;Resize=(412,232))
ಮೈಸೂರು : ದಸರಾ ಮಹೋತ್ಸವಕ್ಕೆ ಮೈಸೂರು ನಗರವು ಸಿದ್ಧಗೊಳ್ಳುತ್ತಿದೆ. ದಸರಾ ಕಾರ್ಯಕ್ರಮಗಳ ಸಿದ್ಧತೆಗಳು ಆರಂಭವಾಗಿದ್ದು, ಭರದಿಂದ ಸಾಗುತ್ತಿವೆ. ದಸರಾ ಮಹೋತ್ಸವದ ಕೇಂದ್ರ ಬಿಂದುವಾದ ಮೈಸೂರು ಅರಮನೆಯನ್ನು ವಿದ್ಯುತ್ ಬೆಳಕು, ಬಣ್ಣದಿಂದ ಅಲಂಕರಿಸುವ ಕಾರ್ಯವೂ ಸಹ ನಡೆಯುತ್ತಿದೆ.
ವಿಶ್ವವಿಖ್ಯಾತಿ ಪಡೆದಿರುವ ಮೈಸೂರು ಅರಮನೆಯ ದೀಪಾಲಂಕಾರವು ದಸರಾ ವೇಳೆ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಹೀಗಾಗಿ, ಮೈಸೂರು ಅರಮನೆ, ಅರಮನೆ ಆವರಣದ ದೇವಸ್ಥಾನಗಳು ಹಾಗೂ ಪ್ರವೇಶಕ್ಕೆ ದ್ವಾರಕ್ಕೆ ಅಳವಡಿಸಿರುವ ಬಲ್ಬ್‌ಗಳಲ್ಲಿ ಬರ್ನ್ ಆಗಿರುವ ಬಲ್ಬ್‌ಗಳ ಬದಲಾವಣೆ ಕಾರ್ಯ ಆರಂಭವಾಗಿದೆ.
ಜೊತೆಗೆ ವಿದ್ಯುತ್ ದೀಪಗಳ ದುರಸ್ತಿ, ವಿದ್ಯುತ್ ಕಂಬಗಳ ದುರಸ್ತಿ, ಪಾರಂಪರಿಕ ವಿದ್ಯುತ್ ಕಂಬಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಅರಮನೆಯ ಒಳಾವರಣದ ಗೋಡೆಗಳು, ಪಾರ್ಕ್‌ಗಳಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್‌ಗಳಿಗೆ ಬಣ್ಣ ಬಳಿಯುವ ಕಾರ್ಯವು ನಡೆದಿದೆ.
ದಸರಾ ಸಂದರ್ಭದಲ್ಲಿ ಅರಮನೆ ಮುಂಭಾಗದ ವೇದಿಕೆಯಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದರ ಜೊತೆಗೆ ವಿವಿಧ ಕಾರ್ಯಕ್ರಮಗಳಿಗೆ ಅರಮನೆ ಆವರಣವು ಸಾಕ್ಷಿಯಾಗುತ್ತದೆ. ಹೀಗಾಗಿ, ಅರಮನೆ ಮುಂಭಾಗದಲ್ಲಿ ಆಸನ ವ್ಯವಸ್ಥೆಗೆ ಸಿದ್ಧತೆ ಆರಂಭಗೊಂಡಿರುವುದು. ಅಲ್ಲಲ್ಲಿ ಪೆಂಡಾಲ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ.
ಮೈಸೂರು ಅರಮನೆಯ ಆನೆ ಬಿಡಾರದಲ್ಲಿ ಬೀಡು ಬಿಟ್ಟಿರುವ 12 ಆನೆಗಳು ಬೆಳಗ್ಗೆ ಮತ್ತು ಸಂಜೆ ವೇಳೆ ತಾಲೀಮಿನಲ್ಲಿ ಭಾಗವಹಿಸುತ್ತಿವೆ. ಆನೆಗಳ ನಡಿಗೆಯನ್ನು ಪ್ರವಾಸಿಗರು, ಸ್ಥಳೀಯರು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಕ್ಯಾಮೆರಾ, ಮೊಬೈಲ್‌ಗಳಲ್ಲಿ ಫೋಟೋ, ವಿಡಿಯೋ ಸೆರೆ ಹಿಡಿದು, ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ತಾಲೀಮು ಮುಗಿಸಿದ ಮೇಲೆ ನೀರಿನ ತೊಟ್ಟಿಯಲ್ಲಿ ಆನೆಗಳಿಗೆ ಅದರ ಮಾವುತರು ಮತ್ತು ಕಾವಾಡಿಗಳು ಜಳಕ ಮಾಡಿಸುತ್ತಾರೆ. ಬಳಿಕ ಬಿಡಾರದಲ್ಲಿರುವ ಶೆಡ್ ಗಳಲ್ಲಿ ಆನೆಗಳು ವಿಶ್ರಾಂತಿ ಪಡೆಯುತ್ತಿವೆ.