ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿದ್ಯಾಪೀಠದ ಆಡಳಿತ ಮಂಡಳಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್‌ಜೆಎಂ ವಿಶ್ವವಿದ್ಯಾಲಯ ತನ್ನ ಚಟುವಟಿಕೆ ಆರಂಭಿಸಲಿದೆ. ಏಳು ಪ್ರಮುಖ ವೃತ್ತಿಪರ ಕಾಲೇಜುಗಳನ್ನು ಅಧಿಕೃತವಾಗಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರಲಾಗುತ್ತಿದೆ. ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಎಸ್‌ಜೆಎಂ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಎಸ್‌ಜೆಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಸ್‌ಜೆಎಂ ಫಾರ್ಮಸಿ ಕಾಲೇಜು, ಎಸ್‌ಜೆಎಂ ನರ್ಸಿಂಗ್ ಕಾಲೇಜು, ಬಸವೇಶ್ವರ ಅಲೈಡ್ ಹೆಲ್ತ್ ಸೆನ್ಸ್ ಕಾಲೇಜು ಹಾಗೂ ಬಸವೇಶ್ವರ ಫಿಸಿಯೋಥೆರಪಿ ಕಾಲೇಜುಗಳನ್ನು ನೂತನ ವಿವಿ ಒಳಗೊಂಡಿದೆ. ಎಲ್ಲಾ ಪ್ರವೇಶಗಳು, ಶೈಕ್ಷಣಿಕ ಆಡಳಿತ, ಪಠ್ಯಕ್ರಮ ವಿನ್ಯಾಸ ಮತ್ತು ಪರೀಕ್ಷೆಗಳು ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯಲಿವೆ ಎಂದರು.
ಎಸ್‌ಜೆಎಂ ವಿಶ್ವವಿದ್ಯಾಲಯ ಚಿತ್ರದುರ್ಗದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ. ಜಾಗತಿಕ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಎಸ್‌ಜೆಎಂ ವಿಶ್ವವಿದ್ಯಾಲಯವು ಸಂಶೋಧನಾ ಆಧಾರಿತ ಮತ್ತು ಫಲಿತಾಂಶ ಕೇಂದ್ರಿತ ಶಿಕ್ಷಣ ಮಾದರಿಯ ಮೂಲಕ ಮುಂದಿನ ತಲೆಮಾರಿನ ನಾಯಕರನ್ನು, ಪಂಡಿತರನ್ನು ಮತ್ತು ಆವಿಷ್ಕಾರಕರನ್ನು ಬೆಳೆಸಲು ಬದ್ಧವಾಗಿದೆ. ವಿಶ್ವವಿದ್ಯಾಲಯದ ತತ್ವಶಾಸ್ತ್ರವು ಶೈಕ್ಷಣಿಕ ಕಠಿಣತೆ, ನೈತಿಕ ಅಖಂಡತೆಯನ್ನು ದೃಷ್ಟಿಯಲ್ಲಿರಿಸಿಕೊಂಡಿದೆ. ಅಂಗಸಂಸ್ಥೆಗಳ ಸಾಮೂಹಿಕ ಬೆಂಬಲದೊಂದಿಗೆ ಸಮಗ್ರ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳುತ್ತಿದೆ. ಅತ್ಯಾಧುನಿಕ ಸೌಲಭ್ಯಗಳು, ನುರಿತ ಶೈಕ್ಷಣಿಕ ತಜ್ಞರು, ಆಡಳಿತ ಮಂಡಳಿಯ ಸಹಕಾರದೊಂದಿಗೆ ಯಶಸ್ವಿ ಸಂಸ್ಥೆಯಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಶ್ರೀ ಶಾಂತವೀರ ಮುರಿಗೇ ಸ್ವಾಮೀಜಿಯ ಆದರ್ಶಗಳಿಂದ ಪ್ರೇರಿತವಾಗಿ ಎಸ್‌ಜೆಎಂ ವಿಶ್ವವಿದ್ಯಾಲಯವು ಜ್ಞಾನ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಪರಿವರ್ತನೆಯ ದೀಪವಾಗಲು ಆಶಿಸುತ್ತಿದೆ ಎಂದರು.ಎಐ (ಕೃತಕ ಬುದ್ದಿಮತ್ತೆ) ಆರೋಗ್ಯ, ಆವಿಷ್ಕಾರ ಮತ್ತು ಸುಸ್ಥಿರ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ, ಉದ್ಯಮ ಸಂಯೋಜಿತ ಪಠ್ಯಕ್ರಮ, ಇಂಟರ್ನ್ಶಿಪ್ ಮತ್ತು ಪ್ಲೇಸ್‌ಮೆಂಟ್ ಬೆಂಬಲ, ಸಂಶೋಧನಾ ಮೂಲಸೌಕರ್ಯ ಮತ್ತು ಪ್ರಾಯೋಜಿತ ಯೋಜನೆಗಳ ಬಲಪಡಿಕೆ, ಜಾಗತಿಕ ಸಹಕಾರ, ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯ ಕಾರ್ಯಕ್ರಮಗಳು, ಇಆರ್‌ಪಿ, ಸ್ಮಾರ್ಟ್ ಕ್ಯಾಂಪಸ್ ಮುಂತಾದ ಡಿಜಿಟಲ್ ವ್ಯವಸ್ಥೆಗಳ ಅನುಷ್ಠಾನ ವಿವಿ ಅಡಿಯಲ್ಲಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಎಸ್‌ಜೆಎಂ ವಿಶ್ವವಿದ್ಯಾಲಯವು ಶೈಕ್ಷಣಿಕ ಕಠಿಣತೆ, ಪ್ರಾಯೋಗಿಕ ಅನುಭವ ಮತ್ತು ಆವಿಷ್ಕಾರವನ್ನು ಸಂಯೋಜಿಸುವ ಮೂಲಕ ಉನ್ನತ ಶಿಕ್ಷಣದ ಮಾನದಂಡಗಳನ್ನು ಮರುಪರಿಭಾಷಿಸಲು ಬದ್ಧವಾಗಿದೆ. ಸಂಸ್ಥೆಗಳ ಏಕೀಕರಣವು ಚಿತ್ರದುರ್ಗ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಹೊಸಯುಗದ ಆರಂಭವಾಗಿದೆ. ಪ್ರಸಕ್ತ 2026-27ನೇ ಸಾಲಿನಿಂದ ಎಸ್‌ಜೆಎಂ ವಿಶ್ವವಿದ್ಯಾಲಯದ ಅಡಿಯಲ್ಲಿ ತಿಳಿಸಲಾಗಿರುವ ಎಲ್ಲಾ ಪ್ರವೇಶಾತಿಗಳು ನಡೆಯುತ್ತವೆ. ಆದರೆ ಈಗಾಗಲೇ ಪ್ರವೇಶಾತಿ ಪಡೆದು ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಪದವಿ ಮುಗಿಯುವವರೆಗೆ ಮುಂದುವರೆಯುತ್ತಾರೆ.
ಇದೇ ಸಂದರ್ಭದಲ್ಲಿ 2026ನೇ ಸಾಲಿನ ವಿಶ್ವವಿದ್ಯಾಲಯದ ದಿನಚರಿ ಬಿಡುಗೊಳಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ ಸುದ್ದಿಗೋಷ್ಠಿಯಲ್ಲಿ ಇದ್ದರು.