ರಾಜ್ಯದಲ್ಲಿ ಐಸಿಸ್‌ ಜಾಲ ಸ್ಥಾಪನೆಗೆ ಮುಸಾವೀರ್‌, ಮತೀನ್‌ ಸಂಚು!

KannadaprabhaNewsNetwork |  
Published : Apr 14, 2024, 01:50 AM ISTUpdated : Apr 14, 2024, 08:23 AM IST
Pakistani terrorist

ಸಾರಾಂಶ

ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಅತ್ಯುಗ್ರ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ಸ್‌ (ಐಸಿಸ್‌) ಅನ್ನು ಕಟ್ಟಲು ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹಾ ಕಮಾಂಡರ್‌ಗಳಾಗಿ ಕಾರ್ಯನಿರ್ವಹಿಸಿದ್ದರು ಎಂಬ ಸಂಗತಿ ಬಯಲಾಗಿದೆ.

ಗಿರೀಶ್ ಮಾದೇನಹಳ್ಳಿ 

ಬೆಂಗಳೂರು : ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಅತ್ಯುಗ್ರ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ಸ್‌ (ಐಸಿಸ್‌) ಅನ್ನು ಕಟ್ಟಲು ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹಾ ಕಮಾಂಡರ್‌ಗಳಾಗಿ ಕಾರ್ಯನಿರ್ವಹಿಸಿದ್ದರು ಎಂಬ ಸಂಗತಿ ಬಯಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸಾಮಾಜಿಕ ಸೇವೆ ನೆಪದಲ್ಲಿ ಮುಸ್ಲಿಂ ಸಮುದಾಯದ ಯುವಕರನ್ನು ಸೆಳೆದಿದ್ದ ಮುಸಾವೀರ್ ಹಾಗೂ ಮತೀನ್‌ ಜೋಡಿ, ಆ ಯುವಕರ ತಲೆಗೆ ಇಸ್ಲಾಂ ಮೂಲಭೂತವನ್ನು ತುಂಬಿ ಐಸಿಸ್‌ಗೆ ನೇಮಕಗೊಳಿಸಿದ್ದರು ಎನ್ನಲಾಗಿದೆ.

ಕಳೆದ ಮೂರು ವರ್ಷಗಳ ಅ‍ವಧಿಯಲ್ಲಿ ರಾಜ್ಯದಲ್ಲಿ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಕಚ್ಚಾ ಬಾಂಬ್ ತಯಾರಿಸಿ ಪ್ರಯೋಗ ಹಾಗೂ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಕೃತ್ಯದಲ್ಲಿ ನೇರವಾಗಿ ‘ಶಿವಮೊಗ್ಗದ ಐಸಿಸ್ ಮಾಡ್ಯುಲ್‌ ಪಾತ್ರವಹಿಸಿದೆ. ಈ ಚಟುವಟಿಕೆಗಳ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಎಐ) ಮೋಸ್ಟ್ ವಾಟೆಂಡ್‌ ಲಿಸ್ಟ್‌ನಲ್ಲಿ ಮತೀನ್ ಹಾಗೂ ಮುಸಾವೀರ್‌ ಜೋಡಿ ಹೆಸರಿತ್ತು. ಕಳೆದ ನಾಲ್ಕು ವರ್ಷಗಳಿಂದ ಎನ್‌ಐಎ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಈ ಜೋಡಿಗೆ 10 ಲಕ್ಷ ರು. ಬಹುಮಾನ ಘೋಷಿಸಿತ್ತು.

ದುವಾ ಸೆಂಟರ್‌ನಲ್ಲಿ ಜಿಹಾದಿ ಬೋಧನೆ

ದಕ್ಷಿಣ ಭಾರತದ ಐಸಿಸ್ ಸಂಘಟನೆಗೆ ‘ಅಲ್ ಹಿಂದ್ ಐಸಿಸ್‌’ ಎಂದು ಹೆಸರಿಡಲಾಗಿತ್ತು. ಇದಕ್ಕೆ ತಮಿಳುನಾಡು ಮೂಲದ ಮೊಹಿದ್ದೀನ್ ಖ್ವಾಜಾ ಕಮಾಂಡರ್ ಆಗಿದ್ದರೆ, ಆ ಸಂಘಟನೆಗೆ ಬೆಂಗಳೂರಿನ ಗುರಪ್ಪನಪಾಳ್ಯದ ಮೆಹಬೂಬ್ ಪಾಷ ಕ್ಯಾಪ್ಟನ್‌ ಆಗಿದ್ದ. ಈ ಸಂಘಟನೆಯಲ್ಲಿ ಶಿವಮೊಗ್ಗದ ಮತೀನ್‌ ಹಾಗೂ ಮುಸಾವೀರ್‌ ಸಕ್ರಿಯ ಸದಸ್ಯರಾಗಿದ್ದರು. ಹೀಗಾಗಿಯೇ ಗುರಪ್ಪನಪಾಳ್ಯದಲ್ಲಿ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಐಸಿಸ್ ಸಂಘಟನೆಗೆ ಮುಸ್ಲಿ ಯುವಕರನ್ನು ಮೆಹಬೂಬ್ ಪಾಷ ಸೆಳೆದಿದ್ದ.

ಅದೇ ರೀತಿ ಶಿವಮೊಗ್ಗದಲ್ಲಿ ‘ದುವಾ’ ಹೆಸರಿನ ಎನ್‌ಜಿಓ ಕಚೇರಿಯನ್ನು ಮತೀನ್ ಹಾಗೂ ಶಾಜಿಬ್ ತೆರೆದಿದ್ದರು. ಈ ದುವಾ ಕೇಂದ್ರಕ್ಕೆ ಸಾಮಾಜಿಕ ಸೇವೆ ಹೆಸರಿನಲ್ಲಿ ಮುಸ್ಲಿಂ ಯುವಕರನ್ನು ಸೇರಿಸಿ ಜಿಹಾದಿ ಬೋಧಿಸುತ್ತಿದ್ದರು. ಇವರ ಪ್ರೇರಣೆಯಿಂದಲೇ ವಿದ್ಯಾರ್ಥಿಗಳಾಗಿದ್ದ ಮಾಝ ಮುನೀರ್ ಅಹಮ್ಮದ್‌, ಶಾರೀಕ್ ಅಹಮ್ಮದ್‌, ಸಾದತ್ ಹಾಗೂ ಅರಾಫತ್ ಆಲಿ ಐಸಿಸ್‌ ಸೇರಿದ್ದರು. ಈ ನಾಲ್ವರು ಮೊದಲು ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿಬಿದ್ದರು. ಆನಂತರ ಕುಕ್ಕರ್ ಸ್ಫೋಟದಲ್ಲಿ ಶಾರೀಕ್ ಹಾಗೂ ಶಿವಮೊಗ್ಗದಲ್ಲಿ ಬಾಂಬ್ ಪ್ರಯೋಗ ಪ್ರಕರಣದಲ್ಲಿ ಮತ್ತೆ ಸೆರೆಯಾದ ಮಾಝ ಮುನೀರ್‌ ಈಗ ರಾಮೇಶ್ವರಂ ಕೆಫೆ ಕೃತ್ಯದಲ್ಲಿ ಆರೋಪಿಯಾಗಿದ್ದಾನೆ.

2021ರಿಂದ ತಲೆಮರೆಸಿಕೊಂಡಿದ್ದ ಶಂಕಿತರು

2021 ಜನವರಿಯಲ್ಲಿ ಸದ್ದುಗುಂಟೆಪಾಳ್ಯದಲ್ಲಿ ದಕ್ಷಿಣ ಭಾರತದ ಐಸಿಸ್‌ ಕಮಾಂಡರ್ ಮೊಯಿದ್ದೀನ್ ಖ್ವಾಜಾ ತಂಡವನ್ನು ಎನ್‌ಐಎ ಹಾಗೂ ಸಿಸಿಬಿ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದವು. ಅಂದು ತಪ್ಪಿಸಿಕೊಂಡ ಮತೀನ್‌ ಹಾಗೂ ಮುಸಾವೀರ್‌ ಈಗ ಕೆಫೆ ಸ್ಫೋಟ ಕೃತ್ಯದಲ್ಲಿ ಮೂರು ವರ್ಷಗಳ ಬಳಿಕ ಎನ್‌ಐಎ ಗಾಳಕ್ಕೆ ಸಿಲುಕಿದ್ದಾರೆ.

ಐಸಿಸ್‌ ಸಂಘಟನೆಗೆ ತೀರ್ಥಹಳ್ಳಿ ತಾಲೂಕಿನ ಮೊಹಮ್ಮದ್ ಶಾರೀಕ್, ಎಂಜಿನಿಯರಿಂಗ್ ಪದವೀಧರ ಅರಾಫತ್ ಅಲಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮಾಝ ಮುನೀರ್‌ ಅಹ್ಮದ್‌ ಮತ್ತು ಸಾದತ್‌ಗೆ ಮುಸ್ಲಿಂ ಮೂಲಭೂತವಾದಿ ಬೋಧಿಸಿ ಮತೀನ್ ಹಾಗೂ ಮುಸಾವೀರ್ ಸೆಳೆದಿದ್ದರು. ಈ ವಿದ್ಯಾರ್ಥಿಗಳನ್ನು ಬಳಸಿಕೊಂಡು 2020ರ ನವೆಂಬರ್‌ನಲ್ಲಿ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಬರೆಸಿದ್ದರು. ಈ ಪ್ರಕರಣದಲ್ಲಿ ಶಾರೀಕ್ ಹಾಗೂ ಆತನ ಸ್ನೇಹಿತರು ಜೈಲು ಸೇರಿದ್ದರು. ಪೊಲೀಸರ ತನಿಖೆಯಲ್ಲಿ ಗೋಡೆ ಬರಹ ಕೃತ್ಯದ ಹಿಂದೆ ಐಸಿಸ್ ಕೈವಾಡ ಬಯಲಾಗಿತ್ತು. ಈ ಘಟನೆ ಬಳಿಕ ಸದ್ದುಗುಂಟೆಪಾಳ್ಯದಲ್ಲಿ ಐಸಿಸ್‌ ಮುಖಂಡ ಖ್ವಾಜಾ ಹಾಗೂ ಆತನ ಸಹಚರರು ಸಿಕ್ಕಿಬಿದ್ದರು. ಈ ದಾಳಿಯಲ್ಲಿ ತಪ್ಪಿಸಿಕೊಂಡ ಮತೀನ್ ಹಾಗೂ ಮುಸಾವೀರ್, ಅಜ್ಞಾತವಾಗಿದ್ದುಕೊಂಡೇ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಸಂಚು ರೂಪಿಸಿದ್ದರು.

ಕೊಯಮತ್ತೂರು ಬ್ಲಾಸ್ಟ್‌ನಲ್ಲಿ ತೀರ್ಥಹಳ್ಳಿ ಜೋಡಿ

2022 ಅಕ್ಟೋಬರ್‌ 23ನಲ್ಲಿ ಕೊಯಮತ್ತೂರಿನಲ್ಲಿ ಸಹ ಮಂಗಳೂರಿನ ಮಾದರಿಯಲ್ಲೇ ಬಾಂಬ್ ಸ್ಫೋಟಕವಾಗಿತ್ತು. ಬಾಂಬ್ ತೆಗೆದುಕೊಂಡು ಕಾರಿನಲ್ಲಿ ಹೋಗುವಾಗ ಆಕಸ್ಮಿಕವಾಗಿ ಸ್ಫೋಟಗೊಂಡು ಐಸಿಸ್‌ ಶಂಕಿತ ಉಗ್ರ ಜಮೇಶ್ ಮುಬೀನ್ ಸಾವನ್ನಪ್ಪಿದ್ದ. ಈ ಕೃತ್ಯ ನಡೆದ ತಿಂಗಳಿನಲ್ಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಕವಾಗಿತ್ತು. ಈ ಕೃತ್ಯದಲ್ಲಿ ಮುಸಾವೀರ್ ಸಹಚರ ಶಾರೀಕ್‌ ಗಾಯಗೊಂಡಿದ್ದ. ಈ ಹಿನ್ನಲೆಯಲ್ಲಿ ಕೊಯಮತ್ತೂರು ಸ್ಫೋಟದಲ್ಲಿ ಸಹ ಮುಸಾವೀರ್ ಹಾಗೂ ಮತೀನ್ ಪಾತ್ರವಹಿಸಿರುವ ಬಗ್ಗೆ ಎನ್‌ಐಎ ಶಂಕೆ ವ್ಯಕ್ತಪಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ
ತೈಲ ಕೊರತೆ ವದಂತಿ: ಖರೀದಿಗೆ ಮುಗಿಬಿದ್ದ ಜನ-ಬಂಕ್‌ಗಳಲ್ಲಿ ಭಾರೀ ರಷ್‌