ಮುಡಾ ಗದ್ದಲ, ಲೋಕಾಯುಕ್ತ, ಇ.ಡಿ. ತನಿಖೆಯ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗುರುವಾರ ಅದ್ಧೂರಿ ಚಾಲನೆ ಸಿಗಲಿದ್ದು, ಈಗಾಗಲೇ ನಾಡಹಬ್ಬ ಆಚರಣೆಗೆ ಸಂಬಂಧಿಸಿದ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಮುಡಾ ಗದ್ದಲ, ಲೋಕಾಯುಕ್ತ, ಇ.ಡಿ. ತನಿಖೆಯ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗುರುವಾರ ಅದ್ಧೂರಿ ಚಾಲನೆ ಸಿಗಲಿದ್ದು, ಈಗಾಗಲೇ ನಾಡಹಬ್ಬ ಆಚರಣೆಗೆ ಸಂಬಂಧಿಸಿದ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.
ಬೆಳಗ್ಗೆ 9.15 ರಿಂದ 9.45 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಅವರು ಈ ಬಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಈಶ್ವರ ಖಂಡ್ರೆ, ಭೈರತಿ ಸುರೇಶ್ ಭಾಗವಹಿಸುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು.
ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗಿ ಇದು 7ನೇ ದಸರಾ. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ, ಕೆರೆ-ಕಟ್ಟೆ-ಜಲಾಶಯಗಳು ಭರ್ತಿಯಾಗಿರುವುದರಿಂದ ವೈಭವಯುತವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಸಿದ್ದರಾಮಯ್ಯನವರು ಈಗಾಗಲೇ ಸುಮಾರು 40 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ.
ದಸರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ, ವೃತ್ತಗಳನ್ನು ವಿದ್ಯುದ್ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದು, ಅರಮನೆ ಸೇರಿ ಇಡೀ ಮೈಸೂರು ನಗರದಲ್ಲಿ ರಾತ್ರಿ ವೇಳೆ ‘ಕಿನ್ನರಲೋಕ’ವೇ ಸೃಷ್ಟಿಯಾಗಿದೆ.
ಈಗಾಗಲೇ ''''ಅಭಿಮನ್ಯು'''' ನೇತೃತ್ವದ ಗಜಪಡೆ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದು, ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ರಾಜಬೀದಿಗಳಲ್ಲಿ ತಾಲೀಮು ನಡೆಸುತ್ತಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ ನಡಿಗೆ, ಮರದ ಅಂಬಾರಿ ಸೇರಿ ಭಾರ ಹೊರುವ ತಾಲೀಮು, ಪಿರಂಗಿ ಗಾಡಿಗಳಿಂದ ಸಿಡಿಮದ್ದು ಸಿಡಿಸುವ ತಾಲೀಮಿಗೆ ಅವು ಹೊಂದಿಕೊಂಡಿವೆ.
ಯುವ ದಸರಾಗೂ ಚಾಲನೆ: ನಾಡಹಬ್ಬದಲ್ಲಿ ಅತ್ಯಂತ ಹೆಚ್ಚು ಜನ ಸೇರುವ ಯುವದಸರೆಯನ್ನು ಈ ಬಾರಿ ಮಹಾರಾಜ ಕಾಲೇಜು ಮೈದಾನದಿಂದ ವರ್ತುಲ ರಸ್ತೆ ಸಮೀಪದ ಉತ್ತನಹಳ್ಳಿ ಬಳಿಗೆ ಸ್ಥಳಾಂತರಿಸಲಾಗಿದೆ. ಶ್ರೇಯಾ ಘೋಷಾಲ್, ಎ.ಆರ್.ರೆಹಮಾನ್, ಇಳಯರಾಜ ಮತ್ತಿತರ ಸಂಗೀತ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಯುವ ದಸರೆಗೆ ಚಾಲನೆ ನೀಡುವರು.
ಇನ್ನು ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲು ಸಜ್ಜಾಗಿದ್ದು, ಈ ಬಾರಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಸಂಸದರಾಗಿಯೂ ಆಯ್ಕೆಯಾಗಿರುವುದು ವಿಶೇಷ.
ಇಂದಿನ ಕಾರ್ಯಕ್ರಮಗಳು
ಮೊದಲ ದಿನವಾದ ಗುರುವಾರ ಬೆಳಗ್ಗೆ 11.30ಕ್ಕೆ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಇದೇ ವೇಳೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳವನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸುವರು. ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಸಂಜೆ 4ಕ್ಕೆ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಜೆ 4ಕ್ಕೆ ಸಿದ್ದಾರ್ಥನಗರದ ಕಾವಾದಲ್ಲಿ ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರದಲ್ಲಿ ರಚಿಸಲಾದ ಕಲಾಕೃತಿಗಳ ಪ್ರದರ್ಶನ, ಲಲಿತಕಲೆ, ಕರಕುಶಲ ಕಲೆಗಳ ಕಲಾಕೃತಿಗಳ ಪ್ರದರ್ಶನ, ರಾಷ್ಟ್ರ ಮಟ್ಟದ ಕಲಾಕೃತಿಗಳ ಕಲಾ ಪ್ರದರ್ಶನ, ಸಂಜೆ 5ಕ್ಕೆ ರಂಗಾಯಣದಲ್ಲಿ ನವರಾತ್ರಿ ಜಾನಪದ ರಂಗ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, 6.30ಕ್ಕೆ ಸಯ್ಯಾಜಿ ರಾವ್ ರಸ್ತೆಯಲ್ಲಿ ವಿದ್ಯುದ್ದೀಪಾಲಂಕಾರವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್, 7.30ಕ್ಕೆ ವಸ್ತು ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.
ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ
ನಾಡಹಬ್ಬದ ಭಾಗವಾಗಿ ಗುರುವಾರ ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ಇದೇ ವೇಳೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪ್ರದಾನ ಮಾಡುವರು. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುವರು. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸುವರು.
12 ರಂದು ಜಂಬೂಸವಾರಿ, ಪಂಜಿನ ಕವಾಯತು
ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅ.12 ರಂದು ನಡೆಯಲಿದೆ. ಮಧ್ಯಾಹ್ನ 1.41 ರಿಂದ 2.10 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 4 ರಿಂದ 4.30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು. ಸಂಜೆ 7ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಗೌರವ ವಂದನೆ ಸ್ವೀಕರಿಸುವರು.