ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ ಗ್ರಾಮದ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘದ ವತಿಯಿಂದ 19ನೇ ವರ್ಷದ ಗಣೇಶೋತ್ಸವದ ಅಂಗವಾಗಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಮುಸ್ಲಿಂ ಮಹಿಳೆಯರು ಮಂಗಳವಾರ ರಾತ್ರಿ ಪೂಜೆ ಏರ್ಪಡಿಸಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂಕೇತ ಎಂಬ ಸಂದೇಶವನ್ನು ನೀಡಿದರು. ಗ್ರಾಮದ ಸಿದ್ದಿ ವಿನಾಯಕ ಯುವಕ ಸಂಘದ ವತಿಯಿಂದ 19ನೇ ವರ್ಷದ ಅದ್ಧೂರಿ ಗಣೇಶೋತ್ಸವದ ಅಂಗವಾಗಿ ಪ್ರತಿನಿತ್ಯ ಭಕ್ತರು ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಆಯೋಜಿಸಿದ್ದು, ಇದರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಮುಸ್ಲಿಂ ಮಹಿಳೆಯರು ಮಂಗಳವಾರ ರಾತ್ರಿ ಪೂಜೆ ಆಯೋಜಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಕೂಡ ಏರ್ಪಡಿಸಿದ್ದರು. ರಾಜ್ಯದ ಅನೇಕ ಕಡೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ನಡುವೆ ಗಲಾಟೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿ ಎಲ್ಲರೂ ಮೆಚ್ಚಿಗೆ ಪಾತ್ರರಾಗಿದ್ದಾರೆ ಮತ್ತು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶವನ್ನು ಈ ಮೂಲಕ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಮಿವುಲ್ಲಾ, ಗ್ರಾಮದಲ್ಲಿ ನೂರಾರು ವರ್ಷಗಳಿಂದ ಹಿಂದೂ ಮುಸ್ಲಿಂ ಜನಾಂಗ ಅನ್ಯೋನತೆಯಿಂದ ಇದ್ದು ಗ್ರಾಮದ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲೂ ಹಿಂದೂ ಮುಸ್ಲಿಂ ಜನಾಂಗ ಪರಸ್ಪರ ಸಹಕಾರದೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ನಮ್ಮ ಜನಾಂಗದ ಮಹಿಳೆಯರು ಗಣೇಶ ಮೂರ್ತಿಗೆ ವಿಶೇಷ ಪೂಜೆ ಆಯೋಜಿಸುವುದು ಹೆಮ್ಮೆಯ ಸಂಗತಿ ಎಂದರು. ಗ್ರಾಮ ಪಂಚಾಯತಿ ಸದಸ್ಯ ಗ್ಯಾಸ್ ರಾಜು ಮಾತನಾಡಿ, ಕಳೆದ 19 ವರ್ಷಗಳಿಂದಲೂ ಮುಸ್ಲಿಂ ಮಹಿಳೆಯರು ಒಂದು ದಿನದ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದ್ದು, ನಾವು ಇಲ್ಲಿ ಹಿಂದೂ ಮುಸ್ಲಿಂ ಎಂಬ ಬೇದ ಭಾವನೆ ಮರೆತು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಬದುಕುತ್ತಿದ್ದೇವೆ ಎಂದರು. ಸಂಘದ ಸದಸ್ಯ ಪಂಡಿತ್ ಬಾಬು ಮಾತನಾಡಿದರು. ಈ ಸಂದರ್ಭದಲ್ಲಿ ಸಿದ್ದಿ ವಿನಾಯಕ ಯುವಕ ಸಂಘದ ಎಲ್ಲಾ ಸದಸ್ಯರು ಮತ್ತು ಮುಸ್ಲಿಂ ಜನಾಂಗದ ಮಹಿಳೆಯರು ಹಾಜರಿದ್ದರು.