಗ ಇವರಲ್ಲಿ ತರಿಸಿಕೊಳ್ಳುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.