ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅಪಘಾತ ಸಂಬಂಧ ಪ್ರಕರಣದ ಕೇಸ್ ಪಡೆಯುವ ವಿಚಾರದಲ್ಲಿ ತಾಲೂಕು ವಕೀಲರ ನಡುವೆ ಪರಸ್ಪರ ವಿವಾದ ಉಂಟಾಗಿದ್ದು, ಘಟನೆ ಸಂಬಂಧ ಪರಸ್ಪರ ದೂರು, ಪ್ರತಿ ದೂರು ದಾಖಲಾಗಿದೆ.ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಗವಿರಂಗಪ್ಪ ದೇವಾಲಯದ ಬಳಿ ನಡೆದ ಅಪಘಾತ ಪ್ರಕರಣದಲ್ಲಿ ವಕೀಲ ಬೋರೇಗೌಡ ಅಕ್ರಮವಾಗಿ ನಡೆದುಕೊಂಡಿದ್ದಾರೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ಮತ್ತು ಸಂಘದ ಕೆಲವು ಪದಾಧಿಕಾರಿಗಳು ಪ್ರಶ್ನಿಸಿದಾಗ ಬೋರೇಗೌಡ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಪಟ್ಟಣ ಪೋಲೀಸರಿಗೆ ದೂರು ನೀಡಿದರು.
ಇದಕ್ಕೆ ಪ್ರತಿಯಾಗಿ ನಾಗೇಗೌಡ ಮತ್ತು ಮತ್ತಿತರ ವಕೀಲರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ವಕೀಲ ಬೋರೇಗೌಡ ಪ್ರತಿದೂರು ದಾಖಲಿಸಿದ್ದಾರೆ.ಈ ಬಗ್ಗೆ ಸಂಘದ ಭವನದಲ್ಲಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ ನೇತೃತ್ವದಲ್ಲಿ ವಕೀಲರು ಸುದ್ದಿಗೋಷ್ಠಿ ನಡೆಸಿ ವಕೀಲ ಬೋರೇಗೌಡ ಮಾಧ್ಯಮದ ಮುಂದೆ ಕೆಲವು ದಾಖಲೆಗಳ ಮೂಲಕ ಬಹಿರಂಗಗೊಳಿಸಿರುವುದು ವಕೀಲ ವೃತ್ತಿಗೆ ಕಳಂಕ ಎಂದು ದೂರಿದರು.
ಸಂಘದ ಯಾವುದೇ ಪದಾಧಿಕಾರಿಗಳು ಬೋರೇಗೌಡರ ಮೇಲೆ ಹಲ್ಲೆ ನಡೆಸಿಲ್ಲ. ಆತನ ಅಕ್ರಮ ಚಟುವಟಿಕೆಗಳನ್ನು ಪ್ರಶ್ನಿಸಿದ ವಕೀಲರ ಮೇಲೆ ಹಲ್ಲೆ ನಡೆಸಿದ್ದು, ಸ್ವಯಂ ಹಲ್ಲೆ ಮಾಡಿಕೊಂಡು ಸುಳ್ಳು ಪ್ರತಿದೂರು ದಾಖಲಿಸಿ ತಾಲೂಕು ವಕೀಲರ ಸಂಘ ಮತ್ತು ವಕೀಲರ ಘನತೆಗೆ ಧಕ್ಕೆ ತಂದಿದ್ದಾನೆ. ವಕೀಲ ಬೋರೇಗೌಡರ ವಿರುದ್ದ ಸಾಕಷ್ಟು ಆರೋಪಗಳಿವೆ ಎಂದರು.ಈತನಿಂದ ವಂಚನೆಗೆ ಒಳಗಾದ ಕೆಲವು ಕಕ್ಷಿದಾರರು ಈತನ ಮೇಲೆ ನ್ಯಾಯಾಲಯದ ಆವರಣದಲ್ಲಿಯೇ ಒಮ್ಮೆ ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ಕೊಡಿಸುತ್ತೇನೆಂದು ಕೆಲವರಿಂದ ಹಣ ಪಡೆದು ವಂಚಿಸಿದ್ದು, ಈತನ ವಿರುದ್ಧ ಬೆಂಗಳೂರಿನ ವಿಧಾನ ಸೌಧ ಪೊಲೀಸರಿಂದ ಹತ್ತು ಹಲವು ಪ್ರಕರಣ ದಾಖಲಿಸಲಾಗಿದೆ. ಬೋರೇಗೌಡ ವಕೀಲ ವೃತ್ತಿಗೆ ಕಳಂಕ ಎಂದು ದೂರಿದರು.
ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಹಿರಿಯ ವಕೀಲರಾದ ಕೆ.ಎನ್.ನಾಗರಾಜು, ಮಹೇಶ್, ಗಂಜೀಗೆರೆ ಲೋಕೇಶ್ ಮತ್ತು ನಿರಂಜನ್ ಸೇರಿ ಹಲವು ವಕೀಲರು ಇದ್ದರು.