ಮುಸ್ಲಿಮರು ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಬಲಿಯಾಗಬಾರದು: ಕಾಗೇರಿ

KannadaprabhaNewsNetwork | Published : Jul 10, 2024 12:37 AM

ಸಾರಾಂಶ

ಮುಸ್ಲಿಮರು ಬಿಜೆಪಿ ವಿರುದ್ಧದ ಮತ ಚಲಾಯಿಸುವ ಮಾನಸಿಕತೆ ಬದಲಾಯಿಸಿಕೊಳ್ಳಬೇಕು. ಒಂದೇ ಕಡೆ ಮತ ಚಲಾಯಿಸುವ ಮನಸ್ಥಿತಿ ಎಂದಿಗೂ ಒಳ್ಳೆಯದಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಭಟ್ಕಳ: ಕಾಂಗ್ರೆಸ್ ವೋಟ್ ಬ್ಯಾಂಕ್‌ಗೋಸ್ಕರ ಮಾತ್ರ ಮುಸ್ಲಿಮರನ್ನು ಓಲೈಕೆ ಮಾಡುತ್ತಿದೆ. ಮುಸ್ಲಿಮರು ದೇಶದ ಮುಖ್ಯವಾಹಿನಿಯಲ್ಲೇ ಇರಬೇಕು. ಕಾಂಗ್ರೆಸ್ಸಿನ ಯಾವುದೇ ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಮಂಗಳವಾರ ಪಟ್ಟಣದ ಆಸರಕೇರಿ ತಿರುಮಲ ವೆಂಕಟ್ರಮಣ ಸಭಾಭವನದಲ್ಲಿ ಬಿಜೆಪಿ ಮಂಡಲದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮುಸ್ಲಿಮರು ಬಿಜೆಪಿ ವಿರುದ್ಧದ ಮತ ಚಲಾಯಿಸುವ ಮಾನಸಿಕತೆ ಬದಲಾಯಿಸಿಕೊಳ್ಳಬೇಕು. ಒಂದೇ ಕಡೆ ಮತ ಚಲಾಯಿಸುವ ಮನಸ್ಥಿತಿ ಎಂದಿಗೂ ಒಳ್ಳೆಯದಲ್ಲ ಎಂದರು.

ಅಲ್ಪಸಂಖ್ಯಾತರು ಸರಿ ತಪ್ಪಿನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಒಳಗಾಗಬಾರದು. ಒಂದೇ ಕಡೆ ಮತ ಚಲಾಯಿಸುವ ಮನಸ್ಥಿತಿಯಿಂದ ಮುಂದೆ ಅಪಾಯ ಆಗುವ ಸಾಧ್ಯತೆ ಇದ್ದು, ಈಗಿಂದಲೇ ಸರಿಪಡಿಸಿಕೊಳ್ಳಬೇಕು ಎಂದ ಅವರು, ಕ್ಷೇತ್ರದ ಜನರು ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಲು ನನಗೆ ದಾಖಲೆ ಮತ ನೀಡಿ ಆಯ್ಕೆ ಮಾಡಿದ್ದಾರೆ. ಭಟ್ಕಳದ ಕ್ಷೇತ್ರದಲ್ಲೂ ನನಗೆ ಮುಖಂಡರು, ಕಾರ್ಯಕರ್ತರ ಪರಿಶ್ರಮದಿಂದ ಹೆಚ್ಚಿನ ಮತಗಳು ಲಭಿಸಿವೆ ಎಂದರು.

ಜಿಲ್ಲೆಯಲ್ಲಿ ಅತಿಕ್ರಮಣ ಸಕ್ರಮ, ಹೆದ್ದಾರಿ, ಮೀನುಗಾರಿಕೆ, ರೈಲ್ವೆ, ಪ್ರವಾಸೋದ್ಯಮ, ನಿರುದ್ಯೋಗ ಹೀಗೆ ನಾನಾ ರೀತಿಯ ಸಮಸ್ಯೆಗಳಿದ್ದು, ಇದನ್ನು ಹಂತ- ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಭಟ್ಕಳ ಕ್ಷೇತ್ರದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ ತಂದ ಅಭಿವೃದ್ಧಿ ಕಾಮಗಾರಿಗಳನ್ನೇ ಸಚಿವ ಮಂಕಾಳು ವೈದ್ಯ ಮುಂದುವರಿಸಿದ್ದಾರೆ. ಇದನ್ನು ಬಿಟ್ಟು ಸಚಿವರು ಅವರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ತಂದಿಲ್ಲ ಎಂದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ, ಡಾ. ಜಿ.ಜಿ. ಹೆಗಡೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಜೆಡಿಎಸ್ ತಾಲೂಕು ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಹೇಮಂತ ಗಾಂವಕರ್ ಮುಂತಾದವರಿದ್ದರು. ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧನ್ಯಕುಮಾರ ಜೈನ್ ನಿರೂಪಿಸಿದರು. ಬಿಜೆಪಿ ಮಂಡಲ ಸೇರಿದಂತೆ ವಿವಿಧ ಮೋರ್ಚಾ, ಸಂಘ- ಸಂಸ್ಥೆಗಳಿಂದ ಸಂಸದ ಕಾಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಕ್ಷವಿರೋಧಿಗಳಿಗೆ ಮಣೆ ಹಾಕದಿರಿ: ಸುನೀಲ ನಾಯ್ಕ

ಭಟ್ಕಳ: ಬಿಜೆಪಿಯಲ್ಲಿದ್ದುಕೊಂಡೇ ಕೆಲವರು ಸೊಸೈಟಿ ಚುನಾವಣೆ ಸೇರಿದಂತೆ ಬೇರೆ ಬೇರೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದು, ಲೋಕಸಭಾ ಚುನಾವಣೆಗೆ ಮಾತ್ರ ಬಿಜೆಪಿ ಪರವಾಗಿ ಕೆಲಸ ಮಾಡುತ್ತಾರೆ. ಇಂತಹ ಮನಸ್ಥಿತಿಯಿಂದ ಪಕ್ಷ ಮತ್ತು ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಮನಸ್ಥಿತಿ ಇರುವವರಿಗೆ ಹುದ್ದೆ ನೀಡಲಾಗಿದ್ದು, ಮೊದಲು ಇಂಥವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆಗ್ರಹಿಸಿದರು.

ಸಂಸದ ಕಾಗೇರಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿಯಂತಹ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದರು.

ಕಾಂಗ್ರೆಸ್ ಸರ್ಕಾರ ಬಂದ ನಂತರ ಭಟ್ಕಳದಲ್ಲಿ ಹಲವು ಕಾರ್ಯಕರ್ತರ ಮೇಲೆ ಕೇಸು ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರ ರಕ್ಷಣೆಗೆ ತಕ್ಷಣ ಬರುವ ಕೆಲಸ ಆಗಬೇಕು ಎಂದರು.

Share this article