ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಿಂದ ಮೈಸೂರಿಗೆ ಕೆಎಸ್‌ಆರ್‌ಟಿಸಿ ನಾನ್ ಸ್ಟಾಪ್ ಬಸ್ ಸೇವೆ ಆರಂಭವಾಗಿದ್ದು, ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಟರೆ ಮೈಸೂರು ತನಕ ಎಲ್ಲೂ ನಿಲ್ಲದೆ ಒಂದು ಗಂಟೆ ಹತ್ತು ಅಥವಾ 15 ನಿಮಿಷದಲ್ಲಿ ಹೋಗುತ್ತಿದೆ. ಇದು ತುರ್ತಾಗಿ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ನಾನ್ ಸ್ಟಾಪ್ ಬಸ್ ತೆರಳುವುದರಿಂದ ನೌಕರರು, ಸಿಬ್ಬಂದಿ ಹಾಗು ಮೈಸೂರಿಗೆ ಅಥವಾ ಗುಂಡ್ಲುಪೇಟೆಗೆ ಹೋಗುವವರಿಗೆ ಭಾರಿ ಅನುಕೂವಾಗುತ್ತಿದೆ ಎಂದು ಪ್ರಯಾಣಿಕ ಮಹೇಶ್ ಹೇಳಿ ಕೆಎಸ್‌ಆರ್‌ಟಿಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2 ರು.ಮಾತ್ರ ಹೆಚ್ಚಳ!: ಗುಂಡ್ಲುಪೇಟೆಯಿಂದ ಮೈಸೂರಿಗೆ ಎಕ್ಸ್ ಪ್ರೆಸ್ ಸಾರಿಗೆ ಬಸ್ ದರ 73 ರು.ಗಳಾದರೆ ಗುಂಡ್ಲುಪೇಟೆಯಿಂದ ಮೈಸೂರಿಗೆ ನಾನ್ ಸ್ಟಾಪ್ ಸಾರಿಗೆ ಬಸ್ ದರ 75 ರು.ಮಾತ್ರ.ಎಕ್ಸ್ ಪ್ರೆಸ್ ಬಸ್ ಗೂ ನಾನ್ ಸ್ಟಾಪ್ ಬಸ್ 2 ರು.ಮಾತ್ರ ವ್ಯತ್ಯಾಸವಿದೆ.ಕೆಎಸ್‌ಆರ್‌ಟಿಸಿ ಗುಂಡ್ಲುಪೇಟೆ ಘಟಕ ವ್ಯವಸ್ಥಾಪಕ ತ್ಯಾಗರಾಜ್ ಮಾತನಾಡಿ, ಗುಂಡ್ಲುಪೇಟೆಯಿಂದ ಮೈಸೂರು,ಮೈಸೂರಿಂದ ಗುಂಡ್ಲುಪೇಟೆಗೆ ಪ್ರತಿ ಅರ್ಧ ಗಂಟೆಗೊಮ್ಮೆ ನಾನ್ ಸ್ಟಾಪ್ ಬಸ್ ಬಿಡಲಾಗಿದೆ. ಇದರಿಂದ ಪ್ರಯಾಣಿಕರು ತುಂಬಾ ಖುಷಿಯಾಗಿದ್ದಾರೆ. ಶಾಲಾ, ಕಾಲೇಜಿನ ವೇಳೆಯಲ್ಲೂ ಎಕ್ಸ್ ಪ್ರೆಸ್ ಬಸ್‌ಗಳ ಸಂಚಾರ ಹೆಚ್ಚಿಸಲಾಗಿದೆ ಎಂದರು.
ಆನ್ ಲೈನ್ ಸೇವೆ: ಗುಂಡ್ಲುಪೇಟೆ ಘಟಕದ ಎಲ್ಲಾ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಬಸ್ ನಿರ್ವಾಹಕರು, ಪ್ರಯಾಣಿಕರ ನಡುವೆ ಮಾತಿನ ಚಕಮಕಿ ಸಾಮಾನ್ಯ ವಿಷಯ. ಈಗ ಘಟಕದ ಎಲ್ಲಾ ಸಾರಿಗೆ ಬಸ್‌ಗಳಲ್ಲಿ ಗೂಗಲ್ ಪೇ, ಫೋನ್ ಪೇಗಳ ಮೂಲಕ ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದು ಕೂಡ ಯಶಸ್ವಿಯಾಗಿದೆ.ಗುಂಡ್ಲುಪೇಟೆ ಘಟಕದಲ್ಲಿ ನಾನ್ ಸ್ಟಾಪ್ ಬಸ್ ಬಿಟ್ಟ ಮೇಲೆ ನೌಕರರು ಹಾಗು ಪ್ರಯಾಣಿಕರಿಂದ ತುಂಬ ಮೆಚ್ಚುಗೆ ಮಾತು ಕೇಳಿ ಬಂದಿದೆ.ಫೋನ್ ಪೇ,ಗೂಗಲ್ ಪೇಗೂ ಮೆಚ್ಚುಗೆ ಪ್ರಯಾಣಿಕರಿಂದ ಬಂದಿದೆ.ಪ್ರಯಾಣಿಕರ ಅನುಕೂಲವೇ ನಿಗಮದ ಉದ್ದೇಶ.
-ತ್ಯಾಗರಾಜ್, ಘಟಕ ವ್ಯವಸ್ಥಾಪಕ