ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ವಿವಿಧೆಡೆ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಾನಸುಧೆ ಹರಿಯಿತು. ನೃತ್ಯ, ಸಂಗೀತ, ನಾಟಕ ಸೇರಿದಂತೆ ರಂಗು ರಂಗಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯು ಪ್ರೇಕ್ಷಕರನ್ನು ರಂಜಿಸಿತು.
ಅರಮನೆ ಮುಂಭಾಗದ ವೇದಿಕೆಯಲ್ಲಿ ಭರತನಾಟ್ಯ ಕಲಾವಿದ ಶ್ರೀಧರ್ ಜೈನ್ ತಂಡವು ಪ್ರಸ್ತುತಪಡಿಸಿದ ಶಿವತಾಂಡವ ನೃತ್ಯರೂಪಕ್ಕೆ ಇಡೀ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.ಗಾಯಕರಾದ ಶ್ರೀಹರ್ಷ ಹಾಗೂ ರಶ್ಮಿ ಚಿಕ್ಕಮಗಳೂರು ಅವರು ಕನ್ನಡ ಕವಿಗಳ ಗೀತಗಾಯನ ಮೂಲಕ ಗಾನಸುಧೆ ಹರಿಸಿದರು.
ಮೈಸೂರು ರಾಜಮನೆತನದ ಗೀತೆ ಕಾಯೋ ಶ್ರೀಗೌರಿ, ಕುವೆಂಪುರವರ ಬಾ ಇಲ್ಲಿ ಸಂಭವಿಸು ನಿತ್ಯಾವತಾರ, ಎಲ್ಲಿ ಜಾರಿತು ಮನವೂ ಎಲ್ಲೆ ಮೀರಿತು, ನಿಸ್ಸಾರ್ ಅಹಮದ್ ಅವರ ನಿತ್ಯೋತ್ಸವ ತಾಯಿ ನಿತ್ಯೋತ್ಸವ, ಕುರಿಗಳು ಸರ್ ಕುರಿಗಳು, ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯೂ ನಿನ್ನದೇ, ಜಿ.ಪಿ. ರಾಜರತ್ನಂ ಅವರ ಹೆಂಡ ಹೆಂಡ್ತಿ ಕನ್ನಡ ಪದದೊಳ್ ಸೇರಿದಂತೆ ಖ್ಯಾತನಾಮ ಕವಿಗಳ ಭಾವಗೀತೆಗಳನ್ನು ಹಾಡಿ ರಂಜಿಸಿದರು.ಡಾ. ಮೋಹಿಸಿನ್ ಖಾನ್ ಮತ್ತು ತಂಡದಿಂದ ಸಿತಾರ್ ವಾದನ, ಎಸ್. ರಘುನಂದನ್, ಸುಮುಖ ತಂಡದಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ ಪ್ರಸ್ತುತಪಡಿಸಿತು.
ಇದೇ ವೇಳೆ ಅರಮನೆ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂಪತ್ ಕೃಷ್ಣ ಅಯ್ಯಂಗಾರ್ ದಂಪತಿಗೆ ಸಾಂಸ್ಕೃತಿಕ ಕಾರ್ಯಕ್ರಮ ಉಪ ಸಮಿತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನಪರಿಷತ್ತು ಸದಸ್ಯ ಡಾ.ಕೆ. ಶಿವಕುಮಾರ್ ಮೊದಲಾದವರು ಇದ್ದರು.ಸರಣಿ ಸಾಂಸ್ಕೃತಿಕ ವೈಭವ
ಜಗನ್ಮೋಹನ ಅರಮನೆಯಲ್ಲಿ ಸಪ್ತ ತಬಲ ವಾದನ, ಭರತನಾಟ್ಯ, ಸುಗಮ ಸಂಗೀತ, ಮೋಹಿನ ಆಟ್ಟಂ, ಕಲಾಮಂದಿರದಲ್ಲಿ ಜಾನಪದ ಗಾಯನ, ಸೋಬಾನೆ ಪದ, ಪಂಚ ವೀಣಾ ವಾದನ, ಭರತನಾಟ್ಯ, ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕಿರು ರಂಗಮಂದಿರದಲ್ಲಿ ಶಿಶಿನಾಳ ಷರೀಫ್, ಕಬೀರ ವಿರಸನ ಗೀತೆಗಳು, ಬೊಮ್ಮನಹಳ್ಳಿ ಕಿಂದರಜೋಗಿ ಮತ್ತು ಕಲ್ಲು ಕರಗುವ ಸಮಯ ನಾಟಕ ಪ್ರದರ್ಶನವಾಯಿತು.ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ಭರತನಾಟ್ಯ, ನಾದಬ್ರಹ್ಮ ಸಂಗೀತ ಸಭಾದಲ್ಲಿ ಬೀಸು ಕಂಸಾಳೆ, ಪೂಜಾ ಕುಣಿತ, ಸೋಬಾನೆ ಪದ, ತೊಗಲುಗೊಂಬೆಯಾಟ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಗಾಯನ ಜರುಗಿತು.
ಚಿಕ್ಕಗಡಿಯಾರ ವೇದಿಕೆಯಲ್ಲಿ ಡೊಳ್ಳು ಕುಣಿತ, ತತ್ವಪದ, ಜಾನಪದ ಗಾಯನ, ಸುಡುಗಾಡು ಸಿದ್ದರ ಕೈಚಳಕ, ಜನಪದ ಗೀತೆ, ಪುರಭವನದಲ್ಲಿ ರಂಗಗೀತೆ, ಮಿಸ್ಟರ್ ಗುಂಡಣ್ಣ ಮತ್ತು ಶ್ರೀಕೃಷ್ಣ ವಿಜಯ ನಾಟಕ ಪ್ರದರ್ಶನವಾಯಿತು.ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಪೂಜಾಕುಣಿತ, ಜಾನಪದ ಗೀತೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ಕಾದು ಕತೆಯಾದವರು ನಾಟಕ ಪ್ರದರ್ಶಿಸಲಾಯಿತು.