ಕನ್ನಡಪ್ರಭ ವಾರ್ತೆ ಸಿರಿಗೆರೆ
ಇಲ್ಲಿನ ಐಕ್ಯಮಂಟಪದಲ್ಲಿ ಅಣ್ಣನ ಬಳಗದವರು ಆಯೋಜಿಸಿದ್ದ ಸರ್ವ ಶರಣರ ದಿನ ಹಾಗೂ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳು ಮಾತನಾಡಿದರು.
ಸಂಗೀತ ಮತ್ತು ಯೋಗಗಳನ್ನು ಅಳವಡಿಸಿಕೊಂಡರೆ ಮನಸ್ಸಿನಲ್ಲಿ ಸುಪ್ತ ಭಾವಗಳು ಅರಳುತ್ತವೆ. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕಾದರೆ ಸಂಗೀತ ಮತ್ತು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಗೀತ ಶಿಸ್ತನ್ನು ಕಲಿಸುವ ಮಹತ್ವದ ಸಾಧನವಾಗಿದ್ದು, ಅದು ಏಕಾಗ್ರತೆಯನ್ನು ಹೆಚ್ಚಿಸಿ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿಸುತ್ತದೆ ಎಂದು ತಿಳಿಸಿದರು.ಶಾಲಾ–ಕಾಲೇಜುಗಳ ಅಧ್ಯಾಪಕರು ಹಾಗೂ ಶಿಕ್ಷಕರು ಸಂಗೀತ ಮತ್ತು ಯೋಗಾಭ್ಯಾಸವನ್ನು ಕಲಿಯಲು ಮಕ್ಕಳಿಗೆ ಪ್ರೇರೇಪಣೆ ಮಾಡಬೇಕು. ತನ್ಮಯತೆಯಿಂದ ವಾದ್ಯ ನುಡಿಸಿದಾಗ ವಾದ್ಯ ಮತ್ತು ಶರೀರ ಒಂದಾಗುತ್ತದೆ. ಎನ್ನ ಕಾಯವ ದಂಡಿಗೆಯ ಮಾಡಯ್ಯ’ ಎಂಬ ಬಸವಣ್ಣನವರ ವಚನದಂತೆ ಸಂಗೀತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಸಂಗೀತವು ಕೇವಲ ಮನರಂಜನೆಗಾಗಿ ಅಲ್ಲ, ಅದು ಭಗವಂತನ ಆರಾಧನೆ ಹಾಗೂ ಆತ್ಮವಿಕಾಸಕ್ಕಾಗಿ ಆಗಬೇಕು. ಸಭಿಕರನ್ನು ಮೆಚ್ಚಿಸಲು ಮಾತ್ರವಾದ ಪ್ರದರ್ಶನವಾಗಬಾರದು. ಶಾಸ್ತ್ರೀಯ ಸಂಗೀತ ಭಗವಂತನನ್ನು ಮೆಚ್ಚಿಸುವ ಶ್ರೇಷ್ಠ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.ಭಾಷೆ ನಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಸಾಧನವಾಗಬೇಕು. ಆಗ ಭಕ್ತಿ ಭಾವವು ವ್ಯಕ್ತವಾಗುತ್ತದೆ. ಭಾರತೀಯ ಪರಂಪರೆಯ ಅತ್ಯದ್ಭುತ ಕಲೆಗಳನ್ನು ಮೈಗೂಡಿಸಿಕೊಂಡರೆ ಸಾಧನೆ ಗಟ್ಟಿಗೊಂಡು ಯಶಸ್ಸು ದೊರೆಯುತ್ತದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.
ತಮ್ಮ ಬಾಲ್ಯ ಜೀವನದ ಸಂಸ್ಕಾರವನ್ನು ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪಡೆದಿದ್ದಾಗಿ ಸ್ಮರಿಸಿದರು. ಸಂಗೀತ ಮಾಧುರ್ಯವು ಸುಸಂಸ್ಕೃತ ಮನಸ್ಸನ್ನು ರೂಪಗೊಳಿಸಿ, ವೀಣಾ ವಾದನ ಏಕಾಗ್ರತೆ ಹಾಗೂ ತನ್ಮಯತೆಯನ್ನು ತಂದುಕೊಡುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅಣ್ಣನ ಬಳಗದ ಅಧ್ಯಕ್ಷರು ಹಾಗೂ ಸದಸ್ಯರು, ಅಕ್ಕನ ಬಳಗದ ಸದಸ್ಯರು, ಶಾಲಾ–ಕಾಲೇಜುಗಳ ಪ್ರಾಚಾರ್ಯರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಚನ ಗಾಯನ ಮತ್ತು ಭರತನಾಟ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.