ಚಿಕ್ಕೇನಕೊಪ್ಪ ಜಾತ್ರೆ ಮುಸ್ಲಿಮರಿಂದ ಸಾವಿರಾರು ರೊಟ್ಟಿ ದೇಣಿಗೆ

KannadaprabhaNewsNetwork | Published : Feb 15, 2024 1:36 AM

ಸಾರಾಂಶ

ಗದಗ ತಾಲೂಕಿನ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ೨೯ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಮುಸ್ಲಿಂ ಸಮುದಾಯದವರು ಸಾವಿರಾರು ರೊಟ್ಟಿಗಳನ್ನು ಸಿದ್ಧಪಡಿಸಿ ಶ್ರೀಮಠಕ್ಕೆ ನೀಡಿದ್ದಾರೆ.

ಗದಗ: ತಾಲೂಕಿನ ಬಳಗಾನೂರ ಗ್ರಾಮದ ನಡೆದಾಡುವ ದೇವರೆಂದೇ ಪ್ರಸಿದ್ಧವಾದ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ೨೯ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಪ್ರಸಾದಕ್ಕೆ ಗ್ರಾಮದ ಮುಸ್ಲಿಂ ಸಮುದಾಯದವರು ಸಾವಿರಾರು ರೊಟ್ಟಿಗಳನ್ನು ಸಿದ್ಧಪಡಿಸಿ ಶ್ರೀಮಠಕ್ಕೆ ನೀಡಿದ್ದಾರೆ.

ಗ್ರಾಮದ ಮುಸಲ್ಮಾನರು ಶ್ರೀಮಠದ ಭಕ್ತರ ಪ್ರಸಾದಕ್ಕಾಗಿ ೫೦೦೦ ರೊಟ್ಟಿಯನ್ನು ಬಡಿದು ಶ್ರೀಮಠಕ್ಕೆ ನೀಡಿದ್ದಾರೆ. ಮನೆ ಮನೆಗಳಲ್ಲಿ ಮಹಿಳೆಯರು, ಕುಟುಂಬದವರ ಜತೆ ಸೇರಿ ರೊಟ್ಟಿ ಬಡಿದು, ತಯಾರಿಸಿ, ಮಠಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹಿಂದೂಗಳ ಜತೆಗೆ ಮುಸ್ಲಿಮರು ಹಬ್ಬ ಹರಿದಿನಗಳಲ್ಲಿ ಕೈ ಜೋಡಿಸಿ, ಸೌಹಾರ್ದತೆಯಿಂದ ಇರುವುದು ಈ ಗ್ರಾಮದಲ್ಲಿ ವಿಶೇಷವಾಗಿದೆ.

ಮಠದಲ್ಲಿ ಎಲ್ಲ ಸಮಾಜದ ಜನರಿಗೂ ಮುಕ್ತವಾದ ಅವಕಾಶವನ್ನು ಕಲ್ಪಿಸಲಾಗಿದೆ. ಗ್ರಾಮದಲ್ಲಿ ಸೌಹಾರ್ದತೆ ನೆಲೆಸಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿರುವುದು ಮಠದ ಸಂಸ್ಕೃತಿಯಾಗಿದೆ. ಪ್ರತಿ ವರ್ಷ ಶಿವಶಾಂತವೀರ ಶರಣರು ಜಾತ್ರೆಯ ಅಂಗವಾಗಿ ತಿಂಗಳುಗಳ ಕಾಲ ಮೊದಲೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸದ್ಭಾವನಾ ಯಾತ್ರೆ ಹಮ್ಮಿಕೊಂಡು, ದುಷ್ಚಟಗಳನ್ನು ಜೋಳಿಗೆಗೆ ಹಾಕಿ, ಗೋರಕ್ಷಣೆ ನಮ್ಮೆಲ್ಲರ ಹೊಣೆ, ರೈತರೇ ದೇಶದ ಉಸಿರು ಎಂಬ ವಿವಿಧ ವಾಣಿಯನ್ನು ಭಿತ್ತರಿಸುತ್ತಾ, ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ. ಜತೆಗೆ ಸೌಹಾರ್ದದ ಬದುಕು ಕಟ್ಟಿಕೊಂಡು ಜೀವಿಸಬೇಕು ಎಂಬ ಸಂದೇಶವನ್ನು ನೀಡುತ್ತಾರೆ. ಶ್ರೀ ಶಿವಶಾಂತವೀರ ಶರಣರು ಹೀಗೆ ಹಲವಾರು ರೀತಿಯ ಧಾರ್ಮಿಕ ಕಾರ್ಯಗಳ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವುದರೊಂದಿಗೆ ಭಕ್ತ ಸಮೂಹದ ಹೃದಯಾಂತರಾಳದಲ್ಲಿ ನೆಲೆಯೂರಿ ಈ ಭಾಗದ ನಡೆದಾಡುವ ದೇವರೆಂದು ಖ್ಯಾತಿ ಪಡೆದಿದ್ದಾರೆ.ಶ್ರೀ ಶರಣರು ನಡೆದಾಡಿದ ಪವಿತ್ರ ಸ್ಥಳ ಸುಕ್ಷೇತ್ರ ಬಳಗಾನೂರ, ಜಿಲ್ಲೆಯಲ್ಲಿಯೇ ಕೋಮು ಸೌಹಾರ್ದತೆಯಲ್ಲಿ ಹೆಸರುವಾಸಿಯಾದ ಗ್ರಾಮವೆಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ವೈ. ಚಲವಾದಿ ಹೇಳುತ್ತಾರೆ.

Share this article