ಶಿವಮೊಗ್ಗ: ಹಳೆ ಹಾಡುಗಳ ಸಮ್ಮಿಲನ ಮನಸ್ಸಿಗೆ ಎಂದಿಗೂ ಮುದ ನೀಡುತ್ತದೆ ಎಂದು ಸಹಕಾರಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಹೇಳಿದರು.
ಸಂಗೀತ ಎಂಬುದು ಎಂತಹವರಿಗೂ ಆಕರ್ಷಿಸಬಲ್ಲ ಸಾಧನ. ಎಲ್ಲರಿಗೂ ಸಾಧಿಸಲಾಗದ ಸರಸ್ವತಿಯ ಕೊಡುಗೆ ಸಂಗೀತವಾಗಿದ್ದು, ಶಿವಮೊಗ್ಗದಲ್ಲಿ ಜನಮನ್ನಣೆ ಗಳಿಸಿರುವ ವಿದೂಷಿ ಸುರೇಖಾ ಹೆಗಡೆಯವರ ಸಾಧನೆ ನಿಜಕ್ಕೂ ಅಪರೂಪ ಎಂದ ಅವರು, ಇಂದಿನ ಆಧುನಿಕ ಯುಗದಲ್ಲಿ ಬದುಕಿನ ಜಂಜಾಟವನ್ನು ಮರೆತು, ಹಳೆಯ ಹಾಡುಗಳ ಸಂಗೀತ ಆಲಿಸುವುದೇ ರೋಮಾಂಚನ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಹಿನ್ನೆಲೆ ಗಾಯಕಿ ಸುರೇಖಾ ಹೆಗಡೆಯವರ ಸದಬಿರುಚಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದಕ್ಕೆ ಶ್ಲಾಘಿಸಿ, ಸ್ವರ್ಗಕ್ಕೆ ದಾರಿ ತೋರಿಸುವ ಒಂದು ಮಾರ್ಗವಿದ್ದರೆ ಅದು ಸಂಗೀತ ಮಾತ್ರ ಎಂದು ಬಣ್ಣಿಸಿದರು.ಇಂತಹ ಸದಬಿರುಚಿ ಕಾರ್ಯಕ್ರಮಗಳಿಂದಲೇ, ನಿಜವಾದ ಸಂಸ್ಕೃತಿ ಅನಾವರಣವಾಗುತ್ತವೆ. ಸಂಗೀತ ಮಾತನಾಡಬೇಕು, ನಾವು ಮಾತನಾಡಬಾರದು ಎಂದು ಹೇಳಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಖ್ಯಾತ ಹಿನ್ನಲೆ ಗಾಯಕ ರಮೇಶ್‌ಚಂದ್ರ, ಇತ್ತೀಚೆಗೆ ಸಿನಿಮಾಗಳಲ್ಲಿ ಒಂದು ಅಕ್ಷರವೂ ಕನ್ನಡ ಬರೆಯಲು, ಓದಲು ಬಾರದವರನ್ನು ಹೆಚ್ಚು ಪ್ರಾಶಸ್ತ್ಯ ನೀಡಿ ಹಾಡು ಹಾಡಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇದು ನಿಲ್ಲಬೇಕು. ಕನ್ನಡ ಸಿನಿಮಾ ರಂಗದಲ್ಲಿ ಕನ್ನಡದವರಿಗೆ ಪ್ರಾಶಸ್ತ್ಯ ನೀಡಬೇಕೆಂದು ಹೇಳಿದರು.
ಮುದ ನೀಡಿದ ಜೀವ ಜೀವದ ಸ್ವರ ಸಂಚಾರಸಂಗೀತ ಸಮರ್ಪಣ ಟ್ರಸ್ಟ್‌ನಿಂದ ಆಯೋಜಿಸಿದ್ದ ಹಳೆಯ ಸಿನಿಮಾ ಹಾಡುಗಳ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ಮನಸೆಳೆಯುವಲ್ಲಿ ಯಶಸ್ವಿಯಾಯಿತು. ಕುವೆಂಪು ರಂಗಮಂದಿರ ಭರ್ತಿಯಾಗಿ ಪ್ರೇಕ್ಷಕರು ನಿಂತುಕೊಂಡೇ ಹಾಡುಗಳ ಲೋಕದಲ್ಲಿ ಮಿಂದೆದ್ದರು. ಸುರೇಖಾ ಹೆಗಡೆ, ರಮೇಶ್ ಚಂದ್ರ, ನಿತಿನ್ ರಾಜಾರಾಮ್ ಶಾಸ್ತ್ರಿ ಮುಂತಾದವರು ಹಳೆಯ ಹಾಡುಗಳ ಸವಿಯನ್ನು ಪ್ರೇಕ್ಷಕರಿಗೆ ಬಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಉಮೇಶ್ ಕೂಡ ಹಾಡಿದರು. ಒಟ್ಟಾರೆ ಈ ಕಾರ್ಯಕ್ರಮ ಸಂಗೀತ ರಸಿಕರಿಗೆ ರಸದೌತಣವಾಗಿತ್ತು.