ಮುಜರಾಯಿ ದೇಗುಲ ಜಾಗ ಅನ್ಯಧರ್ಮೀಯರ ಹೆಸರಿಗೆ ಖಾತೆ

KannadaprabhaNewsNetwork |  
Published : Jun 23, 2025, 11:52 PM IST
೨೩ಕೆಎಂಎನ್‌ಡಿ-೨ಮಂಡ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಾಮಾಜಿಕ ಕಾರ‌್ಯಕರ್ತ ಕಲ್ಲೇಶ್ ಮಾತನಾಡಿದರು. | Kannada Prabha

ಸಾರಾಂಶ

ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯ ಗಂಗರ ಕಾಲದ ದೇವಸ್ಥಾನ. ಈ ದೇವಸ್ಥಾನಕ್ಕೆ ಸೇರಿದ ಜಾಗಕ್ಕೆ ಸಂಬಂಧಿಸಿದ ದಾಖಲಾತಿಗಳು ೧೯೭೦-೭೧ರಲ್ಲೇ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ ಎಂದು ಸ್ವತಃ ತಹಸೀಲ್ದಾರ್ ಅವರೇ ಹಿಂಬರಹ ಕೊಟ್ಟಿದ್ದಾರೆ. ಆದರೂ ಈ ಜಮೀನು ಅನ್ಯ ಕೋಮಿನವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾದರೂ ಹೇಗೆ ಮತ್ತು ಏಕೆ..?.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕು ಧನಗೂರು ಗ್ರಾಮದ ಶ್ರೀವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನನ್ನು ಅನ್ಯ ಕೋಮಿನವರ ಹೆಸರಿಗೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕಲ್ಲೇಶ್ ಆರೋಪಿಸಿದರು.

ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯ ಗಂಗರ ಕಾಲದ ದೇವಸ್ಥಾನ. ಈ ದೇವಸ್ಥಾನಕ್ಕೆ ಸೇರಿದ ಜಾಗಕ್ಕೆ ಸಂಬಂಧಿಸಿದ ದಾಖಲಾತಿಗಳು ೧೯೭೦-೭೧ರಲ್ಲೇ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ ಎಂದು ಸ್ವತಃ ತಹಸೀಲ್ದಾರ್ ಅವರೇ ಹಿಂಬರಹ ಕೊಟ್ಟಿದ್ದಾರೆ. ಆದರೂ ಈ ಜಮೀನು ಅನ್ಯ ಕೋಮಿನವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾದರೂ ಹೇಗೆ ಮತ್ತು ಏಕೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ದೇವಸ್ಥಾನಕ್ಕೆ ಸೇರಿದ ಜಾಗ ಧನಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ. ಆದರೆ ಧನಗೂರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮಾತ್ರ ನಮ್ಮಲ್ಲಿ ಯಾವುದೇ ದಾಖಲೆಗಳು ಇಲ್ಲವೆಂದು ಹೇಳುತ್ತಿದ್ದಾರೆ. ದಿಶಾಂಕ್ ತಂತ್ರಾಂಶದಲ್ಲಿ ಗ್ರಾಮದ ಸ.ನಂ.೧೧೯ ಮತ್ತು ೧೨೧ ಎಂದು ತೋರಿಸುತ್ತದೆ. ಆದರೆ, ಗ್ರಾಮಠಾಣಾ ವ್ಯಾಪ್ತಿಗೆ ಎಷ್ಟು ಜಮೀನು ಇದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು.

ದೇವಸ್ಥಾನಕ್ಕೆ ಸೇರಿದ ಜಮೀನನ್ನು ಅಳತೆ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ನಾವು ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಿದ್ದು, ತಹಸೀಲ್ದಾರ್ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸರ್ವೇ ಮಾಡಿ ಹದ್ದುಬಸ್ತು ಮಾಡಲು ಸೂಚಿಸಿರುತ್ತಾರೆ. ಆದರೆ, ಸರ್ವೇಯರ್‌ಗಳು ಈವರೆವಿಗೂ ದೇವಸ್ಥಾನದ ಜಮೀನು ಎಷ್ಟಿದೆ ಎಂಬುದರ ಬಗ್ಗೆ ಅಳತೆ ಮಾಡಿರುವುದಿಲ್ಲ ಎಂದು ದೂರಿದರು.

೧೯೭೦ರಿಂದಲೂ ದೇವಸ್ಥಾನದಲ್ಲಿ ಎಂ.ಮಹದೇವ ಎಂಬುವರು ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನ ಮುಜರಾಯಿ ಇಲಾಖೆಯ ಸಿ-ದರ್ಜೆಗೆ ಸೇರಿದ್ದು, ಅರ್ಚಕ ಮಹದೇವ ಅವರಿಗೆ ಪ್ರತಿ ವರ್ಷ ಮುಜರಾಯಿ ಇಲಾಖೆಯಿಂದ ೬೦ ಸಾವಿರ ರು.ಗಳ ತಸ್ತಿಕ್ ಹಣವನ್ನು ಪಾವತಿ ಮಾಡಲಾಗುತ್ತಿದೆ. ಆದರೆ, ಜಮೀನು ಮಾತ್ರ ಅನ್ಯ ಕೋಮಿನ ಜನರ ಹೆಸರಿನಲ್ಲಿರುವುದಕ್ಕೆ ಅಧಿಕಾರಿಗಳ ಲೋಪವೇ ಕಾರಣ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದಲ್ಲಿ ಜಮೀನು ಆರ್‌ಟಿಸಿಯಲ್ಲಿ ಮುಸ್ಲಿಂ ಜನಾಂಗದ ಹೆಸರಿಗೆ ಬರುತ್ತಿದ್ದು, ಕೂಡಲೇ ಅಳತೆ ಮಾಡಿಸಿ ಮುಜರಾಯಿ ಇಲಾಖೆಗೆ ಸೇರಿದ ಜಾಗವನ್ನು ಈ ಕೂಡಲೇ ಬಿಡಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹಲಗೂರು ಗ್ರಾಮದ ಬಸ್ ನಿಲ್ದಾಣದ ಬಳಿ ಖಾಸಗಿ ವ್ಯಕ್ತಿಗಳು ಶ್ರೀಆಂಜನೇಯಸ್ವಾಮಿ ದೇವಾಲಯ ನಿರ್ಮಿಸಿ ಟ್ರಸ್ಟ್‌ವೊಂದನ್ನು ರಚಿಸಿಕೊಂಡು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದರು. ಇದನ್ನು ಸಹಿಸದ ಕೆಲವರು ಪಿತೂರಿ ನಡೆಸಿ ಟ್ರಸ್ಟಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಿರುಕುಳ ನೀಡಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ನಡೆಯದಂತೆ ಮಾಡುವಲ್ಲಿ ಯಶಸ್ವಿಯಾದರು. ಆದರೆ, ಮುಜರಾಯಿ ಇಲಾಖೆಗೆ ಸೇರಿದ ಶ್ರೀವೀರಭದ್ರೇಶ್ವರಸ್ವಾಮಿ ದೇವಾಲಯದ ಜಮೀನನ್ನು ಅನ್ಯ ಕೋಮಿನವರ ಹೆಸರಿಗೆ ದಾಖಲಾಗಿದ್ದರೂ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಆನಂದ್, ಶಿವಣ್ಣ ಗೋಷ್ಠಿಯಲ್ಲಿದ್ದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು