ನಾಳೆ ಕರ್ನಾಟಕಕ್ಕೆ ಮೋದಿ: ವಿವಿಧ ಯೋಜನೆಗೆ ಚಾಲನೆ

Published : Nov 12, 2026, 09:54 AM IST
Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರು ಹಾಗೂ ಮೈಸೂರಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 15,600 ಕೋಟಿ ರು.ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರು ಹಾಗೂ ಮೈಸೂರಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 15,600 ಕೋಟಿ ರು.ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ಬೆಂಗಳೂರು ಮೆಟ್ರೋ ರೈಲು, ಮಂಗಳೂರು-ಬೆಂಗಳೂರು ವಂದೇ ಭಾರತ್‌ ರೈಲು, ಮೈಸೂರು ಪ್ಲಾನೆಟೋರಿಯಂ ಸೇರಿ ಹಲವು ಪ್ರಮುಖ ಯೋಜನೆಗಳಿವೆ.

ಬೆಳಗ್ಗೆ 10:45ಕ್ಕೆ, ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 12:45ಕ್ಕೆ ಸುಮಾರು 3,470 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿ, ತಾವರೆಕೆರೆಯಿಂದ ಐಐಎಂ ಬೆಂಗಳೂರು ನಿಲ್ದಾಣದ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ.

ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ

ಬಳಿಕ 1:15ಕ್ಕೆ ಬೆಂಗಳೂರಿನಲ್ಲಿ 15,600 ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿ, ಏಕಕಾಲಕ್ಕೆ ಕೆಲವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಲಿದ್ದಾರೆ.

ಇದರಲ್ಲಿ ಮಂಗಳೂರಿನಲ್ಲಿ 850 ಕೋಟಿ ರು. ವೆಚ್ಚದ, 80,000 ಮೆಟ್ರಿಕ್ ಟನ್‌ಗಳಷ್ಟು ಸಂಗ್ರಹಣಾ ಸಾಮರ್ಥ್ಯದ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಣಾಗಾರದ ಲೋಕಾರ್ಪಣೆ, ಎಂಆರ್‌ಪಿಎಲ್‌ನ ದೇವಂಗೊಂತಿ ಮಾರ್ಕೆಟಿಂಗ್ ಟರ್ಮಿನಲ್, ಲೋಕಾಪರ್ಕಣೆ, ಹರಲಕುಂಟೆಯಲ್ಲಿ ಗೇಲ್‌ನ ಸಂಕುಚಿತ ಜೈವಿಕ ಅನಿಲ ಘಟಕಕ್ಕೆ ಅಡಿಪಾಯ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 4 (ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ) ಪುನರಾಭಿವೃದ್ಧಿ ಮಾಡಿದ ರೈಲು ನಿಲ್ದಾಣಗಳ ಉದ್ಘಾಟನೆ, ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ನಡುವೆ ವಿದ್ಯುದ್ದೀಕರಣಗೊಂಡ 55 ಕಿ.ಮೀ ರೈಲು ಮಾರ್ಗದ ಲೋಕಾರ್ಪಣೆ, ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವ ಕಾರ್ಯಕ್ರಮ ಸೇರಿವೆ.

ನಂತರ, ಅವರು ಮೈಸೂರಿಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ 3:30 ಕ್ಕೆ ‘ಭಾರತ ವನ್’ನಲ್ಲಿ ನಡೆಯುವ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಸುಮಾರು 4 ಗಂಟೆಗೆ, ‘ಕಾಸ್ಮೋಸ್-ಮೈಸೂರು ಪ್ಲಾನೆಟೋರಿಯಂ’ ಅನ್ನು ಉದ್ಘಾಟಿಸಲಿದ್ದಾರೆ.

ಯಾವುದಕ್ಕೆ ಚಾಲನೆ?

- ಬೆಂಗಳೂರಿನ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಪಿಂಕ್ ಲೈನ್ ಮೆಟ್ರೋಗೆ ಚಾಲನೆ

- ಮಂಗಳೂರಿನ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಣಾಗಾರದ ಲೋಕಾರ್ಪಣೆ

- ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಐಷಾರಾಮಿ ಎಕ್ಸ್‌ಪ್ರೆಸ್‌ಗೆ ಚಾಲನೆ

- ಮೈಸೂರಿಗೂ ಭೇಟಿ. ಸಂಜೆ 4ಕ್ಕೆ ‘ಕಾಸ್ಮೋಸ್-ಮೈಸೂರು ಪ್ಲಾನೆಟೋರಿಯಂ’ ಉದ್ಘಾಟನೆ

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.
Read more Articles on

Recommended Stories

ಮೈಸೂರಿಗೆ ಕರ್ನಾಟಕದ ‘ಭರವಸೆಯ ಸ್ವಚ್ಛ ನಗರ’ ಗರಿ
2027ಕ್ಕೆ ಮೂರು ದಿನ ವಿಶ್ವ ಕನ್ನಡ ಸಮ್ಮೇಳನ, ಮೊಯ್ಲಿ ಅಧ್ಯಕ್ಷತೆ: ಡಿಕೆ