ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ: ಈಶ್ವರಪ್ಪ

KannadaprabhaNewsNetwork | Updated : Apr 09 2024, 06:13 AM IST

ಸಾರಾಂಶ

ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಾಲಯವನ್ನು ಕೆ.ಎಸ್.ಈಶ್ವರಪ್ಪ ಹಾಗೂ ಗೂಳಿಹಟ್ಟಿ ಶೇಖರ್ ಉದ್ಘಾಟಿಸಿದರು.

 ಭದ್ರಾವತಿ :  ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ, ಚುನಾವಣೆ ಬಳಿಕ ಕುಟುಂಬದ ರಾಜಕಾರಣ ಮುಕ್ತಾಯಗೊಳ್ಳಲಿದೆ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.

ನಗರದ ಚನ್ನಗಿರಿ ರಸ್ತೆಯಲ್ಲಿ ಸೋಮವಾರ ರಾಷ್ಟ್ರ ಭಕ್ತರ ಬಳಗದ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಹೋರಾಟ ಪಕ್ಷದ ವಿರುದ್ಧವಲ್ಲ. ಪಕ್ಷದಲ್ಲಿ ಕೆಲವರು ನಡೆಸುತ್ತಿರುವುದು ಷಡ್ಯಂತ್ರಗಳ ವಿರುದ್ಧ. ದೇಶದಲ್ಲಿ ಮೋದಿ ಪುನಃ ಪ್ರಧಾನಿಯಾಗಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದರು.

ಪ್ರಸ್ತುತ ಬಿಜೆಪಿಯಲ್ಲಿ ದಲಿತರು, ಹಿಂದುಳಿದವರು ಸೇರಿದಂತೆ ಯಾವ ನಾಯಕರನ್ನು ಸಹ ಬೆಳೆಯಲು ಬಿಡಲಿಲ್ಲ. ಅಲ್ಲದೆ ಪಕ್ಷದಲ್ಲಿನ ನಿಷ್ಠಾವಂತ ಕೆಲ ನಾಯಕರನ್ನು ಸಹ ತುಳಿಯುವ ಮೂಲಕ ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ನಾಯಕರೊಬ್ಬರು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ನನ್ನ ಸ್ಪರ್ಧೆ ಖಚಿತವಾಗಿದ್ದು, ನಾನು ವಿಧಾನಸಭೆ ಅಥವಾ ಲೋಕಸಭೆಗೆ ಆಯ್ಕೆಯಾದರೂ ಅಭಿವೃದ್ಧಿ ಕೆಲಸಗಳನ್ನು ಹೇಗೆ ಕೈಗೊಳ್ಳುವುದು ಎಂಬುದು ಗೊತ್ತಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜನರು ನನ್ನನ್ನು ನಿರಂತರವಾಗಿ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ನಾನು ಎಲ್ಲಾ ಧರ್ಮದ, ಜಾತಿ, ಜನಾಂಗದವರ ಪರವಾಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಮಾತನಾಡಿ, ಈಶ್ವರಪ್ಪನವರು ಕೇವಲ ಹಿಂದುತ್ವದ ನಾಯಕರಲ್ಲ, ಜನಮೆಚ್ಚುವ ನಾಯಕರು, ಎಲ್ಲಾ ಧರ್ಮ, ಜಾತಿ ಜನಾಂದವರ ಪರವಾಗಿರುವವರು. ಇವರ ನಿಲುವನ್ನು ಪಕ್ಷದ ಅನೇಕ ನಾಯಕರು ಸಹ ಬೆಂಬಲಿಸಿದ್ದಾರೆ. ಇಂತಹ ಧೀಮಂತ ನಾಯಕರ ಗೆಲುವಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಬಿಜೆಪಿ ತಾಲೂಕು ಮಂಡಲ ಮಾಜಿ ಅಧ್ಯಕ್ಷ ಎಂ.ಪ್ರಭಾಕರ್, ಡಾ.ತೇಜಸ್, ಮಂಜ್ಯಾನಾಯ್ಕ್, ಬಾಬು, ಬಸವರಾಜ್, ರಾಘವೇಂದ್ರ, ಕರಿಬಸಪ್ಪ, ಮಂಡಲಕೊಪ್ಪ ಗಂಗಾಧರ್, ಬಿ.ವಿ ಚಂದನ್ ರಾವ್, ನಿಂಗೋಜಿ ರಾವ್, ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು.

ಮುಖಂಡರಾದ ಬಿ.ಎಸ್‌ ನಾರಾಯಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯ್ ಸಿದ್ಧಾರ್ಥ್ ನಿರೂಪಿಸಿದರು.

Share this article