ಕನ್ನಡಪ್ರಭ ವಾರ್ತೆ ಮಂಗಳೂರು
ಮೊದಲ ದಿನ 100ಕ್ಕೂ ಅಧಿಕ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರ ಭವ್ಯ ಸಾಂಸ್ಕೃತಿಕ ಮೆರವಣಿಗೆ ಮೂಲಕ ವರ್ಣರಂಜಿತ ಚಾಲನೆ ಪಡೆದುಕೊಂಡ ವಿರಾಸತ್‌ನಲ್ಲಿ ನಂತರದ ಮೂರು ದಿನ ಸಂಗೀತ, ಕಲಾ ದಿಗ್ಗಜರು ಅದ್ಭುತ ಸಾಂಸ್ಕೃತಿಕ ಲೋಕವನ್ನೇ ತೆರೆದಿಟ್ಟರು. ಈ ಬಾರಿಯೂ ಲಕ್ಷಾಂತರ ಪ್ರೇಕ್ಷಕರು ವಿರಾಸತ್‌ಗೆ ಸಾಕ್ಷಿಯಾದರು. ನಾಲ್ಕೂ ದಿನಗಳ ಕಾಲ ಜೈನಕಾಶಿ ಮೂಡುಬಿದಿರೆಯು ಸಂಸ್ಕೃತಿ, ಸಂಗೀತ ಕಾಶಿಯಾಗಿ ಪರಿವರ್ತನೆಯಾಗಿತ್ತು. ಜತೆಗೆ ಆಳ್ವಾಸ್ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ವೈಭವ ಹೊಸ ಲೋಕವನ್ನೇ ಸೃಷ್ಟಿಸಿ ಯುವ ಪೀಳಿಗೆಯ ಪ್ರತಿಭೆಗೂ ವೇದಿಕೆ ಒದಗಿಸಿತು.
ಸಪ್ತ ಮೇಳಗಳ ವಿಶೇಷ: ಆಳ್ವಾಸ್ ವಿರಾಸತ್‌ನಲ್ಲಿ ಇದೇ ಮೊದಲ ಬಾರಿಗೆ ಸಪ್ತ ಮೇಳಗಳನ್ನು ಆಯೋಜಿಸಿದ್ದು, ಜನಸಂದಣಿಯಿಂದ ಕಿಕ್ಕಿರಿದಿದ್ದವು. ಕೃಷಿ, ಆಹಾರ, ಫಲಪುಷ್ಪ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನಗಳು ಹೊಸ ವಿಚಾರಗಳನ್ನು ಜನರಿಗೆ ಉಣಬಡಿಸಿದವು. ಅಲ್ಲದೆ ಈ ವರ್ಷದ ವಿಶೇಷವಾಗಿ ಸಾಂಸ್ಕೃತಿಕ ರಥ ಸಂಚಲನ ಜನರ ಮನ ಸೂರೆಗೊಳಿಸಿತು.ಪ್ರಶಸ್ತಿ ಪುರಸ್ಕೃತರ ಸಂಗೀತ ರಸಧಾರೆ: ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕಾರ ಮಾಡಿದ ಮೈಸೂರು ಮಂಜುನಾಥ್ ಹಾಗೂ ಪ್ರವೀಣ್ ಗೋಡ್ಖಿಂಡಿ ಅವರ ವಯೊಲಿನ್, ಕೊಳಲಿನ ತಾರಕ ನಾದದ ಜುಗಲ್ ಬಂದಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ಬಳಿಕ ವಿಜಯ ಪ್ರಕಾಶ್ ಹಾಡಿನ ಮೋಡಿ, ಮೂವರ ತಾಳ- ವಾದ್ಯ -ಸಂಗೀತ ನಾದ ಪುತ್ತಿಗೆ ಗ್ರಾಮದ ಬಯಲು ರಂಗ ಮಂದಿರದಲ್ಲಿ ಅನುರಣಿಸಿತು. ವಿಜಯ ಪ್ರಕಾಶ್ ನಡೆಸಿಕೊಟ್ಟ ಸಂಗೀತ ರಸಸಂಜೆಯಲ್ಲಿ ಇಡೀ ಪ್ರೇಕ್ಷಕವರ್ಗ ಹುಚ್ಚೆದ್ದು ಕುಣಿದಾಡಿತು.ಬಾನ್ಸುರಿ, ವಯೋಲಿನ್, ಸ್ವರ ದಿಗ್ಗಜರಿಗೆ ‘ವಿರಾಸತ್ ಪ್ರಶಸ್ತಿ’ ಗೌರವ-
ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದ ವಿಶಾಲ ವೈಭವದ ವೇದಿಕೆಯಲ್ಲಿ ಆಸೀನರಾದ ಮೂವರು ಸಾಧಕರಿಗೆ ಅವರದ್ದೇ ರಾಗ ಸಂಯೋಜನೆಯ ವಯೋಲಿನ್, ಬಾನ್ಸುರಿ ಹಾಗೂ ಸಂಗೀತದ ಮೂಲಕ ಅಭಿಮಾನದ ಪ್ರೀತಿಯನ್ನು ಧಾರೆ ಎರೆಯಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೈಸೂರು ಮಂಜುನಾಥ್, ಲೋಕದ ಸಮಸ್ತ ಸಂಭ್ರಮವನ್ನು ಮೂಡುಬಿದಿರೆಗೆ ಮೋಹನ್ ಆಳ್ವರು ತಂದಿದ್ದಾರೆ. ದೇವೇಂದ್ರನೇ ನಾಚುವ ಹಾಗೆ ವಿರಾಸತ್ ಭಾಸವಾಗುತ್ತಿದೆ. ಅವರು ಕೇವಲ ವೈಭವ ಸೃಷ್ಟಿಸಿಲ್ಲ. ಅದನ್ನು ಜನರಿಗೆ ಸಮರ್ಪಿಸಿ ಶ್ರೇಷ್ಠರಾಗಿದ್ದಾರೆ. ಮೂಡುಬಿದಿರೆ ಎಂಬ ಸಾಮಾನ್ಯ ಊರನ್ನು ವಿಶ್ವ ಭೂಪಟಕ್ಕೆ ಸೇರಿಸಿದ್ದಾರೆ ಎಂದು ಬಣ್ಣಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಮೋಹನ್ ಆಳ್ವರ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಸ್ವರ್ಗ ಲೋಕ ಸೃಷ್ಟಿಯಾಗಿದೆ. ಮನಸ್ಸು ಅರಳಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಆಳ್ವರ ಪರಿಶ್ರಮದ ಫಲ ಇದು. ಆಳ್ವಾಸ್ ವಿರಾಸತ್ ಪ್ರಶಸ್ತಿ ಪದ್ಮಶ್ರೀಗೂ ಮಿಗಿಲು ಎಂದು ಬಣ್ಣಿಸಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸಂಸದ ನಾರಾ ಸಿಂಗ್, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಶಾರದಾ ವಿದ್ಯಾಲಯದ ಎಂ.ಬಿ. ಪುರಾಣಿಕ್, ಉದ್ಯಮಿ ಶ್ರೀಪತಿ ಭಟ್ ಇದ್ದರು.