ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸಂಯುಕ್ತ ಖಾಜಿಗಳು, ಧರ್ಮಗುರುಗಳ ನೇತೃತ್ವದಲ್ಲಿ ಕರಾವಳಿಯ ಮುಸ್ಲಿಂ ಸಮುದಾಯವು ಶುಕ್ರವಾರ ಒಗ್ಗಟ್ಟಿನ ಭಾರೀ ಶಕ್ತಿ ಪ್ರದರ್ಶನ ಮಾಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ. ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಿಡಲ್ಲ ಎಂದು ಧರ್ಮಗುರುಗಳು ಎಚ್ಚರಿಕೆ ನೀಡಿದ್ದಾರೆ.ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡದಂತೆ ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿದ್ದರೂ, ಹೆದ್ದಾರಿಯಲ್ಲಿ ಕಿಕ್ಕಿರಿದು ಸೇರಿದ್ದ ಜನಸಮೂಹದಿಂದಾಗಿ ಸುಮಾರು ಎರಡೂವರೆ ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಕ್ಷರಶಃ ಸ್ತಬ್ಧವಾಗಿತ್ತು.
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇರುವ ಅಡ್ಯಾರ್ ಷಾ ಗಾರ್ಡನ್‌ನಲ್ಲಿ ಸಾಗರೋಪಾದಿಯಲ್ಲಿ ಜನಸಮೂಹ ಸೇರಿದ್ದು, ಮೈದಾನದಲ್ಲಿ ಜಾಗವಿಲ್ಲದೆ ಹೆದ್ದಾರಿಯಲ್ಲೂ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಯಿಸಿದ್ದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.ಕೇವಲ ಧರ್ಮಗುರುಗಳ ನೇತೃತ್ವ:
ಕೇವಲ ಧರ್ಮಗುರುಗಳು, ಉಲಮಾಗಳ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯು ಹೋರಾಟದ ರಣಕಹಳೆ ಮೊಳಗಿಸಿದೆ. ವೇದಿಕೆಯಲ್ಲಿ ಧರ್ಮಗುರುಗಳನ್ನು ಹೊರತುಪಡಿಸಿ ಯಾವುದೇ ರಾಜಕೀಯ ನಾಯಕರಿಗೆ ಸ್ಥಾನ ಇರಲಿಲ್ಲ. ಪ್ರತಿಭಟನಾ ಸಮಾವೇಶದಲ್ಲಿ ಭಾರಿ ಜನಸ್ತೋಮದ ಎದುರು 150ರಷ್ಟು ಮಂದಿ ಧರ್ಮಗುರುಗಳು ಜತೆಯಾಗಿ ಭಾಗವಹಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.ಕಾಯ್ದೆ ಜಾರಿಗೆ ಬಿಡಲ್ಲ:
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ದೇಶದ ಮುಸ್ಲಿಂ ಸಮುದಾಯದ ಹಕ್ಕನ್ನು ಕೇವಲ ಮುಸಲ್ಮಾನ ಎಂಬ ಕಾರಣಕ್ಕೆ ಫ್ಯಾಸಿಸ್ಟ್ ಶಕ್ತಿಗಳು ಕಸಿದುಕೊಳ್ಳಲು ಮುಂದಾಗಿವೆ. ಆದರೆ ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಬಿಡಲ್ಲ. ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯ ಈ ನೆಲದಲ್ಲಿ ಬದುಕುತ್ತಿದೆ, ಇನ್ನೂ ಕೂಡ ಬದುಕಲಿದೆ ಎಂದು ಹೇಳಿದರು.ಬುಲ್ಡೋಜ್ ಮಾಡುವ ತಂತ್ರ:
ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾತನಾಡಿ, ನಮ್ಮ ಹೋರಾಟ ಯಾವುದೇ ಪಕ್ಷ, ಜಾತಿ, ಧರ್ಮದ ವಿರುದ್ಧ ಅಲ್ಲ. ಇಂಥ ಕರಾಳ ಕಾನೂನನ್ನು ಜಾರಿಗೊಳಿಸಿದ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ. ದೇಶದ ಲಕ್ಷಾಂತರ ಎಕರೆ ವಕ್ಫ್ ಜಾಗವನ್ನು ಕಬಳಿಸುವ ತಂತ್ರಗಾರಿಕೆ ಈ ತಿದ್ದುಪಡಿಯಲ್ಲಿದೆ. ಮುಸಲ್ಮಾನರನ್ನು ಛಿದ್ರಗೊಳಿಸುವ, ಮಸೀದಿಗಳನ್ನು ಬುಲ್ಡೋಜ್ ಮಾಡಲು ಮಾಡಿದ ತಂತ್ರಗಾರಿಕೆ ಇದು. ಇಂಥ ಅವೈಜ್ಞಾನಿಕ ಬಿಲ್‌ನ್ನು ಕಾರ್ಯರೂಪಕ್ಕೆ ತರಲು ಕೊನೆ ಉಸಿರಿರೋತನಕ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದರು.ಮೇ 5ರವರೆಗೆ ವಕ್ಫ್ ಕುರಿತು ಸುಪ್ರೀಂ ಕೋರ್ಟ್ ಆದೇಶ ಬರುವವರೆಗೆ ನಮ್ಮ ಘೋಷಣೆ ನಿಲ್ಲೋದಿಲ್ಲ. ದೇಶದ ಜಾತ್ಯತೀತ ಸೌಧವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುತ್ತದೆ ಎಂಬ ಬಲವಾದ ವಿಶ್ವಾಸ ನಮ್ಮಲ್ಲಿದೆ. ವಕ್ಫ್ ಆಸ್ತಿಯಲ್ಲಿ ಯಾವುದೇ ಹಿಂದೂಗಳ, ರೈತರ ಭೂಮಿ ಇಲ್ಲ. ರಾಜ್ಯ ವಕ್ಫ್ ಮಂಡಳಿ ಎಂದೂ ಇತರ ಧರ್ಮೀಯರ ಜಾಗವನ್ನು ಮುಟ್ಟಲ್ಲ. ಗಾಂಧೀಜಿ, ಅಂಬೇಡ್ಕರ್ ಅವರ ಭಾರತದಲ್ಲಿ ವಕ್ಫ್ ಆಸ್ತಿ ಕಬಳಿಸಲು ಬಿಡುವ ಮಾತೇ ಇಲ್ಲ ಎಂದರು.
ಮುಸ್ಲಿಮರನ್ನು ಇಲ್ಲವಾಗಿಸಲು ಅಸಾಧ್ಯ:ಧರ್ಮಗುರು ಅಬ್ದುಲ್ ರಶೀದ್ ಝೈನಿ ಮಾತನಾಡಿ, ದೇಶ ಗಂಡಾಂತರ ಎದುರಿಸಿದಾಗೆಲ್ಲ ಉಲೆಮಾಗಳು ಹೋರಾಟ ಮಾಡಿದ್ದಾರೆ, ಸ್ವಾತಂತ್ರ್ಯ ಹೋರಾಟದಲ್ಲೂ ಉಲೆಮಾಗಳು ಸಮರ ಸಾರಿದ್ದರು. ಇದೀಗ ಮತ್ತೆ ಅಂಥ ಕಾಲ ಬಂದಿದೆ. ಎಲ್ಲೆಡೆ ಮುಸ್ಲಿಂ ಫೋಬಿಯಾ ಹರಡಲಾಗುತ್ತಿದೆ. ಮುಸಲ್ಮಾನರನ್ನು ಈ ದೇಶದಿಂದ ಇಲ್ಲವಾಗಿಸಲು ನಿಮಗೆ ಎಂದೂ ಸಾಧ್ಯವಿಲ್ಲ. ಎಲ್ಲ ಜಾತ್ಯತೀತರು ಒಗ್ಗಟ್ಟಾಗಿ ನಿಮ್ಮನ್ನು ಸಮುದ್ರಕ್ಕೆ ಎಸೆಯುವ ದಿನ ದೂರವಿಲ್ಲ ಎಂದು ಹೇಳಿದರು.
190 ವರ್ಷ ದೇಶವಾಳಿದ ಬ್ರಿಟಿಷರ ವಿರುದ್ಧ ಹೋರಾಡಿ ಮುಸ್ಲಿಮರು ಈ ದೇಶವನ್ನು ಕಾಪಾಡಿದ್ದಾರೆ, ಅದೆಷ್ಟೋ ಮಂದಿ ಹುತಾತ್ಮರಾಗಿದ್ದಾರೆ. ದೇಶಕ್ಕೆ ‘ಜೈ ಹಿಂದ್’ ಘೋಷಣೆಯನ್ನು ನೀಡಿದವರು ಒಬ್ಬ ಮುಸಲ್ಮಾನ. ರಾಷ್ಟ್ರ ಧ್ವಜಕ್ಕೆ ಅಂತಿಮ ರೂಪುರೇಷೆ ನೀಡಿದ್ದು ಹೈದರಾಬಾದ್‌ನ ಮುಸ್ಲಿಂ ಮಹಿಳೆ ಎಂದು ಹೇಳಿದ ಝೈನಿ, ನಮ್ಮ ಹೋರಾಟವನ್ನು ಹಿಂದೂಗಳ ವಿರುದ್ಧ ಎಂದು ಬಿಂಬಿಸಲಾಗುತ್ತಿದೆ- ಇದು ಕುತಂತ್ರ. ನಮ್ಮ ಹೋರಾಟ ಹಿಂದೂಗಳ ವಿರುದ್ಧ ಅಲ್ಲ. ಹಿಂದೂಗಳು ನಮಗೆ ತೊಂದರೆ ಕೊಟ್ಟಿಲ್ಲ. ಸಂವಿಧಾನದ ಅಸ್ತಿತ್ವ ಕಾಪಾಡುವುದಕ್ಕಾಗಿ ನೀಡಿನ ಕೆಲವು ವಿಕೃತ ಮನುಷ್ಯರ ವಿರುದ್ಧದ ಹೋರಾಟ ಇದು. ಭಾರತವು ಭಾರತವಾಗುವತನಕ ಈ ಹೋರಾಟ ನಿಲ್ಲೋದಿಲ್ಲ ಎಂದರು.ಸಮಿತಿಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ನಮ್ಮ ಈ ಹೋರಾಟವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ಕಾಯ್ದೆಯನ್ನು ಹಿಂಪಡೆಯುವವರೆಗೆ ಹೋರಾಟ ಸಾಗಲಿದೆ. ಅವರ ಸಂಚನ್ನು ಸೋಲಿಸಲು ನಮಗೆ ತಾಕತ್ತಿದೆ. ಮುಸಲ್ಮಾನರನ್ನು 2ನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ನಿಮ್ಮ ಕನಸು ನನಸಾಗಲ್ಲ. ಸಂವಿಧಾನವನ್ನು ದುರ್ಬಲಗೊಳಿಸಲು ಈ ಮಣ್ಣಲ್ಲಿ ಯಾರೂ ಹುಟ್ಟಿಲ್ಲ. ಸಂವಿಧಾನ ಇರೋತನಕ ನಾವು ಈ ಮಣ್ಣಲ್ಲಿ ಎದ್ದು ನಿಲ್ಲುತ್ತೇವೆ ಎಂದು ಹೇಳಿದರು.
ಧರ್ಮಗುರುಗಳಾದ ಬಂಬ್ರಾಣ ಉಸ್ತಾದ್ ಅಬ್ದುಲ್ ಮುಸ್ಲಿಯಾರ್, ರಫೀಕ್ ಹುದವಿ ಕೋಲಾರ್, ಅನ್ವರ್ ಅಸ್ಗರಿ ಚಿತ್ರದುರ್ಗ, ಕೆ.ಎಂ. ಅಬೂಬಕ್ಕರ್ ಸಿದ್ದೀಕ್, ಡಾ.ಫಾಝಿಲ್ ರಝ್ವಿ ಕಾವಳಕಟ್ಟೆ ಮತ್ತಿತರರಿದ್ದರು. ಉಜಿರೆ ತಂಙಳ್ ಸಯ್ಯದ್ ಇಸ್ಮಾಯಿಲ್ ದುಆ ಮಾಡಿದರು. ಉಲಮಾ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಉಸ್ಮಾನುಲ್ ಫೈಝಿ ತೋಡಾರ್ ಸ್ವಾಗತಿಸಿದರು. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಾಸ್ತಾವಿಕ ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ತಬ್ಧ
ಪ್ರತಿಭಟನಾ ಸಮಾವೇಶಕ್ಕಾಗಿ ದ.ಕ. ಮಾತ್ರವಲ್ಲದೆ ಚಿಕ್ಕಮಗಳೂರು, ಉಡುಪಿ ಮತ್ತಿತರ ಜಿಲ್ಲೆಗಳಿಂದ ಸಹಸ್ರಾರು ಜನರು ಆಗಮಿಸಿದ್ದರು. ಸುಮಾರು 500ಕ್ಕೂ ಅಧಿಕ ಬಸ್ಸುಗಳಲ್ಲಿ ಜನರು ಬಂದಿದ್ದರು. ಪ್ರತಿಭಟನೆಗೆ ಆಗಮಿಸಿದ ಜನರ ವಾಹನಗಳು ಮತ್ತು ಇತರ ವಾಹನಗಳಿಂದಾಗಿ ಮಧ್ಯಾಹ್ನ 3 ಗಂಟೆಯ ವೇಳೆಗಾಗಲೇ ರಾ.ಹೆದ್ದಾರಿ 73ರ ಸಂಚಾರ ಹದಗೆಡಲು ಆರಂಭವಾಗಿತ್ತು. 2 ಕಿಮೀ ದೂರ ವಾಹನ ನಿಲ್ಲಿಸಿ ಪ್ರವಾಹೋಪಾದಿಯಲ್ಲಿ ಜನರು ಷಾ ಗಾರ್ಡನ್‌ನತ್ತ ತೆರಳುತ್ತಿದ್ದರು. 4 ಗಂಟೆ ವೇಳೆಗೆ ಹೆದ್ದಾರಿಯಲ್ಲಿ ಜನಸಾಗರವೇ ತುಂಬಿಕೊಂಡು ಸಂಪೂರ್ಣ ಸಂಚಾರ ಸ್ತಬ್ಧಗೊಂಡಿತ್ತು. ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಹೆದ್ದಾರಿಯ ನಡುವೆ ಯುವಕರ ಗುಂಪು ಘೋಷಣೆಗಳನ್ನು ಕೂಗತೊಡಗಿದ್ದರು. ಧರ್ಮಗುರುಗಳು, ಪೊಲೀಸ್ ಅಧಿಕಾರಿಗಳು ಈ ಕುರಿತು ಆಗಾಗ ತಿಳಿಹೇಳಿದರೂ ಯುವಕರ ಗುಂಪು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ರಾತ್ರಿ 7.30ರವರೆಗೂ ಈ ಭಾಗದಲ್ಲಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಬಿಗಿ ಪೊಲೀಸ್ ಸರ್ಪಗಾವಲು
ಪ್ರತಿಭಟನೆ ಹಿನ್ನೆಲೆಯಲ್ಲಿ 2 ಸಾವಿರಕ್ಕೂ ಅಧಿಕ ಪೊಲೀಸ್, ಅರೆಸೇನಾಪಡೆಯ ಸರ್ಪಗಾವಲು ಹಾಕಲಾಗಿತ್ತು. 20 ಕೆಎಸ್ಸಾರ್ಪಿ ತುಕಡಿ, 20 ಶಸ್ತ್ರಾಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ಪ್ರದೇಶದಲ್ಲೇ ಸಾವಿರಕ್ಕೂ ಅಧಿಕ ಪೊಲೀಸರಿದ್ದರು. ಪ್ರತಿಭಟನಾ ಸ್ಥಳ ಮಾತ್ರವಲ್ಲದೆ, ಆಸುಪಾಸಿನ ಆಯಕಟ್ಟಿನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಬೆಳಗ್ಗಿನಿಂದಲೇ ನಗರದ ಆಯಕಟ್ಟಿನ ಜಾಗಗಳಲ್ಲಿ ಚೆಕ್ ಪೋಸ್ಟ್ ಅಳವಡಿಸಿ ತಪಾಸಣೆ ಬಿಗಿಗೊಳಿಸಲಾಗಿತ್ತು. ಐವರು ಎಸ್ಪಿ, ಮತ್ತು ಅಡಿಶನಲ್ ಎಸ್ಪಿಗಳು, 20 ಡಿವೈಎಸ್ಪಿಗಳು, 230 ಇನ್ಸ್‌ಪೆಕ್ಟರ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.