ಗ್ರಾಮೀಣ ಮಹಿಳೆಯರಿಗೆ 10 ದಿನಗಳ ಕಾಲ ಅಣಬೆ ಕೃಷಿ ತರಬೇತಿ

KannadaprabhaNewsNetwork |  
Published : Jan 22, 2026, 02:00 AM IST
21ಕೆಎಂಎನ್ ಡಿ21 | Kannada Prabha

ಸಾರಾಂಶ

ರೈತರು, ಮಹಿಳೆಯರು ವಿಜ್ಞಾನಿಗಳಿಂದ ವೈಜ್ಞಾನಿಕ ಮಾಹಿತಿ ಪಡೆದು ಕೃಷಿ ಮೂಲಕ ಸುಸ್ಥಿರ ಆದಾಯ ಗಳಿಸಬಹುದು. ಅಣಬೆಗಳು ಶಿಲೀಂದ್ರ ವರ್ಗಕ್ಕೆ ಸೇರಿದ ಸೂಕ್ಷ್ಮ ಜೀವಾಣುಗಳು. ದೇಶದಲ್ಲಿ ಹಲವು ವಿಧವಾದ ಅಣಬೆಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಶಂಭೂನಹಳ್ಳಿಯಲ್ಲಿ 10 ದಿನಗಳ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿಗೆ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣಾಭಿವೃದ್ಧಿ ತರಬೇತಿ ಕೇಂದ್ರದ ನಿರ್ದೇಶಕ ಟಿ.ಪ್ರಸನ್ನಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬುಜ್ ವುಮೇನ್ ಸಂಸ್ಥೆ ಹಾಗೂ ಬ್ಯಾಂಕ್ ಆಫ್ ಬರೋಡಾ, ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಹಯೋಗದಲ್ಲಿ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಬ್ಯಾಂಕ್ ಆಫ್ ಬರೋಡಾ ತರಬೇತಿ ಸಂಸ್ಥೆಯ ಡಿ.ಎಸ್.ರವಿ ಅಣಬೆ ಬೇಸಾಯದ ಬಗ್ಗೆ ವಿವರಿಸಿ, ರಾಜ್ಯದಲ್ಲಿ 150 ಟನ್ ಉತ್ಪಾದನೆ ಬೇಕಾಗಿದ್ದು, ಈಗ ಕೇವಲ 50 ಟನ್ ಮಾತ್ರ ಪೂರೈಕೆಯಾಗುತ್ತಿದೆ. ಇಂದು ಅಣಬೆ ತಿನ್ನುವುವವರ ಸಂಖ್ಯೆ ಹೆಚ್ಚಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉಪಯೋಗ ಎಂದರು.

ರೈತರು, ಮಹಿಳೆಯರು ವಿಜ್ಞಾನಿಗಳಿಂದ ವೈಜ್ಞಾನಿಕ ಮಾಹಿತಿ ಪಡೆದು ಕೃಷಿ ಮೂಲಕ ಸುಸ್ಥಿರ ಆದಾಯ ಗಳಿಸಬಹುದು. ಅಣಬೆಗಳು ಶಿಲೀಂದ್ರ ವರ್ಗಕ್ಕೆ ಸೇರಿದ ಸೂಕ್ಷ್ಮ ಜೀವಾಣುಗಳು. ದೇಶದಲ್ಲಿ ಹಲವು ವಿಧವಾದ ಅಣಬೆಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಅವುಗಳಲ್ಲಿ ಕೆಲವು ವಿಷಪೂರಿತವಾದವು. ಇನ್ನು ಕೆಲವು ತಿನ್ನಲು ಯೋಗ್ಯವಾಗಿವೆ ಎಂದರು.

ತಿನ್ನುವ ಅಣಬೆಗಳು ಇತರೆ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕಾಂಶ ಹೊಂದಿವೆ. ಅಣಬೆಗಳಲ್ಲಿ ಹೇರಳ ಪೊಟೀನ್, ಜೀವಸತ್ವಗಳು, ಹೆಚ್ಚು ಸಾರಜನಕ, ಮುಖ್ಯವಾದ ಅನ್ನಾಂಗಗಳು ಮತ್ತು ಖನಿಜಗಳು ಇವೆ. ತಿನ್ನುವ ಅಣಬೆಗಳಲ್ಲಿ ಸಕ್ಕರೆ ಮತ್ತು ಕಬ್ಬಿಣ ಅಂಶ ಕಡಿಮೆ ಇರುವುದರಿಂದ ಮಧುಮೇಹ ರೋಗಿಗಳಿಗೆ ಮತ್ತು ಹೃದಯ ರೋಗಿಗಳಿಗೆ ಒಳ್ಳೆಯ ಆಹಾರ ಎಂದರು.

ಅಣಬೆ ಬೇಸಾಯವು ಅಲ್ಪಾವಧಿ ಬೆಳೆ ಮತ್ತು ಕೊಠಡಿಯೊಳಗೆ ಬೆಳೆಯುವ ಬೆಳೆ. ಇವುಗಳನ್ನು ಸ್ವಂತಕ್ಕೆ ಹವ್ಯಾಸವಾಗಿ ಅಥವಾ ವಾಣಿಜ್ಯ ಬೆಳೆ ಯಾಗಿ ಬೆಳೆಯಬಹುದೆಂದು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ಬುಜ್ ವುಮೇನ್ ಸಂಸ್ಥೆಯ ವ್ಯವಸ್ಥಾಪಕ ಬಾಲಕೃಷ್ಣ ಮಾತನಾಡಿ, ಸಂಸ್ಥೆಯಿಂದ ಜಿಲ್ಲೆಯ ಗ್ರಾಮೀಣ ಮಹಿಳೆಯರಿಗೆ ಹಲವು ರೀತಿಯ ತರಬೇತಿ ನೀಡಲಾಗುತ್ತಿದೆ. ವೈಯಕ್ತಿಕ ಹಾಗೂ ಕುಟುಂಬದ ಸ್ವಚ್ಛತೆ, ಪರಿಸರ ಸಂರಕ್ಷಣೆ, ಶುದ್ಧ ಕುಡಿಯುವ ನೀರು, ಆರೋಗ್ಯ, ತರಕಾರಿ ಗಿಡಗಳ ಆರೈಕೆ, ಮಣ್ಣಿನ ಪರೀಕ್ಷೆ ತರಬೇತಿ ನೀಡಲಾಗಿದೆ ಎಂದರು.

ಬುಜ್ ವುಮೇನ್ ಸಂಸ್ಥೆ ಎಸ್‌.ಎ.ಸುಜಾತ ಉಮೇಶ್ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸ್ಥಳೀಯವಾಗಿ ಉಚಿತ ತರಬೇತಿ ನೀಡುತ್ತಿದ್ದು, ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಈ ವೇಳೆ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಡಿ.ಪಿ.ಮಮತ ಭಾಗವಹಿಸಿದ್ದರು. ತರಬೇತಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!