1945ರಲ್ಲಿ ಅಂದಿನ ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 81 ವರ್ಷಗಳ ಇತಿಹಾಸ ಹೊಂದಿದೆ

ಬಿ.ಆರ್. ಚಿಕ್ಕಣ್ಣ ನಂಜನಗೂಡು

ಕನ್ನಡಪ್ರಭ ವಾರ್ತೆ ನಂಜನಗೂಡು

ಹಲವರ ಬದುಕಿಗೆ ಆಸರೆಯಾಗಿದ್ದ ಐತಿಹಾಸಿಕ ಶಾಲೆ ಇಂದು ದುಸ್ಥಿತಿಯಲ್ಲಿದ್ದರಿಂದ ಹಳೆ ವಿದ್ಯಾರ್ಥಿ ಗಳು ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.

ತಾವು ಕಲಿತು, ಬದುಕಿನಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಲು ಆಸರೆಯಾದ ಶಾಲೆಯು ಇಂದು ದುಸ್ಥಿತಿಗೆ ತಲುಪಿರುವುದನ್ನು ಕಂಡ ಹಳೆಯ ವಿದ್ಯಾರ್ಥಿಗಳ ತಂಡವೊಂದು ಶಾಲೆಯ ಪುನಶ್ಚೇತನಕ್ಕೆ ಮುಂದಾಗಿದೆ.

ಹೃದಯಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕ ಮತ್ತು ಬಾಲಕಿಯರ ಶಾಲೆ. 1945ರಲ್ಲಿ ಅಂದಿನ ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 81 ವರ್ಷಗಳ ಇತಿಹಾಸ ಹೊಂದಿದೆ. ನಂಜನಗೂಡಿನ ಅನೇಕ ಹಿರಿಯರು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಸದ್ವೈದ್ಯ ಶಾಲೆಯ ಬಿ.ವಿ. ಬಾಲಸುಬ್ರಹ್ಮಣ್ಯಂ, ನಡೆದಾಡುವ ಕಾನೂನು ಕೋಶ ಎಂದೇ ಹೆಸರಾದ ಸಿ.ಕೆ.ಎನ್. ರಾಜ ಸೇರಿದಂತೆ ಹಲವು ಗಣ್ಯರು ಈ ಶಾಲೆಯ ವಿದ್ಯಾರ್ಥಿಗಳಾಗಿದ್ದರು.

ಖಾಸಗಿ ಶಾಲೆಗಳ ವ್ಯಾಮೋಹ

ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳ ಮೇಲಿನ ಪೋಷಕರ ಒಲವು ಹೆಚ್ಚಾಗಿರುವುದರಿಂದ ಸರ್ಕಾರಿ ಶಾಲೆಯ ಪ್ರವೇಶಾತಿ ಸಂಖ್ಯೆ ಕುಸಿದಿದೆ. ಒಂದರಿಂದ ಏಳನೇ ತರಗತಿವರೆಗೆ ನಡೆಯುತ್ತಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದು, ಮೂಲಸೌಕರ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ.

ಇದನ್ನು ಮನಗಂಡ ಹಳೆಯ ವಿದ್ಯಾರ್ಥಿಗಳು ತಂಡ ಶಾಲೆಯ ಅಭಿವೃದ್ಧಿಗಾಗಿ ಸಂಘಟಿತ ಪ್ರಯತ್ನ ಆರಂಭಿಸಿದೆ. ತಮ್ಮ ಕೈಲಾದಷ್ಟು ಹಣ ವಿನಿಯೋಗಿಸುವುದರ ಜತೆಗೆ ದಾನಿಗಳ ನೆರವನ್ನೂ ಪಡೆದು ಕಂಪ್ಯೂಟರ್, ಮೇಜು, ಕುರ್ಚಿಗಳು ಹಾಗೂ ಸ್ಮಾರ್ಟ್ ತರಗತಿಗೆ ಅಗತ್ಯವಾದ ಪರಿಕರಗಳನ್ನು ಒದಗಿಸಿದ್ದಾರೆ.

ಕಂಪ್ಯೂಟರ್ ಶಿಕ್ಷಣ, ಯೋಗ ತರಗತಿ, ಧ್ಯಾನಕ್ಕೆ ವ್ಯವಸ್ಥೆ ಹಾಗೂ ಉಚಿತ ಪಠ್ಯಪುಸ್ತಕ ವಿತರಣೆ ಸೇರಿದಂತೆ ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಿ ಶಾಲೆಯತ್ತ ಪೋಷಕರ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಶಿಥಿಲಗೊಂಡ ಅಂಗನವಾಡಿ ಕಟ್ಟಡ

ಶಾಲೆಯ ಮತ್ತೊಂದು ಭಾಗದಲ್ಲಿ ಅಂಗನವಾಡಿ ಕೇಂದ್ರವೂ ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡದ ಮೇಲ್ಛಾವಣಿಯ ಗಾರೆ ಉದುರುತ್ತಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡದ ದುರಸ್ತಿ ತುರ್ತಾಗಿ ಆಗಬೇಕಿದೆ.

ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಈ ಹಿಂದೆ ಶಾಲೆಗೆ ಭೇಟಿ ನೀಡಿ ಕೆಲವು ದುರಸ್ತಿ ಕಾಮಗಾರಿಗಳನ್ನು ಮಾಡಿಸಿಕೊಟ್ಟಿದ್ದಾರೆ. ಅವರ ಸೂಚನೆಯಂತೆ ಉತ್ತಮ ಶೌಚಾಲಯವನ್ನೂ ನಿರ್ಮಿಸಲಾಗಿದೆ. ಆದರೂ ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿವೆ.

ಸ್ವಚ್ಛತೆಗೆ ನಗರ ಸಭೆ

ಶಾಲೆಯ ಪಕ್ಕದಲ್ಲೇ ಪೊಲೀಸ್ ಠಾಣೆ ಇದ್ದರೂ ಕಿಡಿಗೇಡಿಗಳ ಹಾವಳಿ ಕಡಿಮೆಯಾಗಿಲ್ಲ. ಸಂಜೆ ವೇಳೆ ಶಾಲೆಯ ಆವರಣ ತಿಂಡಿ-ತಿನಿಸುಗಳ ಕೇಂದ್ರವಾಗಿ ಮಾರ್ಪಡುತ್ತಿದ್ದು, ಶಾಲೆಯ ಆಸ್ತಿ ಮತ್ತು ಪರಿಸರದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ.

ಶಾಲೆಯ ಕಾಂಪೌಂಡ್ ಶಿಥಿಲಗೊಂಡು ಹಲವು ಕಡೆ ಕುಸಿದಿರುವುದರಿಂದ ಕಿಡಿಗೇಡಿಗಳ ಪ್ರವೇಶಕ್ಕೆ ಅವಕಾಶವಾಗಿದೆ. ಶಾಲೆಯ ಸುತ್ತಮುತ್ತ ಕಸದ ರಾಶಿ ಸಂಗ್ರಹವಾಗಿದ್ದು, ಸ್ವಚ್ಛತೆಯ ಕೊರತೆಯೂ ಎದ್ದು ಕಾಣುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ವಾರ್ಡ್‌ನ ನಗರಸಭಾ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳು ಗಮನಹರಿಸಿ ಕಾಂಪೌಂಡ್ ದುರಸ್ತಿ ಮತ್ತು ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂಬುದು ಹಳೆಯ ವಿದ್ಯಾರ್ಥಿಗಳ ಒತ್ತಾಯ.

ಶಾಲೆಯ ಆಸ್ತಿ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಕೋರಿ ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಶಾಲೆಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಶಾಲೆಯ ಮಹತ್ವ ಮತ್ತು ಅಭಿವೃದ್ಧಿಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಧ್ಯಮಗಳಲ್ಲಿ ಅಗತ್ಯ ಪ್ರಚಾರ ನೀಡಿ, ಕರಪತ್ರಗಳನ್ನೂ ಹಂಚಲಾಗಿದೆ.

ಹಲವರ ಬದುಕಿಗೆ ಭದ್ರ ಬುನಾದಿಯಾಗಿದ್ದ ಈ ಐತಿಹಾಸಿಕ ಶಾಲೆಯನ್ನು ಮತ್ತೆ ಅಭಿವೃದ್ಧಿಯ ಹಾದಿಗೆ ತರಲು ಹಳೆಯ ವಿದ್ಯಾರ್ಥಿಗಳು ಕೈಗೊಂಡಿರುವ ಪ್ರಯತ್ನಕ್ಕೆ ಸಾರ್ವಜನಿಕರು, ದಾನಿಗಳು, ಶಿಕ್ಷಣ ಇಲಾಖೆ ಹಾಗೂ ನಗರಸಭೆ ಕೈಜೋಡಿಸಬೇಕಿದೆ. ಶಾಲೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಕಿಡಿಗೇಡಿಗಳ ಹಾವಳಿ ತಡೆದು ಮಕ್ಕಳಿಗೆ ಸುರಕ್ಷಿತ ಕಲಿಕಾ ವಾತಾವರಣ ನಿರ್ಮಿಸಬೇಕಿದೆ.

ಹಳೆಯ ವಿದ್ಯಾರ್ಥಿಗಳ ಸಂಘಟಿತ ಪ್ರಯತ್ನ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.