ಸಾಲ ಕೊಟ್ಟಿದ್ದ ವ್ಯಕ್ತಿ ಕೊಲೆ: ಮೂವರು ಆಟೋ ಚಾಲಕರ ಮೂವರ ಬಂಧನ

KannadaprabhaNewsNetwork |  
Published : Nov 14, 2025, 01:45 AM IST

ಸಾರಾಂಶ

ಕಮರಹಳ್ಳಿ ಬಳಿ ಕಳೆದ ಮೂರು ದಿನಗಳ ಹಿಂದೆ ಬೇಗೂರು ಗ್ರಾಮದ ನಿವಾಸಿ, ಮೂಲತಃ ಹಾಲಹಳ್ಳಿ ಗ್ರಾಮದ ಎಚ್.ಎಂ.ಸ್ವಾಮಿ ಕೊಲೆಯಾದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೊಟ್ಟ ಸಾಲ, ಬಡ್ಡಿ ಕೇಳುತ್ತಿದ್ದಕ್ಕೆ ಆಟೋ ಚಾಲಕನೋರ್ವ ಸಾಲ ಕೊಟ್ಟವರ ಮೈ ಮೇಲೆ ಚಿನ್ನಾಭರಣ ಕಂಡು ದುಡ್ಡಿನಾಸೆಗೆ ಟವಲ್‌ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ ಆರೋಪದ ಮೇಲೆ ಮೂವರು ಆಟೋ ಚಾಲಕರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ, ಡಿವೈಎಸ್ಪಿ ಸ್ನೇಹರಾಜ್‌ ಮಾರ್ಗದರ್ಶನದಲ್ಲಿ ತಾಲೂಕಿನ ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಮೋಹಿತ್‌ ಸಹದೇವ್‌ ನೇತೃತ್ವದ ತಂಡ ಮೂವರು ಕೊಲೆ ಆರೋಪಿಗಳ ಬಂಧಿಸಿದ್ದು ಅಲ್ಲದೆ ಕದ್ದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಕಮರಹಳ್ಳಿ ಬಳಿ ಕಳೆದ ಮೂರು ದಿನಗಳ ಹಿಂದೆ ಬೇಗೂರು ಗ್ರಾಮದ ನಿವಾಸಿ, ಮೂಲತಃ ಹಾಲಹಳ್ಳಿ ಗ್ರಾಮದ ಎಚ್.ಎಂ.ಸ್ವಾಮಿ ಕೊಲೆಯಾದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು.ಕೊಲೆ ಸ್ಥಿತಿಯಲ್ಲಿದ್ದ ಎಚ್.ಎಂ.ಸ್ವಾಮಿ ಮೃತ ದೇಹ ಗಮನಿಸಿದ ಮೃತ ಪತ್ನಿ ಅಮ್ಮಯ್ಯ ಬಾಯಿ ಇದು ಕೊಲೆ ಎಂದು ದೂರು ನೀಡಿದ ನಂತರ ಎಚ್ಚೆತ್ತ ಪೊಲೀಸರು ತಾಲೂಕಿನ ತೊಂಡವಾಡಿ ಗ್ರಾಮದ ಆಟೋ ಚಾಲಕರಾದ ಪರಶಿವ, ಸಿದ್ದರಾಜು, ಬೆಳಚಲವಾಡಿ ಗ್ರಾಮದ ಮಹೇಶ್‌ ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ಕೊಲೆಗೈದಿದ್ದನ್ನು ಒಪ್ಪಿಕೊಂಡಿದ್ದಾರೆ.

ಕೊಲೆ ಮಾಡಿದ್ದನ್ನು ಒಪ್ಪಿ ಕೊಂಡ ಮೂವರು ಆರೋಪಿಗಳನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಬೇಗೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಮೈಮೇಲಿದ್ದ ಚಿನ್ನಾಭರಣ ಕೊಲೆಗೆ ಕಾರಣ:

ಕೊಲೆ ಆರೋಪದ ಮೇಲೆ ಬಂಧಿತರಾದ ಮೂವರು ಆರೋಪಿಗಳನ್ನು ಪೊಲೀಸರು ವಿಚಾರಣೆ ಒಳಪಡಿಸಿದ ಬಳಿಕ ಕೊಲೆಯಾದ ಎಚ್.ಎಂ.ಸ್ವಾಮಿ ಮೈ ಮೇಲೆ ಹಾಕಿದ್ದ ಚಿನ್ನಾಭರಣವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.

ಕೊಲೆ ಪ್ರಕರಣದ ಪ್ರಮುಖ ಆರೋಪಿ ತೊಂಡವಾಡಿ ಪರಶಿವ ಕೊಲೆಯಾದ ಎಚ್.ಎಂ.ಸ್ವಾಮಿ ಬಳಿ ಬಡ್ಡಿಗೆ ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ. ಸಾಲ ಪಡೆದ ಪರಶಿವನಿಗೆ ಕೊಲೆಯಾದ ಎಚ್.ಎಂ.ಸ್ವಾಮಿ ಸಾಲ ಹಣ ವಾಪಸ್‌ ಕೇಳುತ್ತಿದ್ದರು ಎನ್ನಲಾಗಿದೆ.

ಸಾಲದ ಕಾಟ ತಾಳಲಾರದೆಯೋ ಅಥವಾ ಕೊಲೆಯಾದ ಎಚ್.ಎಂ.ಸ್ವಾಮಿಯ ಮೈ ಮೇಲಿದ್ದ ಚಿನ್ನಾಭರಣ ದೋಚಲು ಎಳೆದೊಯ್ದು ಕತ್ತಿಗೆ ಟವಲ್‌ನಿಂದ ಸಾಯಿಸಿದ್ದಾರೆ ಎನ್ನಲಾಗುತ್ತಿದೆ.

PREV

Recommended Stories

ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ
ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ