ಎಚ್.ಎನ್ .ಪ್ರಸಾದ್
ಮುತ್ತತ್ತಿ ಗ್ರಾಮದ ಆರಾಧ್ಯ ದೈವ ಶ್ರೀಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ಭಕ್ತಿ ಭಾವ ಪೂರಕವಾಗಿ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.
ಗುರುವಾರ ಬೆಳಗ್ಗೆ ಕಾವೇರಿ ನದಿಯಿಂದ ನೀರನ್ನು ತಂದು ದೇವರಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ಗಣಹೋಮ ನಡೆದ ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ಪೂಜಾ ಪುನಸ್ಕಾರಗಳನ್ನು ನಡೆಸಿ ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಯೋಗಿಸಲಾಯಿತು.ಅಪಾರ ಸಂಖ್ಯೆಯಲ್ಲಿ ರಾಮನಗರ, ಚಾಮರಾಜನಗರ, ಕನಕಪುರ, ತಮಿಳುನಾಡಿನ ದಕಣಿಕೋಟೆ ಮತ್ತು ಇತರ ಜಿಲ್ಲೆಗಳಿಂದಲೂ ಭಾಗವಹಿಸಿದ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ದೇವಸ್ಥಾನದ ಒಳಾಂಗಣದ ಆವರಣವನ್ನು ತುಳಿಸಿ ಹಾರದಿಂದ ಸಿಂಗರಿಸಿ ಅದರ ನಡುವೆ ವಿವಿಧ ರೀತಿಯ ಹಣ್ಣು ಹಂಪಲಗಳನ್ನು ಕಟ್ಟಿ ವಿಶೇಷವಾಗಿ ದೇವಸ್ಥಾನವನ್ನು ಅಲಂಕರಿಸಲಾಗಿತ್ತು.
ಅರ್ಚಕರಾದ ಹನುಮಂತು ಮತ್ತು ಅವರ ಸಹಾಯಕರು ಮಡಿವಾಳ ಹಾಸಿದ ಮಡಿ ಮೇಲೆ ದೇವಸ್ಥಾನದ ತಳಿಗೆ ಮನೆಗೆ ತೆರಳಿ ದೇವರ ಪ್ರಸಾದವನ್ನು ತಂದು ದೇವರಿಗೆ ನೈವೇದ್ಯ ಮಾಡಿದರು. ನಂತರ ದೇವಸ್ಥಾನದ ಆವರಣದಲ್ಲಿ ಅರಳಿ ಮರಕ್ಕೆ ಮಡಿಕೆಯೊಳಗೆ ಹಾಲು ಮೊಸರು ಹಾಕಿ ಅದನ್ನು ಹಗ್ಗದಿಂದ ಕಟ್ಟಿ ದೇವಸ್ಥಾನದ ಅರ್ಚಕರು ಮರವನ್ನೇರಿ ಆ ಮಡಿಕೆಯನ್ನು ಉಯ್ಯಾಲೆ ರೀತಿಯಲ್ಲಿ ಆಟವಾಡುತ್ತಾರೆ.
ನಂತರ ಅರ್ಚಕರು ತೆಂಗಿನಕಾಯಿಗೆ ಹಗ್ಗವನ್ನು ಕಟ್ಟಿ ರಸ್ತೆಗೆ ಎಸೆಯುವುದು, ಬಿದಿರುಕೊಲನ್ನು ಚೂಪಾಗಿ ಮಾಡಿಕೊಂಡು ಅದರಿಂದ ತೆಂಗಿನಕಾಯಿ ಸಿಪ್ಪೆಯನ್ನು ಸುಲಿಯಲು ಯುವಕರು ಪ್ರಯತ್ನಿಸುತ್ತಿರುವಾಗ ಅರ್ಚಕರು ಹಗ್ಗವನ್ನು ಎಳೆದು ತೆಂಗಿನಕಾಯಿ ಅವರಿಗೆ ಸಿಗದಂತೆ ಮಾಡುವುದು ಒಂದು ವಿಶೇಷವಾಗಿದೆ.
ದೇವಸ್ಥಾನದ ಅರ್ಚಕರಾದ ರವಿ ಮಾತನಾಡಿ, ಮುತ್ತತ್ತಿರಾಯನ ಸನ್ನಿಧಿಗೆ ಸುಮಾರು 5000 ಹೆಚ್ಚು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಪೊಲೀಸ್ ಪೂಜೆ ಮುಗಿದ ನಂತರ ಜಾತ್ರೆ ಮುಕ್ತಾಯಗೊಳ್ಳುತ್ತದೆ ಎಂದರು.
ವರನಟ ದಿ.ಡಾ.ರಾಜಕುಮಾರ್ ಅವರ ಮನೆದೇವರಾಗಿರುವ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ. ಶಕ್ತಿ ದೇವರಾದ ಈ ಆಂಜನೇಯಸ್ವಾಮಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸದ ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ ಎಂದು ತಿಳಿಸಿದರು.