ಮೂರ್ನಾಡು: ತಟ್ಟಂಡ ತಂಡಕ್ಕೆ ಗೆಜ್ಜೆ ತಂಡ್ ಟ್ರೋಫಿ: ಆಲಚಂಡ ರನ್ನರ್ ಅಪ್

KannadaprabhaNewsNetwork |  
Published : May 02, 2024, 12:22 AM IST
ಚಿತ್ರ : 1ಎಂಡಿಕೆ2 : ತಟ್ಟಂಡ ಬೊಮ್ಮಂಜಿಕೇರಿ ತಂಡ ಗೆಜ್ಜೆತಂಡ್ ಟ್ರೋಫಿಯನ್ನ ಮುಡಿಗೇರಿಸಿಕೊಂಡಿತು.  | Kannada Prabha

ಸಾರಾಂಶ

ಮೂರ್ನಾಡಿನಲ್ಲಿ ಮೂರು ದಿನಗಳ ಕಾಲ ನಡೆದ ಐರಿ ಜನಾಂಗದ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಕ್ರೀಡಾ ಕೂಟಕ್ಕೆ ವಿಧ್ಯುಕ್ತ ತೆರೆ ಬಿದ್ದಿದೆ. ಕ್ರಿಕೆಟ್ ನಲ್ಲಿ ತಟ್ಟಂಡ ಬೊಮ್ಮಂಜಿಕೇರಿ ತಂಡ ಗೆಜ್ಜೆತಂಡ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ತಟ್ಟಂಡ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆಲಚಂಡ ತಂಡವನ್ನ ಮಣಿಸಿ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಮೂರ್ನಾಡು

ಇಲ್ಲಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಐರಿ ಜನಾಂಗದ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಕ್ರೀಡಾ ಕೂಟಕ್ಕೆ ವಿಧ್ಯುಕ್ತ ತೆರೆ ಬಿದ್ದಿದೆ.

ಕ್ರಿಕೆಟ್ ನಲ್ಲಿ ತಟ್ಟಂಡ ಬೊಮ್ಮಂಜಿಕೇರಿ ತಂಡ ಗೆಜ್ಜೆತಂಡ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ತಟ್ಟಂಡ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆಲಚಂಡ ತಂಡವನ್ನ ಮಣಿಸಿ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಟ್ಟಂಡ ತಂಡ ಏಳು ಬಾರಿಯ ಚಾಂಪಿಯನ್ ಬಲ್ಲಮಾವಟಿ ಐರೀರ ತಣಡವನ್ನು 12 ರನ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆಲಚಂಡ ತಂಡ ಮುಲ್ಲೈರಿರ ತಂಡವನ್ನು 35 ರನ್‌ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಪ್ರಶಸ್ತಿ ವಿಜೇತ ತಂಡಕ್ಕೆ 25 ಸಾವಿರ ರು. ಮೌಲ್ಯದ ಗೆಜ್ಜೆ ತಂಡ್ ಮತ್ತು 15 ಸಾವಿ ರು. ನಗದು ನೀಡಿ ಪುರಸ್ಕರಿಸಲಾಯಿತು. ಕ್ರಿಕೆಟ್ ಹಣಾಹಣಿಯಲ್ಲಿ ಒಟ್ಟು 20 ತಂಡಗಳು ಪಾಲ್ಗೊಂಡಿದ್ದವು.

ಮಂಜನೈರೀರ ಹುದಿಕೇರಿ ತಂಡ ಚಾಂಪಿಯನ್:

ಮಹಿಳೆಯರಿಗಾಗಿ ನಡೆದ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಹುದಿಕೇರಿಯ ಮಂಜನೈರಿರ ಕುಟುಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಈ ತಂಡ ಬಬ್ಬೀರ ಬೇಂಗ್ ನಾಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಸೆಮಿಫೈನಲ್ ಪಂದ್ಯದಲ್ಲಿ ಮಂಜನೈರಿರ ತಂಡ ಹಾಲೇರಿ ಕೇತೋರಿ ಒಕ್ಕವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರೆ ಮತ್ತೊಂದು ಉಪಾಂತ್ಯ ಪಂದ್ಯದಲ್ಲಿ ಬಬ್ಬಿರ ತಂಡ ಐಮಂಡ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ

ಲಗ್ಗೆ ಇಟ್ಟಿತು.

ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ, ಕಾವೇರಿ ಹುಟ್ಟಿದಾಗಿನಿಂದಲೇ ಕೊಡಗಿನಲ್ಲಿ ಐರಿ ಜನಾಂಗ ನೆಲೆಸಿದ್ದು, ಜಿಲ್ಲೆಯ ಆಭರಣ ಮತ್ತು ಆಯುಧ ಸಂಸ್ಕೃತಿಗೆ ಈ ಜನಾಂಗದ ಕೊಡುಗೆ ಅಪಾರ ಎಂದು ಕೊಂಡಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಐರಿ ಸಮಾಜ ಈಗಾಗಲೇ ಅರಮೇರಿ ಬಳಿ 1.20 ಎಕರೆ ಜಾಗ ಖರೀದಿಸಿದ್ದು ಸಮಾಜ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು. ಮುಂದಿನ ನಾಲ್ಕು ವರ್ಷಗಳಲ್ಲಿ ಸಮಾಜ ನಿರ್ಮಾಣ ಸಂಪೂರ್ಣಗೊಳಿಸುವ ವಿಶ್ವಾಸವಿದ್ದು ಇದಕ್ಕೆ ಜನಾಂಗ ಬಾಂಧವರು ಸಹಾಯ ಮಾಡುವಂತೆ ಕರೆ ನೀಡಿದರು. ಸರ್ಕಾರದಿಂದಲೂ ಅಗತ್ಯ ಅನುದಾನ ಒದಗಿಸಿಕೊಡುವಂತೆ ಶಾಸಕ ಪೊನ್ನಣ್ಣ ಅವರನ್ನು ಮನವಿ ಮಾಡಿದರು.

ಸೋಮವಾರಪೇಟೆ ವಿಭಾಗದ ಎಸಿಎಫ್ ಎಎ ಗೋಪಾಲ, ಎಂಬಿಬಿಎಸ್ ಪ್ರವೇಶ ಪಡೆದ ವಿದ್ಯಾರ್ಥಿ ಅಯ್ಯಣಿರ ಲಿಶಾನ್ ಅವರಿಗೆ 25 ಸಾವಿರ ರು. ಪ್ರೋತ್ಸಾಹ ಧನ ವಿತರಿಸಿದರು.

ಬಳಿಕ ಮಾತನಾಡಿದ ಅವರು ಪ್ರತಿ ವರ್ಷ ಎಂಬಿಬಿಎಸ್ ಪ್ರವೇಶ ಪಡೆಯುವ ಒಬ್ಬ ಐರಿ ಜನಾಂಗದ ವಿದ್ಯಾರ್ಥಿಗೆ 25 ಸಾವಿರ ರು. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿರಾಜಪೇಟೆ ಶಿರಸ್ತೇದಾರ್ ಅಂಜಪಂಡ ಪ್ರಕಾಶ್, ಜನಾಂಗದ ಒಗ್ಗೂಡುವಿಕೆಗೆ ಈ ತರಹದ ಕ್ರೀಡಾಕೂಟಗಳು ಬಹಳ ಸಹಕಾರಿ ಎಂದರು.

ಗನ್ ಶಾಟ್ ಮಾಲಿಕ ಬೋಳೈರಿರ ದಿನೇಶ್, ಆರ್‌ಎಫ್‌ಒ ಮಾಲೆರ ಚರಣ್, ಐರಿ ಸಮಾಜ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಕಾರ್ಯದರ್ಶಿ ಕಾಮೆಯಂಡ ಗಣೇಶ್, ವಕೀಲ ಐಮಂಡ ನಾಚಪ್ಪ, ನಿವೃತ್ತ ಸೈನಿಕ ಮುಲ್ಲೈರಿರ ಸುಬ್ಬಯ್ಯ, ಐನಂಗಡ ಕಾರ್ಯಪ್ಪ, ಐರೀರ ಪ್ರೇಮಾ ಕಾರ್ಯುಪ್ಪ, ಮಾಲೆರ ಕಾವೇರಮ್ಮ ಉಮೇಶ್, ಐನಂಗಡ ಚಿತ್ರಾ, ಐನಂಗಡ ಡಾ. ದಿಲನ್ ಮುತ್ತಣ್ಣ, ಐಮಂಡ ರೂಪೇಶ್ ನಾಣಯ್ಯ, ಮುಲ್ಲೈರಿರ ರೋಷನ್ ಸುಬ್ಬಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪುಟ್ಟ ಮಕ್ಕಳಿಗೆ 75 ಮೀಟರ್ ಓಟ, ಮಹಿಳೆಯರಿಗೆ ಪಾಸಿಂಗ್ ದಿ ಬಾಲ್, 50 ವರ್ಷ ಮೇಲ್ಪಟ್ಟ ಪುರುಷರಿಗೆ 100 ಮೀಟರ್ ಓಟ ಸ್ಪರ್ಧೆ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ
ಶ್ರೀಮಂತರು ಗ್ಯಾರಂಟಿ ಸೌಲಭ್ಯ ಕೈಬಿಡಿ: ಎಂಬಿಪಾ - ಮಾತು ತಪ್ಪಿದ ಸರ್ಕಾರ: ಅಶೋಕ್‌ ಕಿಡಿ