ಕನ್ನಡಪ್ರಭ ವಾರ್ತೆ ಮೈಸೂರುಯುವ ಜನರ ಭಾಗವಹಿಸುವಿಕೆಗೆ ಸರಕು ಸೇವಾ ತೆರಿಗೆ ಸುಧಾರಣೆ (ಜಿಎಸ್.ಟಿ 2.0) ಉತ್ತಮ ಸಾಧನ ಎಂದು ಟೆರಿಷಿಯನ್ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಜಿ. ಶ್ರುತಿ ಹೇಳಿದರು.ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳು (ಜಿಎಸ್.ಟಿ 2.0)ಎಂಬ ವಿಷಯವನ್ನು ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.ಸೆಪ್ಟೆಂಬರ್ 2025 ರಲ್ಲಿ ಪರಿಚಯಿಸಲಾದ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳು ಭಾರತದ ಯುವ ಜನರ ಆಕಾಂಕ್ಷೆಗಳನ್ನು ಉತ್ತಮವಾಗಿ ಪೂರೈಸಲು ಭಾರತದ ತೆರಿಗೆ ವ್ಯವಸ್ಥೆಯನ್ನು ಪುನರ್ ರೂಪಿಸುವಲ್ಲಿ ಒಂದು ಹೊಸ ಹೆಜ್ಜೆಯನ್ನು ಇಟ್ಟಿದೆ. ತೆರಿಗೆ ರಚನೆಗಳನ್ನು ಸರಳೀಕರಿಸುವ ಮೂಲಕ ಪ್ರಮುಖ ಕೈಗಾರಿಕೆಗಳಲ್ಲಿ ತೆರಿಗೆ ದರಗಳನ್ನು ಕಡಿತಗೊಳಿಸುವ ಮೂಲಕ ಮತ್ತು ದೀರ್ಘಕಾಲೀನ ವೈಪರೀತ್ಯಗಳನ್ನು ಪರಿಹರಿಸುವ ಮೂಲಕ ಉದ್ಯಮಶೀಲತೆ, ಉದ್ಯೋಗಸೃಷ್ಠಿ ಹಾಗೂ ಕೈಗೆಟಕುವ ಜೀವನಕ್ಕೆ ದಾರಿ ಮಾಡಿಕೊಡುವ ವಾತಾವರಣವನ್ನು ಸೃಷ್ಠಿಸಲು ರೂಪಿತವಾಗಿದೆ ಎಂದರು.ವಿಶೇಷವಾಗಿ ಶಿಕ್ಷಣ, ಆರೋಗ್ಯ, ಆಟೋ ಮೊಬೈಲ್, ತಂತ್ರಜ್ಞಾನ, ಕರಕುಶಲ ವಸ್ತುಗಳು, ಪಾದರಕ್ಷೆಗಳು, ಚರ್ಮೊದ್ಯಮ, ಆಹಾರ ಸಂಸ್ಕರಣೆ ಮತ್ತು ಜವಳಿಯಂತಹ ಕ್ಷೇತ್ರಗಳಿಗೆ ಯುವ ಜನರ ಭಾಗವಹಿಸುವಿಕೆಯನ್ನು ಮತ್ತು ಅದರಲ್ಲಿನ ವೆಚ್ಚಗಳನ್ನು ಕಡಿಮೆ ಮಾಡಿ ಸ್ಪರ್ಧೆಯನ್ನು ಉತ್ತೇಜಿಸುವ ಹಾಗೂ ನಾವಿನ್ಯತೆಯನ್ನು ಹೆಚ್ಚಿಸಲು ಆಧ್ಯತೆ ನೀಡಿದೆ ಇದರಿಂದ ಮುಂದಿನ ಪೀಳಿಗೆಯ ಸಮಗ್ರ ಬೆಳವಣಿಗೆ, ಸುಸ್ಥಿರತೆ ಮತ್ತು ಸಬಲೀಕರಣದ ದೃಷ್ಠಿಕೋನವನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.ಪ್ರಸ್ತುತ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಯು ಯುವ ಜನರ ನೇತೃತ್ವ ಎಂ.ಎಸ್.ಎಂ.ಇ. ಮತ್ತು ಭಾರತದ ರಫ್ತುನ್ನು ಉತ್ತೇಜಿಸಲು ಪರಿಣಾಮಕಾರಿಯಾದ ಸಾಧನವಾಗಿ ಮಾರ್ಪಟ್ಟಿದ್ದು, ಆಧುನಿಕ ಭಾರತದ ಆರ್ಥಿಕ ಬೆಳವಣಿಗೆಯನ್ನು ಬಲಗೊಳಿಸಲು ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.ಉಪನ್ಯಾಸದ ನಂತರ ಬಿ.ಎ. ವಿದ್ಯಾರ್ಥಿಗಳಾದ ಸಿಂಧುಶ್ರೀ, ಅನಿಲ್ ಮತ್ತು ಪೃಥ್ವಿರಾಜ್ ಹಾಗೂ ಬಿಬಿಎ ವಿದ್ಯಾರ್ಥಿಗಳಾದ ಪಂಕಜ್ ಮತ್ತು ಹರ್ಷ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು.ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪಿ.ಜಿ. ಪುಷ್ಪರಾಣಿ, ಆರ್. ಸಿದ್ದಪ್ಪ ಚಲುವೇಗೌಡ, ವಾಣಿಜ್ಯಶಾಸ್ತದ ಪ್ರಾಧ್ಯಾಪಕಿ ದಿವ್ಯಾ ಇದ್ದರು. ವಿದ್ಯಾರ್ಥಿಗಳು ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.