ಸಂಗೀತ ವಿದ್ವಾಂಸ ಡಾ. ಅಶೋಕ ಹುಗ್ಗಣ್ಣನವರ ವಿಧಿವಶ

KannadaprabhaNewsNetwork |  
Published : Dec 26, 2025, 02:01 AM IST
ಡಾ. ಅಶೋಕ್ ಹುಗ್ಗಣ್ಣನವರ | Kannada Prabha

ಸಾರಾಂಶ

ಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸ, ಗಾಯಕ ಹಾಗೂ ಗುರು ಡಾ. ಅಶೋಕ ಹುಗ್ಗಣ್ಣನವರ (64) ಕೆಲಕಾಲದ ಅನಾರೋಗ್ಯದಿಂದ ಗುರುವಾರ ವಿಧಿವಶರಾಗಿದ್ದಾರೆ.

ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಭರಿಸಲಾಗದ ನಷ್ಟ । ದಶಕಗಳ ಕಾಲ ಸಂಗೀತ ಶಿಕ್ಷಣಕ್ಕೆ ತಮ್ಮ ಬದುಕನ್ನು ಅರ್ಪಿಸಿದ್ದ ಗುರು

ಪ್ರಸಾದ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸ, ಗಾಯಕ ಹಾಗೂ ಗುರು ಡಾ. ಅಶೋಕ ಹುಗ್ಗಣ್ಣನವರ (64) ಕೆಲಕಾಲದ ಅನಾರೋಗ್ಯದಿಂದ ಗುರುವಾರ ವಿಧಿವಶರಾಗಿದ್ದಾರೆ.ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳು, ಸಹ ಕಲಾವಿದರು, ವಿದ್ಯಾರ್ಥಿಗಳು, ಸಂಗೀತ ಪ್ರೇಮಿಗಳಿದ್ದಾರೆ.ಅವರ ನಿಧನದ ಸುದ್ದಿ ಸಂಗೀತ ಲೋಕಕ್ಕೆ ಆಘಾತ ಮತ್ತು ದುಃಖವನ್ನು ಮೂಡಿಸಿದೆ. ದಶಕಗಳ ಕಾಲ ಸಂಗೀತ ಶಿಕ್ಷಣಕ್ಕೆ ತಮ್ಮ ಬದುಕನ್ನು ಅರ್ಪಿಸಿದ್ದ ಹುಗ್ಗಣ್ಣನವರ ನಿಧನದಿಂದ ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ.ಹೊನ್ನಾವರದ ನಂಟು:ದೂರದ ಧಾರವಾಡದಲ್ಲಿ ಹುಟ್ಟಿ ಬೆಳೆದ ಡಾ. ಅಶೋಕ ಹುಗ್ಗಣ್ಣನವರ 1992ರಲ್ಲಿ ಹೊನ್ನಾವರದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಂ. ಕಾಲೇಜಿಗೆ ಉಪನ್ಯಾಸಕರಾಗಿ ಆಗಮಿಸಿದರು. ಸುಮಾರು 3 ದಶಕಗಳ ಕಾಲ ಉಪನ್ಯಾಸಕರಾಗಿ, ನಂತರ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. 2021ರಲ್ಲಿ ಸಂಗೀತ ಉಪನ್ಯಾಸ ವೃತ್ತಿಗೆ ನಿವೃತ್ತಿಯಾದರೂ ತನಗೆ ಅನ್ನ ಕೊಟ್ಟ‌ ಸಂಸ್ಥೆಯನ್ನು ಮರೆಯದೆ ಕಾಲೇಜಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿ ಸಂಗೀತ ಸುಧೆ ಹರಿಸಿದ್ದರು.ಮೊಟ್ಟಮೊದಲು ಹುಗ್ಗಣ್ಣನವರ ಹೊನ್ನಾವರಕ್ಕೆ ಬಂದಾಗ ಅವರಿಗೆ ಆಶ್ರಯ ನೀಡಿದ್ದು ಕಲ್ಭಾಗ ಕುಟುಂಬ. ಕಲ್ಭಾಗದ ಗೋವಿಂದ ಹೆಗಡೆಯವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಬಳಿಕ ಅರೆಅಂಗಡಿಯಲ್ಲಿ ರೂಮ್ ಮಾಡಿದ್ದರು. ನಂತರದ ದಿನಗಳಲ್ಲಿ ಹೊನ್ನಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ತಾಲೂಕಿನಲ್ಲಿ ಖ್ಯಾತನಾಮ ಹಿಂದೂಸ್ತಾನಿ ಸಂಗೀತ ಕಲಾವಿದರು ಇದ್ದರೂ ಸಹ ಯುವ ಜನತೆಯಲ್ಲಿ ಸಂಗೀತದ ಆಸಕ್ತಿಯನ್ನು ಹುಟ್ಟುಹಾಕಿದವರು ಇವರು. ವಿಶ್ವೇಶ್ವರ ಭಟ್ ಖರ್ವಾ, ರಮ್ಯ ಭಟ್, ರೇಷ್ಮಾ ಭಟ್, ಮೊದಲಾದ ಹಿಂದೂಸ್ತಾನಿ ಕಲಾವಿದರುಗಳನ್ನು ತಯಾರು ಮಾಡಿದ್ದಾರೆ. ತಾಲೂಕಿನ ಬಹುತೇಕ ದೇವಾಲಯಗಳಲ್ಲಿ ಭಜನೆ ನಡೆಸಿಕೊಟ್ಟಿದ್ದರು. ಶರಾವತಿಯ ಇಕ್ಕೆಲಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ ಹಿರಿಮೆ ಹುಗ್ಗಣ್ಣನವರ ಅವರಿಗಿದೆ.ಕೇವಲ ಸಂಗೀತವಷ್ಟೇ ಅಲ್ಲದೆ ವಿಜ್ಞಾನ ಮತ್ತು ಸಂಗೀತ ಎರಡರಲ್ಲೂ ಡಾಕ್ಟರೇಟ್ ಪದವಿ ಪಡೆದಿದ್ದ ಅಪರೂಪದ ಪ್ರತಿಭಾ ಸಂಪನ್ನರಾಗಿದ್ದರು. ಸಂಗೀತ ಮತ್ತು ವಿಜ್ಞಾನವನ್ನು ಸಮತೋಲನದಲ್ಲಿ ತೂಗಿಸಿದವರು. ಹಿಂದೂಸ್ತಾನಿ ಸಂಗೀತದ ವಿವಿಧ ರಾಗಗಳು, ಬಂಧಿಶ್‌ಗಳು ಹಾಗೂ ಶಾಸ್ತ್ರೀಯ ಗಾಯನ ಶೈಲಿಯಲ್ಲಿ ಅಪ್ರತಿಮ ಪಾಂಡಿತ್ಯ, ಸುಗಮ‌ ಸಂಗೀತ, ಠುಮ್ರಿ, ರಂಗಗೀತೆ, ಭಾವಗೀತೆಯಲ್ಲಿ ಪ್ರಭುದ್ದತೆ ಹೊಂದಿದ್ದ ಹುಗ್ಗಣ್ಣನವರ, ಕಲಾಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ಹಲವು ಗೌರವ ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ.

ದೇಶ ಹಾಗೂ ವಿದೇಶದ ವಿವಿಧ ವೇದಿಕೆಗಳಲ್ಲಿ ಗಾಯನ ನಡೆಸಿದ್ದಾರೆ. ಸಂಗೀತ ಸಮ್ಮೇಳನಗಳು, ಶೈಕ್ಷಣಿಕ ಕಾರ್ಯಾಗಾರಗಳು ಹಾಗೂ ಉಪನ್ಯಾಸಗಳಲ್ಲಿ ಅವರು ಸದಾ ಆಹ್ವಾನಿತ ಅತಿಥಿಯಾಗಿದ್ದರು. ಅಲ್ಲದೆ ಹಂಪಿ ವಿಶ್ವವಿದ್ಯಾಲಯದ ಸಂಗೀತ ವಿದ್ಯಾರ್ಥಿಗಳಿಗೆ ಪಿಎಚ್‌ ಡಿ ಮಾರ್ಗದರ್ಶನ ನೀಡುತ್ತಿದ್ದರು.

ನೂರಾರು ಪ್ರತಿಭಾವಂತ ಶಿಷ್ಯರನ್ನು ತರಬೇತಿಗೊಳಿಸಿದ ಹುಗ್ಗಣ್ಣನವರು, ಗುರು-ಶಿಷ್ಯ ಪರಂಪರೆಯನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿದವರಾಗಿದ್ದರು.ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯದವರಂತೆ ಬದುಕಿದ ಓರ್ವ ಶ್ರೇಷ್ಟ ಕಲಾವಿದ ಶಿವನಲ್ಲಿ ಲೀನವಾಗಿದ್ದಾನೆ. ಆದರೆ ಅವರು ಹಾಕಿಕೊಟ್ಟ‌ ಸಂಗೀತದ ದಾರಿಯನ್ನು ತಾಲೂಕಿನ ಜನರು ಮರೆಯುವಂತಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’