ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ಮುಸ್ಲಿಮರಿಗೆ ಭಯ ಬೇಡ: ಸಲೀಂ ಅಂಬಾಗಿಲು

KannadaprabhaNewsNetwork | Published : Apr 5, 2025 12:47 AM

ಸಾರಾಂಶ

ಸಂಸತ್ತಿನಲ್ಲಿ ಅಂಗೀಕರಿಸಿರುವ ನೂತನ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಮುಖಂಡ, ರಾಜ್ಯ ಹಜ್ಜ್ ಸಮಿತಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಎಂ.ಸಲೀಂ ಅಂಬಾಗಿಲು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿರುವ ನೂತನ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಮುಖಂಡ, ರಾಜ್ಯ ಹಜ್ಜ್ ಸಮಿತಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಎಂ.ಸಲೀಂ ಅಂಬಾಗಿಲು ತಿಳಿಸಿದ್ದಾರೆ.

ಈ ಹಿಂದೆಯೇ ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಸಂಧರ್ಭದಲ್ಲಿ ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ರಾಜಕೀಯ ಕುಳಗಳು ಮತ್ತು ಕೆಲವೊಂದು ಸರಕಾರಿ ಸಂಸ್ಥೆಗಳಿಂದ ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ಅನಧಿಕೃತ ಪರಭಾರೆಯ ಬಗ್ಗೆ ಮಂಡಿಸಿದ್ದ ಪರಿಣಾಮಕಾರಿ ವರದಿಯನ್ನು ಅಂದಿನ ಬಿಜೆಪಿ ಸರ್ಕಾರ ಸದನದಲ್ಲಿ ಮಂಡಿಸಲು ಮುಂದಾಗಿತ್ತು. ಅದೇ ಸಮಯದಲ್ಲಿ ಸರ್ಕಾರವು ಆಡಳಿತ ವಂಚಿತವಾಗಿ, ಬಳಿಕ ರಾಜ್ಯದ ಅಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರವು ತನ್ನ ಶಾಸಕರು, ಸಚಿವರು ಹಾಗೂ ಮುಖಂಡರಿಂದಲೇ ಆಸ್ತಿ ಲೂಟಿಯಾಗಿರುವುದನ್ನು ಮುಚ್ಚಿಡಲು ಕುತಂತ್ರ ನಡೆಸಿ ಸದ್ರಿ ವರದಿಯನ್ನೇ ಕಸದ ಬುಟ್ಟಿಗೆಸೆಯಿತು ಎಂದಿದ್ದಾರೆ.

ಈಗಾಗಲೇ ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಮಂಡನೆಯ ಸಮಯದಲ್ಲಿ ಈ ವರದಿಯ ಗಂಭೀರತೆಯ ಬಗ್ಗೆ ಚರ್ಚೆಯಾಗಿರುವುದು ಕೂಡ ಗಮನಾರ್ಹ ಅಂಶವಾಗಿರುತ್ತದೆ. ಈ ಎಲ್ಲ ಬೆಳವಣಿಗೆಗಳ ಬಳಿಕ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿರುವ ವಿರೋಧ ಪಕ್ಷಗಳು ಹಾಗೂ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಈ ಮಸೂದೆ ಮುಸ್ಲಿಂ ವಿರೋದಿ ಎಂದು ಬೊಬ್ಬಿರಿತ್ತಿರುವುದು ಕಂಡುಬರುತ್ತಿದೆ.

ಅನಾದಿ ಕಾಲದಿಂದಲೂ ನಮ್ಮ ಸಮುದಾಯದ ಹಿರಿಯರು, ಶ್ರೀಮಂತ ವರ್ಗದ ಆಸ್ತಿವಂತರು, ತ್ಯಾಗಜೀವಿಗಳು ಬಡವರ ಬಗ್ಗೆ ಕಾಳಜಿ ಹೊಂದಿ ತಮ್ಮ ಒಡೆತನದ ಅಸ್ತಿಗಳನ್ನು ವಕ್ಫ್ ಮಾಡಿ ಪವಿತ್ರವಾದ ಉದ್ದೇಶ ಇರಿಸಿಕೊಂಡು ಅದನ್ನು ಅಲ್ಲಾಹನ ಆಸ್ತಿ ಎಂದು ಘೋಷಿಸಿದ್ದಾರೆ. ಸಮುದಾಯದ ಶ್ರೇಯೋಭಿವೃದ್ದಿಗೆ ಹಾಗೂ ಬಡ ಮುಸ್ಲಿಮರ ಕಲ್ಯಾಣಕ್ಕಾಗಿ ದುಡಿಯಬೇಕಾಗಿದ್ದ ರಾಷ್ಟ್ರೀಯ ವಕ್ಫ್ ಸಂಸ್ಥೆಗಳು, ರಾಜಕೀಯ ಪಕ್ಷಗಳು ವಕ್ಫ್ ಆಸ್ತಿಗಳನ್ನು ದುರುಪಯೋಗಿಸಿವೆ.

ಈ ಎಲ್ಲಾ ಒಳಿತು ಕೆಡುಕುಗಳ ಬಗ್ಗೆ ಚಿಂತಿಸಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ವಕ್ಫ್ ನೂತನ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವ ಬಗ್ಗೆ ಸತ್ಯಾಸತ್ಯತೆ ಅರಿತುಕೊಂಡು ಇನ್ನಾದರು ಆ ತ್ಯಾಗಜೀವಿಗಳ ಪವಿತ್ರವಾದ ಕೊಡುಗೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿ ಶಾಪಕ್ಕೆ ಒಳಗಾಗುವುದರ ಬದಲಿಗೆ ಮುಸ್ಲಿಂ ಸಮುದಾಯದ ಬಡವರ ಏಳಿಗೆಗಾಗಿ ಉಪಯೋಗಿಸುವ ಪುಣ್ಯ ಕೆಲಸಕ್ಕೆ ಮುಂದಾಗಲಿ ಎಂದು ಎಂ.ಸಲೀಂ ಅಂಬಾಗಿಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article