ಹಿಂದೂ ದೇವಾಲಯ ನಿರ್ಮಿಸಿದ ಮುಸ್ಲಿಂ ಉದ್ಯಮಿ!

KannadaprabhaNewsNetwork |  
Published : Nov 04, 2025, 12:30 AM IST
ಪೊಟೋ೧೧ಸಿಪಿಟಿ1,2: ನಗರದ ಮಂಗಳವಾರಪೇಟೆಯಲ್ಲಿ ನಿರ್ಮಿಸಿರುವ ಬಸವೇಶ್ವರ ದೇವಸ್ಥಾನ. | Kannada Prabha

ಸಾರಾಂಶ

ಚನ್ನಪಟ್ಟಣದ ಎಸ್.ಕೆ. ಗ್ರೂಪ್ಸ್ ಮಾಲೀಕ ಸೈಯ್ಯದ್ ಸಾದತ್ ವುಲ್ಲಾ ಸಕಾಫ್ ನಗರದ ಮಂಗಳವಾರ ಪೇಟೆಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಬಸವೇಶ್ವರ ದೇವಾಲಯವನ್ನು ನಿರ್ಮಾಣ ಮಾಡುವ ಮೂಲಕ, ಸಾಮರಸ್ಯ ಮೆರೆದಿದ್ದಾರೆ.

2 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ । ಸಮಾಖಕ್ಕೆ ಮಾದರಿಯಾದ ಸಕಾಫ್

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಂಘರ್ಷಗಳು ನಡೆಯುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಮುಸ್ಲಿಂ ಉದ್ಯಮಿಯೊಬ್ಬರು ಸ್ವಂತ ಖರ್ಚಿನಲ್ಲಿ ಭವ್ಯ ಹಿಂದೂ ದೇವಾಲಯವನ್ನು ನಿರ್ಮಿಸುವ ಮೂಲಕ ಸಾಮರಸ್ಯ ಸಂದೇಶ ಸಾರಿದ್ದು, ಇತರರಿಗೆ ಮಾದರಿಯಾಗಿದ್ದರೆ.ಚನ್ನಪಟ್ಟಣದ ಎಸ್.ಕೆ. ಗ್ರೂಪ್ಸ್ ಮಾಲೀಕ ಸೈಯ್ಯದ್ ಸಾದತ್ ವುಲ್ಲಾ ಸಕಾಫ್ ನಗರದ ಮಂಗಳವಾರ ಪೇಟೆಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಬಸವೇಶ್ವರ ದೇವಾಲಯವನ್ನು ನಿರ್ಮಾಣ ಮಾಡುವ ಮೂಲಕ, ಸಾಮರಸ್ಯ ಮೆರೆದಿದ್ದಾರೆ. ಪ್ರಸಿದ್ಧ ದೇವಾಲಯ:

ನಗರದ ಮಂಗಳವಾರಪೇಟೆಯಲ್ಲಿರುವ ಬಸವೇಶ್ವರ ದೇವಾಲಯ ಪ್ರಸಿದ್ಧ ದೇವಾಲಯವಾಗಿದ್ದು, ಚನ್ನಪಟ್ಟಣದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆ, ಪ್ರತಿಭಟನಾ ಮೆರವಣಿಗೆ, ರಾಜಕೀಯ ಪಕ್ಷದ ರ್‍ಯಾಲಿಗಳು ಆರಂಭವಾಗುವುದು ಈ ದೇವಾಲಯದ ಆವರಣದಿಂದಲೇ. ಶಿಥಿಲಗೊಂಡಿದ್ದ ದೇವಾಲಯವನ್ನು ಕಂಡ ಉದ್ಯಮಿ ಸಾದತ್‌ವುಲ್ಲಾ ಸಕಾಫ್ ಅವರು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಸ್ಥಳೀಯರ ಜೊತೆಗೂಡಿ ಮುಂದಾಗಿದ್ದು, ದೇವಾಲಯದ ನಿರ್ಮಾಣಕ್ಕೆ ಬೇಕಿರುವ ಇಡೀ ಖರ್ಚನ್ನು ಅವರೇ ಭರಿಸಿ ದೇವಾಲಯದ ನಿರ್ಮಿಸಿದ್ದಾರೆ. ಕಲ್ಲಿನಲ್ಲಿ ದೇವಾಲಯ ನಿರ್ಮಾಣ: ಬಸವೇಶ್ವರ ದೇವಾಲಯವನ್ನು ಸಂಪೂರ್ಣ ಕಲ್ಲಿನಿಂದ ನಿರ್ಮಿಸಿದ್ದು, ಇದಕ್ಕಾಗಿ ಬೇಕಾಗಿರುವ ಕಲ್ಲುಗಳನ್ನು ತಮಿಳುನಾಡಿನ ಮಹಾಬಲೇಶ್ವರಂನಿಂದ ತರಿಸಿ, ದೇವಾಲಯದ ಆವರಣದಲ್ಲೇ ಶಿಲ್ಪಿಗಳನ್ನು ಕರೆಸಿ ಕೆತ್ತಿಸಲಾಗಿದೆ. ಇಡೀ ದೇವಾಲಯ ಶೈವಾಗಮ ಪದ್ದತಿಯ ಪ್ರಕಾರ ನಿರ್ಮಾಣ ಮಾಡಲಾಗಿದೆ. ಇದು ಎರಡನೇ ದೇವಾಲಯ: ಉದ್ಯಮಿ ಸೈಯ್ಯದ್ ಸಾದತ್‌ವುಲ್ಲಾ ಸಕಾಫ್ ತಮ್ಮ ಸ್ವಂತ ಹಣದಿಂದ ನಿರ್ಮಾಣ ಮಾಡಿರುವ ಎರಡನೇ ಹಿಂದೂ ದೇವಾಲಯ ಇದಾಗಿದೆ. ಇದಕ್ಕೂ ಮುನ್ನ 2010ರಲ್ಲಿ ಚನ್ನಪಟ್ಟಣ ತಾಲೂಕಿನ ಎಸ್.ಎಂ.ಹಳ್ಳಿ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಾಲಯವನ್ನು ತಮ್ಮ ಸ್ವಂತ ಹಣದಿಂದ ನಿರ್ಮಿಸಿದ್ದರು. ಎಸ್.ಎಂ.ಹಳ್ಳಿ ಗ್ರಾಮದಲ್ಲಿ ಹಳೆಯದಾಗಿದ್ದ ದರ್ಗಾವನ್ನು ಹೊಸದಾಗಿ ನಿರ್ಮಾಣ ಮಾಡಲು ಹೋದಾಗ, ಪಕ್ಕದಲ್ಲಿದ್ದ ಹಿಂದೂ ದೇವಾಲಯ ಶಿಥಿಲಗೊಂಡಿದ್ದನ್ನು ಕಂಡು, ದರ್ಗಾದ ಜೊತೆಗೆ ಹಿಂದೂ ದೇವಾಲಯವನ್ನು ನಿರ್ಮಾಣ ಮಾಡಿದ್ದರು. ಇದೀಗ ಮತ್ತೊಂದು ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಜಾತಿ, ಧರ್ಮ, ಪಂಥಗಳ ಹೆಸರಿನಲ್ಲಿ ಬಡಿದಾಡುವ ಈ ಸಮಯದಲ್ಲಿ ದೇವಾಲಯವನ್ನು ನಿರ್ಮಾಣ ಮಾಡುವ ಮೂಲಕ ಕೋಮುಸೌಹಾರ್ಧತೆಯ ಸಂದೇಶ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.ಪ್ಯಾಕೇಜ್

ದೇವರಿಗೆ ಹಿಂದೂ- ಮುಸ್ಲಿಂ ಎಂಬ ಭೇದವಿಲ್ಲ: ಸಕಾಫ್ಚನ್ನಪಟ್ಟಣ: ದೇವರಿಗೆ ಹಿಂದೂ-ಮುಸ್ಲಿಂ ಎಂಬ ಭೇದ ಇಲ್ಲ. ಯಾರು ಏನು ಬೇಡಿದರೂ ನೀಡುತ್ತಾನೆ. ಈ ನಿಟ್ಟಿನಲ್ಲಿ ಹಿಂದೂ -ಮುಸ್ಲಿಂ ಸಹೋದರ ಬಾಂಧವ್ಯದಲ್ಲಿ ಜೀವನ ಮಾಡಿದರೆ ನೆಮ್ಮದಿಯ ಜೀವನ ಮಾಡಬಹುದು ಎಂದು ಎಸ್.ಕೆ. ಬೀಡಿ ಮಾಲೀಕರು ಹಾಗೂ ಸಮಾಜ ಸೇವಕ ಸೈಯದ್ ಸಾದತ್‌ಉಲ್ಲಾ ಸಕಾಫ್ ಅಭಿಪ್ರಾಯಪಟ್ಟರು. ನೂತನ ದೇವಸ್ಥಾನವನ್ನು ಸೋಮವಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರ ರೂಪ ಮತ್ತು ಹೆಸರು ಬೇರೆ ಇದೆ ಆದರೆ ದೇವರು ಒಬ್ಬನೇ ಆಗಿದ್ದಾನೆ. ನಾವು ದೇವರನ್ನು ಯಾವ ರೂಪದಲ್ಲಿ ಪೂಜಿಸಿದರೂ ಒಲಿಯುತ್ತಾನೆ. ಒಬ್ಬರಿಗೆ ಒಬ್ಬರು ಸಹಕಾರ ಮಾಡಿಕೊಂಡು ಸಹೋದರ ಭಾಂದವ್ಯದಲ್ಲಿ ಜೀವನ ಮಾಡಬೇಕು ಎಂದು ಹಿಂದೂ-ಮುಸ್ಲಿಂ ಎಂಬ ಭೇದ ಇಲ್ಲದೆ ದೇವರು ನಮ್ಮನ್ನು ಸೃಷ್ಠಿ ಮಾಡಿದ್ದಾನೆ. ಈ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಾಗಿ ಸಹೋದರ ಭಾವದಿಂದ ಜೀವನ ಮಾಡಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ ಎಂದರು.

ಈ ದೇವಸ್ಥಾನ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಚರ್ಚೆ ಮಾಡಿದ ವೇಳೆ ನಾನೇ ಈ ದೇವಸ್ಥಾನ ನಿರ್ಮಿಸಿಕೊಡಬೇಕು ಎಂದು ಅನಿಸಿತು. ಶಿವ ಶಕ್ತಿ ಕೊಟ್ಟಿರುವಾಗ ಸಮಾಜಕ್ಕೆ ಏನಾದರೂ ಶಾಶ್ವ ಕೊಡುಗೆ ನೀಡಬೇಕು ಎಂದು ಈ ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ್ದು, ಈ ದೇವಸ್ಥಾನ ನಿರ್ಮಾಣದ ವೆಚ್ಚದ ಬಗ್ಗೆ ಹೇಳಿದರೆ ದೇವರಿಗೆ ಕೊಡುವುದನ್ನು ಲೆಕ್ಕ ಮಾಡಿದಂತಾಗುತ್ತದೆ ಎಂದು ದೇವಸ್ಥಾನದ ವೆಚ್ಚದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಹಾಗೂ ಮಂಗಳವಾರಪೇಟೆ ನಿವಾಸಿಗಳು ಸಾದತ್ ಉಲ್ಲಾ ಸಕಾಫ್ ಅವರಿಗೆ ಬೆಳ್ಳಿಕಿರೀಟ ಧಾರಣೆ ಮಾಡಿ ಅಭಿನಂದಿಸಿದರು.

ನೂತನ ದೇವಾಲಯದ ದರ್ಶನಕ್ಕೆ ಗ್ರಾಮಸ್ಥರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.ಪೊಟೋ೧೧ಸಿಪಿಟಿ೧: ನಗರದ ಮಂಗಳವಾರಪೇಟೆಯಲ್ಲಿ ನಿರ್ಮಿಸಿರುವ ಬಸವೇಶ್ವರ ದೇವಸ್ಥಾನ.ಪೊಟೋ೧೧ಸಿಪಿಟಿ೨: ನಗರದ ಮಂಗಳವಾರಪೇಟೆಯಲ್ಲಿ ನಿರ್ಮಿಸಿರುವ ಬಸವೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾದತ್ ಉಲ್ಲಾ ಸಕಾಫ್ ಅವರಿಗೆ ಬೆಳ್ಳಿಕಿರೀಟ ಧಾರಣೆ ಮಾಡಲಾಯಿತು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ