‘ಹೂ’ ಮಳೆಯಲ್ಲಿ ಶಿಸ್ತುಬದ್ಧ ದಸರಾ ಜಂಬೂಸವಾರಿ

Published : Oct 03, 2025, 07:38 AM IST
Mysuru Dasara 2025

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ಗುರುವಾರ ಹೂ ಮಳೆಯ ನಡುವೆಯು ಅತ್ಯಂತ ಶಿಸ್ತುಬದ್ಧ ಹಾಗೂ ಅದ್ಧೂರಿಯಾಗಿ ನಡೆದು ಲಕ್ಷಾಂತರ ಮಂದಿಯ ಮನಸೂರೆಗೊಂಡಿತು.

 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ಗುರುವಾರ ಹೂ ಮಳೆಯೂ ನಡುವೆಯು ಅತ್ಯಂತ ಶಿಸ್ತುಬದ್ಧ ಹಾಗೂ ಅದ್ಧೂರಿಯಾಗಿ ನಡೆದು ಲಕ್ಷಾಂತರ ಮಂದಿಯ ಮನಸೂರೆಗೊಂಡಿತು.

ಈ ಬಾರಿ ಹೆಚ್ಚು ಬಿಸಿಲಿಲ್ಲದ ಆಹ್ಲಾದಕರ ವಾತಾವರಣದಲ್ಲಿ ಜಂಬೂಸವಾರಿ ಆರಂಭವಾಯಿತಾದರೂ ನಂತರ ಮೂರು ಬಾರಿ ಹೂ ಮಳೆ. ಒಮ್ಮೆ ಸ್ವಲ್ಪ ಜೋರು ಹನಿಗಳು ಬಿದ್ದವು. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೆರವಣಿಗೆಯು ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು.

ಅರಮನೆಯ ಉತ್ತರದಲ್ಲಿರುವ ‘ಬಲರಾಮ’ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 1ರಿಂದ 1.18ರವರೆಗೆ ಸಲ್ಲುವ ಶುಭ ಧನುರ್‌ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು. ಸತತ ಆರನೇ ಬಾರಿಗೆ 750 ಕೇಜಿ ತೂಕದ ಚಿನ್ನದ ಅಂಬಾರಿಯನ್ನು ಗಜರಾಜ ‘ಅಭಿಮನ್ಯು’ ಹೊತ್ತು ಸಂಗಾತಿಗಳಾದ ‘ಕಾವೇರಿ’ ಹಾಗೂ ‘ರೂಪಾ’ ಜೊತೆ ಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಾ ಅರಮನೆ ಆವರಣದ ವಿಶೇಷ ವೇದಿಕೆ ಎದುರು ಬಂದವು. ಸಂಜೆ 4.44ರಲ್ಲಿ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ನೆರವೇರಿಸಿದರು.

ಪುಷ್ಪಾರ್ಚನೆ ಆಗುತ್ತಿದ್ದಂತೆಯೇ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು. ನಂತರ ಅಂಬಾರಿ ಆನೆಯು ಪೊಲೀಸ್‌ ಅಶ್ವದಳದ ಬೆಂಗಾವಲಿನಲ್ಲಿ ಸಾಗಿ, ರಾಜರ ಕಾಲದ ಗತವೈಭವವನ್ನು ನೆನಪಿಸಿತು.

ಮೆರವಣಿಗೆಯು ಅರಮನೆಯಿಂದ ಸಂಪೂರ್ಣವಾಗಿ ಹೊರಗೆ ಹೋಗಲು ಸುಮಾರು ಎರಡು ತಾಸು ಬೇಕಾಯಿತು. ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸಯ್ಯಾಜಿರಾವ್‌ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ನ್ಯೂ ಸಯ್ಯಾಜಿರಾವ್‌ ರಸ್ತೆ, ಹೈವೆ ವೃತ್ತದ ಮೂಲಕ ಐದು ಕಿ.ಮೀ. ದೂರದ ಬನ್ನಿಮಂಟಪ ತಲುಪಿತು. ಅರಮನೆ ಆವರಣದಲ್ಲಿ ಮಾತ್ರವಲ್ಲದೇ ಮೆರವಣಿಗೆ ಸಾಗಿದ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ನಿಂತು, ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಸಂಜೆ ಬನ್ನಿಮಂಟಪದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಿತು. ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಗೌರವ ವಂದನೆ ಸ್ವೀಕರಿಸಿದರು. ಇದರೊಂದಿಗೆ ಕಳೆದ ಹನ್ನೊಂದು ದಿನಗಳಿಂದ ನಡೆಯತ್ತಿದ್ದ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

PREV
Read more Articles on

Recommended Stories

ಆನೆಗಳ ಸೊಂಡಲು, ಕಿವಿ, ಕಾಲುಗಳಿಗೆ ಅಲಂಕಾರ...
ಅಂಬಾರಿ ಹೊತ್ತು ''ಸಿಕ್ಸರ್'' '' ಬಾರಿಸಿದ ಅಭಿಮನ್ಯು...!